ಬ್ಯಾಡಗಿ ತಾಲೂಕಿನ ಶೇ. 50ರಷ್ಟು ಗ್ರಾಮಗಳಲ್ಲಿ ನೀರಿನ ಅಭಾವ

| Published : Mar 20 2024, 01:15 AM IST

ಬ್ಯಾಡಗಿ ತಾಲೂಕಿನ ಶೇ. 50ರಷ್ಟು ಗ್ರಾಮಗಳಲ್ಲಿ ನೀರಿನ ಅಭಾವ
Share this Article
  • FB
  • TW
  • Linkdin
  • Email

ಸಾರಾಂಶ

ಮುಂಗಾರು ಮತ್ತು ಹಿಂಗಾರು ಕೈಕೊಟ್ಟು ಬರಪೀಡಿತವೆಂದು ಘೋಷಿಸಿದ ತಾಲೂಕಿನ ಶೇ. 50ರಷ್ಟು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಕೆರೆಗಳನ್ನು ತುಂಬಿಸುವ ಆಣೂರು ಏತ ನೀರಾವರಿ ಮಹಾತ್ವಾಕಾಂಕ್ಷಿ ಯೋಜನೆ ಪ್ರಸಕ್ತ ಬರಗಾಲದಲ್ಲಿ ತಾಲೂಕಿನ ಜನರಿಗೆ ನೆರವಿಗೆ ಬರುವ ಯಾವುದೇ ಲಕ್ಷಣಗಳಿಲ್ಲ, ಹೀಗಾಗಿ ರೈತರ ಬಾಡಿಗೆ ಕೊಳವೆ ಬಾವಿಗಳೇ ಗತಿ ಎನ್ನುವಂತಾಗಿದೆ.

ಶಿವಾನಂದ ಮಲ್ಲನಗೌಡರ

ಕನ್ನಡಪ್ರಭ ವಾರ್ತೆ ಬ್ಯಾಡಗಿ

ಮುಂಗಾರು ಮತ್ತು ಹಿಂಗಾರು ಕೈಕೊಟ್ಟು ಬರಪೀಡಿತವೆಂದು ಘೋಷಿಸಿದ ತಾಲೂಕಿನ ಶೇ. 50ರಷ್ಟು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಕೆರೆಗಳನ್ನು ತುಂಬಿಸುವ ಆಣೂರು ಏತ ನೀರಾವರಿ ಮಹಾತ್ವಾಕಾಂಕ್ಷಿ ಯೋಜನೆ ಪ್ರಸಕ್ತ ಬರಗಾಲದಲ್ಲಿ ತಾಲೂಕಿನ ಜನರ ನೆರವಿಗೆ ಬರುವ ಯಾವುದೇ ಲಕ್ಷಣಗಳಿಲ್ಲ, ಹೀಗಾಗಿ ರೈತರ ಬಾಡಿಗೆ ಕೊಳವೆ ಬಾವಿಗಳೇ ಗತಿ ಎನ್ನುವಂತಾಗಿದೆ.

ಕುಡಿಯುವ ನೀರು ಪ್ರತಿಯೊಬ್ಬ ಮನುಷ್ಯನ ಮೂಲಭೂತ ಅವಶ್ಯಕತೆ. ಆದರೆ, ಇತ್ತೀಚಿನ ದಿನಗಳಲ್ಲಿ ನೀರಿನ ಕೊರತೆ ಬಹಳ ವೇಗವಾಗಿ ಬೆಳೆಯುತ್ತಿದ್ದು, ಪ್ರಮುಖ ಸಮಸ್ಯೆಗಳಲ್ಲಿ ಒಂದಾಗಿ ಪರಿಣಮಿಸುತ್ತಿದೆ. ಬ್ಯಾಡಗಿ ತಾಲೂಕು ಇದಕ್ಕೆ ಹೊರತಾಗಿಲ್ಲ. ಹೀಗಾಗಿ, ಸಮರ್ಪಕವಾಗಿ ಮಳೆಯಾಗುವವರೆಗೆ ತಾಲೂಕಿನ ಜನರು ಆತಂಕದಲ್ಲೇ ಬದುಕುವಂತಾಗಿದೆ.ನೆರವಿಗೆ ಬಾರದ ಯೋಜನೆ: ರೈತರ ಹೋರಾಟಕ್ಕೆ ಮಣಿದು ಕೇವಲ ಎರಡು ವರ್ಷಗಳಲ್ಲಿ ₹ 314 ಕೋಟಿ ವೆಚ್ಚದ 32 ಕೆರೆಗಳನ್ನು ತುಂಬಿಸುವ ಆಣೂರು ಏತ ನೀರಾವರಿ ಯೋಜನೆ ಜಾರಿ ಮಾಡಲಾಗಿದೆ. ಆದರೆ, ಹಲವು ತಾಂತ್ರಿಕ ಕಾರಣಗಳಿಂದ ಕುಡಿಯುವ ನೀರು ಒದಗಿಸುವಲ್ಲಿ ವಿಫಲವಾಗಿದ್ದು, ಯೋಜನೆಯು ಇದ್ದೂ ಇಲ್ಲದಂತಾಗಿದೆ,

291ರಲ್ಲಿ ನೀರು: ತಾಲೂಕಿನ ಗ್ರಾಮೀಣ ಪ್ರದೇಶದ ಜನರಿಗೆ ಕುಡಿಯುವ ನೀರು ಪೂರೈಸುವ ನಿಟ್ಟಿನಲ್ಲಿ ಇಲ್ಲಿವರೆಗೂ 411 ಕೊಳವೆಬಾವಿಗಳನ್ನು ಕೊರೆಸಲಾಗಿದ್ದರೂ ಕೇವಲ 291ರಲ್ಲಿ ಅಲ್ಪಸ್ವಲ್ಪ ಮಟ್ಟಿನ ನೀರು ಉಳಿದುಕೊಂಡಿದೆ, ಹೀಗಾಗಿ ಇನ್ನಿತರ ಮೂಲಗಳನ್ನು ಅವಲಂಬಿಸಿ ನೀರಿನ ಪೂರೈಕೆ ಹಾಗೂ ನಿರ್ವಹಣೆ ಮಾಡಿಕೊಳ್ಳಬೇಕಾಗಿದೆ.

2 ಹಳ್ಳಿಗಳಲ್ಲಿ ಜೆಜೆಎಂ: ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಜಲಜೀವನ ಮಿಷನ್ ಹೆಸರಿನ ಮನೆ ಮನೆಗೆ ಗಂಗೆ ಯೋಜನೆಯು ವಿಫಲವಾಗಿದ್ದು, ತಾಲೂಕಿನ ಬನ್ನಿಹಟ್ಟಿ ಮತ್ತು ರಾಮಗೊಂಡನಹಳ್ಳಿಗಳಲ್ಲಿ ಮಾತ್ರ ಪೂರೈಕೆಯಾಗುತ್ತಿದೆ. ಮನೆಯ ಮುಂಭಾಗದಲ್ಲಿ ಪಾಳುಬಿದ್ದ ನಲ್ಲಿಗಳು ಕಾಣ ಸಿಗುತ್ತಿವೆ.

31 ಕೊಳವೆಬಾವಿಗಳ ಬಳಕೆ: ಮಲೆನಾಡು ಭಾಗವೆಂದೇ ಗುರುತಿಸಲ್ಪಡುವ 30ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕುಡಿಯುವ ನೀರಿನ ಕೊರತೆ ಎದುರಾಗಿದ್ದು, ಬಯಲುಪ್ರದೇಶದ ಹಳ್ಳಿಗರಲ್ಲಿ ಇನ್ನಷ್ಟು ಆತಂಕವನ್ನು ಸೃಷ್ಟಿಸಿದೆ, ಬಹುತೇಕ ಕಡೆಗಳಲ್ಲಿ ಅಂತರ್ಜಲ ಬತ್ತಿ ಹೋಗಿದ್ದು ಮಳೆಯಾಗದಿದ್ದರೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಅನಿವಾರ್ಯವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಕೆರೂಡಿ, ಕಳಗೊಂಡ, ಬನ್ನಿಹಟ್ಟಿ, ರಾಮಗೊಂಡನಳ್ಳಿ, ಹಿರೇಅಣಜಿ ಹಿರೇಹಳ್ಳಿ, ಕಾಗಿನೆಲೆಯಲ್ಲಿ ಒಟ್ಟು 31 ರೈತರ ಕೊಳವೆಬಾವಿ ಬಾಡಿಗೆ ಪಡೆದುಕೊಳ್ಳಲಾಗಿದೆ.ಕೊಳವೆಬಾವಿ ಕೊರೆಸಿದರೂ ನೀರಿಲ್ಲ: ನೀರಿನ ಸಮಸ್ಯೆ ಎದುರಿಸಲು ಮುಂದಾದ ತಾಲೂಕು ಪಂಚಾಯತ್ ಹಾಗೂ ಗ್ರಾಮೀಣ ನೀರು ಸರಬರಾಜು ಇಲಾಖೆಗಳು ಅಭಾವವಿರುವ ಕಡೆಗಳಲ್ಲಿ ಕೊಳವೆಬಾವಿಗಳನ್ನು ಕೊರೆಸಲು ಮುಂದಾಗಿದೆ. ಆದರೂ ಹನಿ ನೀರು ಸಹ ಸಿಗದಿರುವುದು ತಾಲೂಕಾಡಳಿತವನ್ನು ಇನ್ನಷ್ಟು ಆತಂಕಕ್ಕೀಡು ಮಾಡಿದೆ ಟ್ಯಾಂಕರ್‌ ನೀರೇ ಗತಿ: ಇನ್ನೊಂದು ವಾರದಲ್ಲಿ ಮಳೆಯಾಗದಿದ್ದಲ್ಲಿ ಇನ್ನಷ್ಟು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉಲ್ಬಣವಾಗುವ ಸಾಧ್ಯತೆಯಿದ್ದು, ಇದಕ್ಕಾಗಿ 15 ಗ್ರಾಮಗಳನ್ನು ಗುರುತಿಸಿರುವ ನೀರು ಸರಬರಾಜು ಇಲಾಖೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲು ನಿರ್ಧರಿಸಿದ್ದಾಗಿ ಮಾಹಿತಿ ಲಭ್ಯವಾಗಿದೆ. ಕೆರೆಗಳೆಲ್ಲಾ ಖಾಲಿ ಖಾಲಿ: ತಾಲೂಕಿನಲ್ಲಿರುವ 123 ಕೆರೆಗಳಲ್ಲಿ ಬುಡಪನಹಳ್ಳಿ ಏತ ನೀರಾವರಿಯಡಿ ಬರುವ ಕೆಲ ಕೆರೆಗಳನ್ನು ಹೊರತುಪಡಿಸಿ ಬಹುತೇಕ ಕೆರೆಗಳು ನೀರಿಲ್ಲದೇ ಬತ್ತಿ ಹೋಗಿವೆ. ನೀರು ತುಂಬಿಸುವ ಮಹತ್ವಾಕಾಂಕ್ಷಿ ಯೋಜನೆಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸದಿರುವುದರಿಂದ ಅಂತರ್ಜಲ ಕುಸಿತಕ್ಕೆ ಕಾರಣ ಎನ್ನಲಾಗುತ್ತಿದೆ.

ಅಧಿಕಾರಿಗಳೇ ಹೊಣೆಕುಡಿಯುವ ನೀರು ಪೂರೈಕೆ ನಮ್ಮ ಆದ್ಯತೆ. ಜನಪರ ಕಾಳಜಿಯನ್ನಿಟ್ಟು ಕುಡಿಯುವ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಲು ಸೂಚಿಸಿದ್ದೇನೆ. ಅಂತರ್ಜಲ ಬಹುತೇಕ ಬತ್ತಿಹೋಗಿದ್ದು, 800 ಅಡಿಗಳಷ್ಟು ಕೊರೆಸಿದರೂ ಭೂಮಿಯಲ್ಲಿ ನೀರು ಸಿಗುತ್ತಿಲ್ಲ. ಹೀಗಾಗಿ, ಪರ‍್ಯಾಯ ವ್ಯವಸ್ಥೆಗೆ ಸೂಚಿಸಿದ್ದೇನೆ. ತಪ್ಪಿದಲ್ಲಿ ಅಧಿಕಾರಿಗಳೇ ಹೊಣೆ ಎಂದು ಶಾಸಕ ಬಸವರಾಜ ಶಿವಣ್ಣನವರ ಎಚ್ಚರಿಸಿದರು.ಇತ್ತೀಚಿನ ಸಮುದಾಯಕ್ಕೆ ನೀರಿನ ಮೌಲ್ಯ ಅರ್ಥವಾಗುತ್ತಿಲ್ಲ, ಅನಗತ್ಯವಾಗಿ ಪೋಲು ಮಾಡುತ್ತಿದ್ದಾರೆ. ಸಮಸ್ಯೆಯಿರುವ ಕಡೆಗಳಲ್ಲಿ 2 ದಿನಗಳಿಗೊಮ್ಮೆ ನೀರು ಬಿಡಲಾಗುತ್ತಿದ್ದು, ಪರಿಸ್ಥಿತಿ ಅವಲೋಕಿಸಿ ನೀರು ಪೂರೈಸುವ ದಿನಗಳಲ್ಲಿ ಅಂತರ ಹೆಚ್ಚಿಸಲಾಗುವುದು ಎಂದು ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕಾಧಿಕಾರಿ ಕೆ.ಎಂ. ಮಲ್ಲಿಕಾರ್ಜುನ ಹೇಳಿದರು.ಮಳೆ ಕೊರತೆ ಪರಿಣಾಮ ಕಳೆದೆರಡು ವರ್ಷದಿಂದ ಭೂಮಿಯಲ್ಲಿ ನೀರಿನ ಕೊರತೆಯಾಗುತ್ತಿದೆ. ಅಷ್ಟಕ್ಕೂ ಇದು ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದೆ, ಮುಂಜಾಗ್ರತಾ ಕ್ರಮವಾಗಿ ರೈತರ ಕೊಳವೆಬಾವಿ ಸಹಕಾರ ಪಡೆಯಲು ನಿರ್ಧರಿಸಿದ್ದು, ಅದಕ್ಕೂ ಸಾಧ್ಯವಾಗದಿದ್ದಲ್ಲಿ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲಾಗುವುದು ಎಂದು ಪಂಚಾಯತ್ ರಾಜ್ಯ ಗ್ರಾಮೀಣ ನೀರು ಸರಬರಾಜು ಉಪವಿಭಾಗದ ಎಇಇ ಸುರೇಶ ಬೇಡರ ಹೇಳಿದರು.