ಸಾರಾಂಶ
ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಕಾರ್ಕಳ ಹೊಸಸಂಜೆ ಬಳಗ ವತಿಯಿಂದ ಮಹಿಳಾ ದಿನಾಚರಣೆ ನಡೆಯಿತು, ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾವಿದೆ, ತಾಳಮದ್ದಳೆ ಅರ್ಥದಾರಿ ಜಯಶ್ರೀ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಕನ್ನಡಪ್ರಭ ವಾರ್ತೆ ಕಾರ್ಕಳ
ಯಕ್ಷಗಾನ ಬಯಲಾಟ ಮತ್ತು ತಾಳಮದ್ದಳೆ ಕಲಾಪ್ರಕಾರದ ಎರಡು ಪ್ರಮುಖ ಅಂಗವಾಗಿದೆ. ತಾಳಮದ್ದಳೆಯಲ್ಲಿ ಮಾತುಗಾರಿಕೆಯ ಮೂಲಕ ರಸಲೋಕವನ್ನೇ ತೆರೆದಿಡುವ ಶಕ್ತಿಯಿದೆ. ಅನೇಕಾನೇಕ ವಿದ್ವಾಂಸರು ತಮ್ಮ ವಾಗ್ಝರಿ ಮೂಲಕ ಅದ್ಭುತವಾದ ಚರಿತ್ರೆಯನ್ನೇ ನಿರ್ಮಿಸಿದ್ದಾರೆ. ಯಕ್ಷಗಾನ ಅತ್ಯಂತ ಪ್ರಾಚೀನವಾಗಿದ್ದು, ಸಾಹಿತ್ಯ ಕಲೆ ಮತ್ತು ಸಂಸ್ಕೃತಿಯ ಅತ್ಯುತ್ತಮ ರಸಪಾಕವಾಗಿದೆ ಎಂದು ಯಕ್ಷಗಾನ ಕಲಾವಿದೆ, ತಾಳಮದ್ದಳೆ ಅರ್ಥದಾರಿ ಜಯಶ್ರೀ ಶೆಟ್ಟಿ ಹೇಳಿದರು.ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಕಾರ್ಕಳ ಹೊಸಸಂಜೆ ಬಳಗ ಆಯೋಜಿಸಿದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.ರೋಟರಿ ಕ್ಲಬ್ ಮಾಜಿ ಅಧ್ಯಕ್ಷೆ ಸುವರ್ಣಾ ನಾಯಕ್, ಮುನಿಯಾಲು ಸರ್ಕಾರಿ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕಿ ಅರುಣಾ ಎಸ್., ಹಿರಿಯ ನಾಗರಿಕ ಭಾಸ್ಕರ ಕಾರಂತ, ಕಾರ್ಕಳ ಪುರಸಭೆಯ ಮಾಜಿ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಯಕ್ಷಗಾನ ಗುರು ಹರೀಶ ಶೆಟ್ಟಿ ಸೂಡ, ವಿಜಯಾ ಬ್ಯಾಂಕ್ ನಿವೃತ್ತ ಸೀನಿಯರ್ ಮ್ಯಾನೇಜರ್ ಕೆ.ಎ. ಶೆಟ್ಟಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಸಾಹಿತ್ಯ ಸಂಘದ ಗೌರವಾಧ್ಯಕ್ಷ ತುಕಾರಾಮ ನಾಯಕ್ ಅಧ್ಯಕ್ಷತೆ ವಹಿಸಿದ್ದರು.ಜಯಲಕ್ಷ್ಮೀ ಶೆಟ್ಟಿ ಸ್ವಾಗತಿಸಿದರು. ಹೊಸಸಂಜೆ ಬಳಗದ ಅಧ್ಯಕ್ಷ ಆರ್. ದೇವರಾಯ ಪ್ರಭು ಕಾರ್ಯಕ್ರಮ ಸಂಯೋಜಿಸಿದ್ದರು. ಬೇಬಿ ಶೆಟ್ಟಿ ವಂದಿಸಿದರು.