ಸಾರಾಂಶ
ಧಾರವಾಡ:
ಲಿಂಗಾಯತರು ತಮ್ಮ ದುಡಿಮೆಯ ಒಟ್ಟು ಆದಾಯದಲ್ಲಿ ವರ್ಷಕ್ಕೆ ಶೇ. 2ರಿಂದ 4ರಷ್ಟು ಹಣವನ್ನು ಲಿಂಗಾಯತ ಧರ್ಮಗಳ ಅಭಿವೃದ್ಧಿಗೆ ಕೊಡುಗೆ ನೀಡಬೇಕಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯಾಧ್ಯಕ್ಷ ಶಂಕರ ಬಿದರಿ ಹೇಳಿದರು.ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯಲ್ಲಿ ಸಂಸ್ಥೆಯ 142ನೇ ಸಂಸ್ಥಾಪನಾ ದಿನ ಉದ್ಘಾಟಿಸಿದ ಅವರು, ಸಮಾಜದಿಂದ ಪಡೆದಿದ್ದನ್ನು ಈ ರೀತಿ ಸಮಾಜಕ್ಕೆ ಮರಳಿಸಿದರೆ ಲಿಂಗಾಯತ ಸಮಾಜ ಸುಧಾರಣೆಗೆ ಸಾಕಷ್ಟು ಅನುಕೂಲ ಆಗಲಿದೆ. ಎಲ್ಲ ಲಿಂಗಾಯತರು ಒಳ ಪಂಗಡಗಳನ್ನು ಮರೆತು ಒಟ್ಟಾಗಿ ಸಾಗಿದಾಗ ಲಿಂಗಾಯತ ಸಮಾಜಕ್ಕೆ ದೊಡ್ಡಬಲ ಸಿಗಲಿದೆ ಎಂದರು.
ಸನ್ಮಾನ ಸ್ವೀಕರಿಸಿದ ತಹಸೀಲ್ದಾರ್ ಡಿ.ಎಚ್. ಹೂಗಾರ, ಪೂರ್ವಜರು ತಮ್ಮ ಆಸ್ತಿ ಮಾರಿ ಇಲ್ಲವೇ ಅಡವಿಟ್ಟು ಶಿಕ್ಷಣ ಸಂಸ್ಥೆ ನಿರ್ಮಿಸಿ, ಉತ್ತರ ಕರ್ನಾಟಕದ ಶೈಕ್ಷಣಿಕ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆ. ಅವರ ಆಶಯದಂತೆ ಸಮಾಜದ ಬಡ ಮತ್ತು ಶೋಷಿತ ವರ್ಗದ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ಸಿಗುವಂತೆ ಆಗಬೇಕು ಎಂದು ಹೇಳಿದರು.ಸಂಸ್ಥೆಗೆ ಸೇವೆ ಸಲ್ಲಿಸಿದ ವಂಶಸ್ಥರಾದ ರಾಜಶೇಖರ ಬೋಜ, ಅವ್ವಪ್ಪಣ್ಣ ಅತ್ತಿಗೇರಿ ಕೈಗಾರಿಕಾ ತರಬೇತಿಯ ಅಧೀಕ್ಷಕ ಶಿವಲಿಂಗ ನೀಲಗುಂದ ಮಾತನಾಡಿದರು. ಶಿವಸಾಗರ ಹೊಟೇಲ್‌ನ ಮಾಲೀಕ, ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯ ಅವ್ವಪ್ಪಣ್ಣ ಅತ್ತಿಗೇರಿ ಕೈಗಾರಿಕಾ ತರಬೇತಿ ಸಂಸ್ಥೆಯ ಎಂಜಿನಿಯರಿಂಗ್ ವಿಭಾಗದ ವಾರ್ಷಿಕ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸುವ ವಿದ್ಯಾರ್ಥಿಗೆ ಶಿಷ್ಯವೇತನ ನೀಡಲು ಚೆಕ್ ಹಸ್ತಾಂತರಿಸಿದರು. ಸಂಸ್ಥೆಯ ಉಪಾಧ್ಯಕ್ಷ ವೀರಣ್ಣ ಯಳಲ್ಲಿ, ಕಾರ್ಯಾಧ್ಯಕ್ಷ ಆರ್.ಯು. ಬೆಳ್ಳಕ್ಕಿ, ಚಂದ್ರಕಾಂತ ಮಟ್ಟಿ, ಶಿವಪುತ್ರ ಅಗಡಿ, ಎಂ.ಎಫ್. ಪುರದನ್ನವರ, ವಿಜಯಕುಮಾರ ಮೋಹನ ಶಿಂತ್ರೆ ಇದ್ದರು.