ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್. ನಗರ
ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸೇರಿದ ಕೆ.ಆರ್. ನಗರ ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ಮುಗಿದ ನಂತರ ಈಗ ಯಾವ ಅಭ್ಯರ್ಥಿ ಗೆಲುವು ಸಾಧಿಸುತ್ತಾರೆ ಮತ್ತು ಕ್ಷೇತ್ರದಲ್ಲಿ ಯಾವ ಪಕ್ಷ ಹೆಚ್ಚು ಲೀಡ್ ಪಡೆಯುತ್ತದೆ ಎಂಬ ವಿಚಾರ ತೀವ್ರ ಚರ್ಚೆಯಾಗುತ್ತಿದೆ.ಕ್ಷೇತ್ರದಲ್ಲಿ ಈ ಬಾರಿ ದಾಖಲೆಯ ಶೇ. 80 ಮತದಾನವಾಗಿರುವುದು ರಾಜಕೀಯ ಚರ್ಚೆಗೆ ಪ್ರಮುಖ ಕಾರಣವಾಗಿದ್ದು, ಎಲ್ಲಾ ಕಡೆಯೂ ಸೋಲು, ಗೆಲುವಿನ ಲೆಕ್ಕಾಚಾರ ನಡೆಯುತ್ತಿದೆ.
ಕೆ.ಆರ್. ನಗರ ವಿಧಾನಸಭಾ ಕ್ಷೇತ್ರ 2009 ರಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸೇರಿದ ನಂತರ ನಡೆದ ಎಲ್ಲಾ ಲೋಕಸಭಾ ಚುನಾವಣೆಯಲ್ಲಿಯೂ ಕಾಂಗ್ರೆಸ್ ಪಕ್ಷವೇ ಮುನ್ನಡೆ ಸಾಧಿಸಿರುವುದು ಈ ಕುತೂಹಲಕ್ಕೆ ಕಾರಣವಾಗಿದೆ. 15 ವರ್ಷಗಳ ಅವಧಿಯಲ್ಲಿ ನಡೆದ ಎರಡು ಉಪ ಚುನಾವಣೆಗಳಲ್ಲಿಯೂ ಕಾಂಗ್ರೆಸ್ ಪಕ್ಷವೇ ಮುನ್ನಡೆ ಪಡೆದಿರುವುದರಿಂದ ವಿಧಾನಸಭಾ ಚುನಾವಣೆ ಹೊರತುಪಡಿಸಿ ಲೋಕಸಭೆಯಲ್ಲಿ ಕ್ಷೇತ್ರ ಕಾಂಗ್ರೆಸ್ ಪಕ್ಷದ ಭದ್ರ ಕೋಟೆಯಾಗಿರುವುದು ರಾಜಕೀಯ ಆಸಕ್ತರು ಮತ್ತು ಪಕ್ಷಗಳ ಮುಖಂಡರನ್ನು ತುದಿಗಳಲ್ಲಿ ನಿಲ್ಲುವಂತೆ ಮಾಡಿದೆ.ಈ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವುದರಿಂದ ಎರಡು ಪಕ್ಷಗಳ ಮತಗಳ ಕ್ರೋಡೀಕರದಿಂದ ಈ ಬಾರಿ ಜೆಡಿಎಸ್ ಪಕ್ಷವೇ ಕ್ಷೇತ್ರದಲ್ಲಿ ಹೆಚ್ಚು ಮುನ್ನಡೆ ಪಡೆಯಲಿದೆ ಎಂಬುದು ಆ ಎರಡು ಪಕ್ಷಗಳ ಪ್ರಮುಖರ ವಿಶ್ವಾಸ.
ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಶಾಸಕ ಡಿ. ರವಿಶಂಕರ್ ಅವರು 27 ಸಾವಿರಕ್ಕೂ ಅಧಿಕ ಲೀಡ್ ಪಡೆದಿರುವುದು ಮತ್ತು ಈ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆಗಳು ಕೈ ಹಿಡಿಯುವುದರಿಂದ ಕಾಂಗ್ರೆಸ್ ಪಕ್ಷ ಹಿಂದೆಂದಿಗಿಂತಲೂ ಹೆಚ್ಚು ಲೀಡ್ ಪಡೆಯಲಿದೆ ಎಂಬುದು ಆ ಪಕ್ಷದ ಮುಖಂಡರ ಭರವಸೆ.ಇದರ ಜೊತೆಗೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರುವುದು ಹಾಗೂ ಕ್ಷೇತ್ರದ ವ್ಯಾಪ್ತಿಯಲ್ಲಿ ಏಳು ಶಾಸಕರು ಪಕ್ಷದವರೆ ಇರುವುದರಿಂದ ಅಭ್ಯರ್ಥಿ ಸ್ಟಾರ್ ಚಂದ್ರು ಅವರ ಗೆಲುವು ಶತಸಿದ್ಧ ಎಂದು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ನಂಬಿಕೊಂಡಿದ್ದು ಜೂ. 4 ರಂದು ನಾವು ವಿಜಯಪತಾಕೆ ಹಾರಿಸಲಿದ್ದೇವೆ ಎಂಬ ನಿರ್ಧಾರಕ್ಕೆ ಬಂದಿದ್ದಾರೆ.
ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರು ಆಗಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರೇ ಕ್ಷೇತ್ರದ ಅಭ್ಯರ್ಥಿಯಾಗಿರುವುದು ಮತ್ತು ಬಿಜೆಪಿ ಪಕ್ಷದ ಜೊತೆ ಮೈತ್ರಿ ಇರುವುದರಿಂದ ಮೋದಿ ಅಲೆ ಮತ್ತು ಎರಡು ಪಕ್ಷದ ಕಾರ್ಯಕರ್ತರ ಪರಿ ಅವರ ಪರವಾಗಿ ನಮಗೆ ವಿಜಯಮಾಲೆ ಒಲಿಯಲಿದ್ದು ಮತದಾರರು ಖಚಿತವಾಗಿಯೂ ಆಶೀರ್ವಾದ ಮಾಡಿದ್ದಾರೆ ಎಂದು ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ನಂಬಿಕೊಂಡಿದ್ದು ಈಗಾಗಲೇ ನಮ್ಮ ಜಯ ಖಚಿತವಾಗಿದೆ ಎಂಬ ಭರವಸೆಯ ಅಲೆಯಲ್ಲಿ ತೇಲುತ್ತಿದ್ದಾರೆ.ಕ್ಷೇತ್ರದಾದ್ಯಂತ ಎತ್ತ ನೋಡಿದರು ಈಗ ಎಚ್.ಡಿ. ಕುಮಾರಸ್ವಾಮಿ ಮತ್ತು ಸ್ಟಾರ್ ಚಂದ್ರು ಅವರ ಸೋಲು ಗೆಲುವಿನ ಲೆಕ್ಕಾಚಾರ ಹಾಗೂ ಪಡೆಯುವ ಮತಗಳ ಚರ್ಚೆ ಬಿರುಸಿನಿಂದ ಸಾಗಿದ್ದು ಫಲಿತಾಂಶ ಯಾರ ಪರವಾಗಿ ಬರುವುದೋ ಎಂಬುದನ್ನು ಕಾದು ನೋಡಬೇಕಿದೆ.
---ಕೋಟ್
28ಎಂವೈಎಸ್ 57ಮಂಡ್ಯ ಲೋಕಸಭಾ ಕ್ಷೇತ್ರದ ಎನ್.ಡಿ.ಎ ಅಭ್ಯರ್ಥಿಯಾಗಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಗೆಲುವು ಖಚಿತ. ಕ್ಷೇತ್ರದ ಮತದಾರರ ಆಶೀರ್ವಾದ ಮತ್ತು ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರ ಪರಿಶ್ರಮದ ಜೊತೆಗೆ ಮೋದಿ ಅಲೆಯೂ ನಮ್ಮ ಗೆಲುವಿಗೆ ಕಾರಣವಾಗಲಿದೆ. ಭವಿಷ್ಯದಲ್ಲಿ ಮಾಜಿ ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರದಲ್ಲಿ ಉನ್ನತ ಸ್ಥಾನಮಾನ ಪಡೆಯಲಿದ್ದು ಇದರಿಂದ ಕ್ಷೇತ್ರ ಮತ್ತು ರಾಜ್ಯದ ಅಭಿವೃದ್ಧಿಗೆ ಅನುಕೂಲವಾಗಲಿದೆ.
- ಸಾ.ರಾ. ಮಹೇಶ್. ಮಾಜಿ ಸಚಿವರು.ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಾಡುತ್ತಿರುವ ಅಭಿವೃದ್ಧಿ ಕೆಲಸಗಳು ಈ ಬಾರಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಎನ್.ಡಿ.ಎ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಕೈ ಹಿಡಿಯಲಿವೆ. ಇದರೊಂದಿಗೆ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಸಂಘಟಿತರಾಗಿ ಕೆಲಸ ಮಾಡಿದ್ದು ಇವುಗಳನ್ನು ಪರಿಗಣಿಸಿ ಮತದಾರ ಪ್ರಭುಗಳು ನಮಗೆ ಆಶೀರ್ವಾದ ಮಾಡಿರುವುದರಿಂದ ಗೆಲುವು ನಿಶ್ಚಿತವಾಗಿದೆ.- ಉಮಾಶಂಕರ್, ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ.
---ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರದ ಜನಪರ ಆಡಳಿತ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಬಡವರ ಪರವಾದ ಯೋಜನೆಗಳು ಈ ಚುನಾವಣೆಯಲ್ಲಿ ನಮ್ಮ ಕೈ ಹಿಡಿಯಲಿವೆ. ಇದರೊಂದಿಗೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚೆಲುವರಾಯಸ್ವಾಮಿ ಅವರ ನೇತೃತ್ವದಲ್ಲಿ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಶಾಸಕರು ಮತ್ತು ಪಕ್ಷದ ಮುಖಂಡರು ಕಾರ್ಯಕರ್ತರು ಪ್ರಾಮಾಣಿಕವಾಗಿ ಕೆಲಸ ಮಾಡಿರುವುದರಿಂದ ವಿಜಯಲಕ್ಷ್ಮಿ ಒಲಿಯಲಿದ್ದಾಳೆ.- ಡಿ. ರವಿಶಂಕರ್. ಶಾಸಕರು. ಕೆ.ಆರ್.ನಗರ.