ಸಾರಾಂಶ
ಹಗರಿಬೊಮ್ಮನಹಳ್ಳಿ: ಎಲ್ಲ ಶಿಕ್ಷಕರು ಸಂಪನ್ಮೂಲ ವ್ಯಕ್ತಿಗಳಾಗಿ ರೂಪುಗೊಂಡಾಗ ಗುಣಮಟ್ಟದ ಶೈಕ್ಷಣಿಕ ಕ್ರಾಂತಿಯಾಗಿ ಮಕ್ಕಳಲ್ಲಿ ಪರಿಪೂರ್ಣ ಕಲಿಕೆ ಸಾಧ್ಯವಾಗುತ್ತದೆ ಎಂದು ಡಿಡಿಪಿಐ ಯುವರಾಜ ನಾಯ್ಕ ತಿಳಿಸಿದರು.
ತಾಲೂಕಿನ ತಂಬ್ರಹಳ್ಳಿ ಗ್ರಾಮದ ಉರ್ದು ಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ದ್ವಿ ಭಾಷಾ ಮಾಧ್ಯಮ ಶಾಲೆಗಳ ಕಲಿಕಾ ಮೇಳ ಹಾಗೂ ಅಕ್ಷರ ಸಂತೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸರ್ಕಾರಿ ಶಾಲೆಗಳಲ್ಲಿಯೇ ಆಂಗ್ಲ ಮಾಧ್ಯಮ ವಿಭಾಗವನ್ನು ಸರ್ಕಾರ ಪ್ರಾರಂಭಿಸಿದ್ದು, ಇದು ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಳಕ್ಕೆ ಸಹಕಾರಿಯಾಗಿದೆ. ಆಂಗ್ಲಭಾಷೆ ಕಲಿಕೆ ಸರಳಗೊಳಿಸುವ ನಿಟ್ಟಿನಲ್ಲಿ ಕಲಿಕಾ ಮೇಳಗಳನ್ನು ಹಮ್ಮಿಕೊಳ್ಳಬೇಕು ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ಮೈಲೇಶ್ ಬೇವೂರು ಮಾತನಾಡಿ, ಮಕ್ಕಳ ಕಲಿಕಾಸಕ್ತಿ, ಸಾಮರ್ಥ್ಯಕ್ಕೆ ಪೂರಕವಾದ ವಿವಿಧ ರೀತಿಯ ಕಲಿಕಾ ಮೇಳಗಳ ಆಯೋಜನೆಗಳಿಂದ ಮಕ್ಕಳಲ್ಲಿ ಈಗಾಗಲೇ ಅಂತರ್ಗತವಾಗಿ ಅಡಗಿರುವ ಪ್ರತಿಭೆಯನ್ನು ಹೊರಗೆಳೆಯಲು ಸಾಧ್ಯ. ಮಕ್ಕಳ ಸರ್ವತೋಮುಖ ಪ್ರಗತಿಯ ನಿಟ್ಟಿನಲ್ಲಿ ಶಿಕ್ಷಕರು ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕು ಎಂದರು.
ಶಿಕ್ಷಕರ ಜತೆ ಮಕ್ಕಳೇ ರಚಿಸಿದ ವಿವಿಧ ಕಲಿಕಾ ಮಾದರಿಗಳು, ಮಕ್ಕಳಲ್ಲಿ ವ್ಯವಹಾರ ಕೌಶಲ್ಯ ವೃದ್ಧಿಸಲು ಮಾರುಕಟ್ಟೆಯ ಜ್ಞಾನ ಪರಿಚಯಕ್ಕಾಗಿ ಕೃಷಿ ಉಪಕರಣಗಳ ಮಳಿಗೆ, ಬಳೆ ಅಂಗಡಿ, ಬ್ಯೂಟಿ ಪಾರ್ಲರ್, ಬಟ್ಟೆ ಅಂಗಡಿ, ತಿನಿಸುಗಳ ಹೋಟೆಲ್, ಬುಕ್ ಸ್ಟಾಲ್, ಫೋಟೋ ಸ್ಟುಡಿಯೋ ಸೇರಿದಂತೆ ೧೫ಕ್ಕೂ ಹೆಚ್ಚು ಅಂಗಡಿಗಳನ್ನು ರಚಿಸಿ ಮಕ್ಕಳೆ ವ್ಯವಹಾರ ಮಾಡಿದರು. ಪಾಲಕರು ಖುಷಿಯಿಂದ ಮಕ್ಕಳ ಮಾರಾಟದಲ್ಲಿ ಸಾಮಗ್ರಿಗಳನ್ನು ಖರೀದಿಸಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹ್ಯಾಟಿ ಲೋಕಪ್ಪ, ಮುಖ್ಯಶಿಕ್ಷಕ ಎಲ್. ರೆಡ್ಡಿನಾಯ್ಕ, ಮಾತನಾಡಿದರು.ಗ್ರಾಪಂ ಅಧ್ಯಕ್ಷೆ ಅಧ್ಯಕ್ಷ ಏಣಿಗಿ ಪೂರ್ಣಿಮಾ, ಎಸ್‌ಡಿಎಂಸಿ ಅಧ್ಯಕ್ಷ ಸುಕುರ್ ಸಾಬ್, ಉಪಾಧ್ಯಕ್ಷ ಟಪಾಲ್ ರಾಜಸಾಬ್, ಗ್ರಾಪಂ ಸದಸ್ಯರಾದ ಮೆಹಬೂಬ್ ಬಾಷಾ, ಬಸಮ್ಮ, ಶಾಲಿಮಾ ಬೇಗಂ, ಸಿಆರ್‌ಪಿ ಕನಕಪ್ಪ, ಮುಖ್ಯಗುರು ಸಂಘದ ಅಧ್ಯಕ್ಷ ಕೃಷ್ಣನಾಯ್ಕ, ಸಂಪನ್ಮೂಲ ವ್ಯಕ್ತಿಗಳಾದ ಗುರುಮೂರ್ತಿ, ಪಂಪನಾಯ್ಕ, ನಾಗಮ್ಮ, ಶಿಕ್ಷಕರಾದ ಸೊನ್ನದ ಕೊಟ್ರೇಶ, ಇಟಿಗಿ ಪ್ರಭಾಕರ, ಮುಂಶಿರಾ ಬೇಗಂ, ರವಿಕುಮಾರ ಸಕ್ರಹಳ್ಳಿ, ಗ್ರಂಥಪಾಲಕ ಪಾಂಡುರಂಗಪ್ಪ ನಿರ್ವಹಿಸಿದರು.