ವಾಣಿಜ್ಯ ಮಳಿಗೆ ನಾಮಫಲಕಗಳಲ್ಲಿ ಶೇ. 60 ರಷ್ಟು ಕನ್ನಡ ಬಳಕೆ ಕಡ್ಡಾಯ: ಡಿಸಿ

| Published : Mar 12 2024, 02:01 AM IST

ವಾಣಿಜ್ಯ ಮಳಿಗೆ ನಾಮಫಲಕಗಳಲ್ಲಿ ಶೇ. 60 ರಷ್ಟು ಕನ್ನಡ ಬಳಕೆ ಕಡ್ಡಾಯ: ಡಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡ ಭಾಷಾ ಸಮಗ್ರ ಅಭಿವೃದ್ಧಿಗೆ ಅನುಗುಣವಾಗಿ ರಾಜ್ಯ ಸರ್ಕಾರದ ಇಲಾಖೆಗಳು, ಸಾರ್ವಜನಿಕ ಉದ್ಯಮಗಳು, ಶೈಕ್ಷಣಿಕ ಸಂಸ್ಥೆಗಳು, ಬ್ಯಾಂಕ್‌ಗಳು, ಹೋಟೆಲ್‌ಗಳ ನಾಮಫಲಕಗಳು ಮತ್ತು ಫಲಕದಲ್ಲಿರುವ ಹೆಸರುಗಳು ಹಾಗೂ ಸದರಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳ ಹೆಸರು ಮತ್ತು ಪದನಾಮ ಸೂಚಿಸುವ ಫಲಕಗಳಲ್ಲಿನ ಮೇಲಿನ ಅರ್ಧ ಭಾಗ ಕಡ್ಡಾಯವಾಗಿ ಕನ್ನಡದಲ್ಲಿ ಶೇ. 60, ಇತರೆ ಭಾಷೆ ಶೇ. 40 ಇರತಕ್ಕದ್ದು ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸೂಚನೆ ನೀಡಿದ್ದಾರೆ.

ಸರ್ಕಾರಿ ಇಲಾಖೆಗಳು ಮಾತ್ರವಲ್ಲ ಖಾಸಗಿ ಸಂಸ್ಥೆಗಳು ಕೂಡ ಆದೇಶ ಪಾಲಿಸಬೇಕು । ನಿಯಮ ಪಾಲನೆ ಮಾಡದಿದ್ದರೆ ವಾಣಿಜ್ಯ ಪರವಾನಗಿ ರದ್ದು,

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಕನ್ನಡ ಭಾಷಾ ಸಮಗ್ರ ಅಭಿವೃದ್ಧಿಗೆ ಅನುಗುಣವಾಗಿ ರಾಜ್ಯ ಸರ್ಕಾರದ ಇಲಾಖೆಗಳು, ಉದ್ಯಮಗಳು, ಸ್ವಾಯತ್ತ ಸಂಸ್ಥೆಗಳು, ಸಹಕಾರ ಮತ್ತು ಸಾರ್ವಜನಿಕ ಉದ್ಯಮಗಳು, ಶೈಕ್ಷಣಿಕ ಸಂಸ್ಥೆಗಳು, ಬ್ಯಾಂಕ್‌ಗಳು, ಇತರೆ ಹಣಕಾಸು ಸಂಸ್ಥೆಗಳು, ಖಾಸಗಿ ಕೈಗಾರಿಕೆಗಳು, ಹೋಟೆಲ್‌ಗಳ ನಾಮಫಲಕಗಳು ಮತ್ತು ಫಲಕದಲ್ಲಿರುವ ಹೆಸರುಗಳು ಹಾಗೂ ಸದರಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳ ಹೆಸರು ಮತ್ತು ಪದನಾಮ ಸೂಚಿಸುವ ಫಲಕಗಳಲ್ಲಿನ ಮೇಲಿನ ಅರ್ಧ ಭಾಗ ಕಡ್ಡಾಯವಾಗಿ ಕನ್ನಡದಲ್ಲಿ ಶೇ. 60, ಇತರೆ ಭಾಷೆ ಶೇ. 40 ಇರತಕ್ಕದ್ದು ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ನಾಮಫಲಕಗಳಲ್ಲಿ ಶೇ. 60 ರಷ್ಟು ಕನ್ನಡ ಕಡ್ಡಾಯ ಬಳಕೆ ಕುರಿತು ನಡೆದ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕರ್ನಾಟಕದಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಅನುಷ್ಠಾನ ಗೊಳಿಸುವ ಕುರಿತು ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ - 2022 ಮತ್ತು ತಿದ್ದುಪಡಿ 2024 ನ್ನು ಸಮರ್ಪಕ ವಾಗಿ ಜಾರಿಗೊಳಿಸುವಂತೆ ಸರ್ಕಾರ ಆದೇಶ ಮಾಡಿದ್ದು, ಪ್ರತಿಯೊಬ್ಬರೂ ಈ ಆದೇಶವನ್ನು ತಪ್ಪದೆ ಪಾಲಿಸಬೇಕೆಂದು ತಿಳಿಸಿದರು. ರಸ್ತೆಗಳು ಮತ್ತು ಬಡಾವಣೆ ಪ್ರದೇಶಗಳ ಹೆಸರು ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಗಳ ಮತ್ತು ಸ್ಥಳೀಯ ಪ್ರಾಧಿಕಾರ ಗಳ ಮೇಲ್ವಿಚಾರಣೆಯಲ್ಲಿ ಹಾಕಲಾಗಿರುವ ಫಲಕಗಳ ಮೇಲೆ ಪ್ರದರ್ಶಿಸಲಾಗುವ ವಿವರಗಳು ಕಡ್ಡಾಯವಾಗಿ ಕನ್ನಡದಲ್ಲಿರ ಬೇಕು. ಸರ್ಕಾರ ಅಥವಾ ಸ್ಥಳೀಯ ಪ್ರಾಧಿಕಾರ ಪ್ರಕಟಣೆಗೆ ಹೊರಡಿಸಿದ ಎಲ್ಲಾ ಟೆಂಡರ್ ಅಧಿಸೂಚನೆ, ಜಾಹೀರಾತು, ಅರ್ಜಿ ನಮೂನೆ, ಡಿಜಿಟಲ್ ನಮೂನೆ, ಪ್ರಮಾಣ ಪತ್ರ ಮತ್ತು ಅಧಿಸೂಚನೆಗಳು, ಸರ್ಕಾರ, ಸ್ಥಳೀಯ ಪ್ರಾಧಿಕಾರ, ಅನುದಾನಿತ ಅಥವಾ ಅನುದಾನ ರಹಿತ ಸಂಸ್ಥೆಗಳು ನಡೆಸುವ ಕಾರ್ಯಕ್ರಮಗಳ ಕುರಿತ ಕರಪತ್ರ, ಬ್ಯಾನರ್, ಪ್ಲೆಕ್ಸ್, ಎಲೆಕ್ಟ್ರಾನಿಕ್ ಪ್ರದರ್ಶನ ಫಲಕ, ಮಾಹಿತಿಗಳು, ನೋಟೀಸ್‌ಗಳು ಮುಂತಾದವು ಕನ್ನಡದಲ್ಲಿಯೇ ಇರಬೇಕು ಎಂದರು. ಸಾಧ್ಯವಾದಷ್ಟು ಮಟ್ಟಿಗೆ ರಾಜ್ಯದೊಳಗೆ ತಯಾರಿಸಿದ ಮತ್ತು ಮಾರಾಟವಾಗುವ ಎಲ್ಲಾ ಕೈಗಾರಿಕೆ ಮತ್ತು ಇತರೆ ಗ್ರಾಹಕ ಉತ್ಪನ್ನಗಳ ಹೆಸರು ಮತ್ತು ಅವುಗಳ ಬಳಕೆ ಕುರಿತಾದ ನಿದರ್ಶನಗಳು ಯಾವುದಾದರೂ ಇದ್ದಲ್ಲಿ ಇತರೆ ಭಾಷೆ ಜೊತೆಗೆ ಕನ್ನಡದಲ್ಲಿ ಇರತಕ್ಕದ್ದು ಎಂದು ಹೇಳಿದ ಅವರು, ರಾಜ್ಯದಲ್ಲಿ ಸಾರ್ವಜನಿಕರ ಮಾಹಿತಿಗೆ ಪ್ರಕಟಿಸಲಾದ ಜಾಹೀರಾತು, ಸೂಚನೆಗಳನ್ನು ಪ್ರದರ್ಶಿಸುವ ಎಲ್ಲಾ ಫಲಕಗಳಲ್ಲಿ ವಿಷಯಗಳ ನಿಗಧಿತ ಶೇಕಡವಾರು ಪ್ರಮಾಣ ಕನ್ನಡ ಭಾಷೆಯಲ್ಲಿರ ಬೇಕು ಎಂದು ಹೇಳಿದರು. ತಪ್ಪಿದ್ದಲ್ಲಿ ಯಾವುದೇ ಕೈಗಾರಿಕೆ, ಅಂಗಡಿ, ಫಾರ್ಮ್ ಮತ್ತು ವಾಣಿಜ್ಯ ಸಂಸ್ಥೆಗಳ ಮಾಲೀಕ ಅಥವಾ ಉಸ್ತುವಾರಿ ವ್ಯಕ್ತಿಗಳು ಕನ್ನಡ ಭಾಷೆ ಅನುಷ್ಠಾನಗೊಳಿಸುವಲ್ಲಿ ವಿಫಲರಾದರೆ ಸಂಬಂಧಪಟ್ಟ ಸಂಸ್ಥೆ ಹಾಗೂ ವ್ಯಕ್ತಿ ವಿರುದ್ಧ ನಿಯಮಾನುಸಾರ ದಂಡ ವಿಧಿಸಲಾಗುವುದು ಅಥವಾ ಲೈಸೆನ್ಸ್‌ನ್ನು ರದ್ದುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಸಭೆಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಗೋಪಾಲಕೃಷ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ರಮೇಶ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಂಜುನಾಥ್, ನಗರಸಭೆ ಪೌರಾಯುಕ್ತ ಕೃಷ್ಣಮೂರ್ತಿ ಹಾಜರಿದ್ದರು. 11 ಕೆಸಿಕೆಎಂ 1ಚಿಕ್ಕಮಗಳೂರಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ನಾಮಫಲಕಗಳಲ್ಲಿ ಶೇ. 60 ರಷ್ಟು ಕನ್ನಡ ಕಡ್ಡಾಯ ಬಳಕೆ ಕುರಿತು ಡಿಸಿ ಮೀನಾ ನಾಗರಾಜ್‌ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಜಿಪಂ ಸಿಇಓ ಡಾ. ಗೋಪಾಲಕೃಷ್ಣ ಇದ್ದರು.