ಚುನಾವಣೆ ಕರ್ತ್ಯವ್ಯ ಅಚ್ಚುಕಟ್ಟಾಗಿ ನಿರ್ವಹಿಸಿ

| Published : Mar 30 2024, 12:49 AM IST

ಚುನಾವಣೆ ಕರ್ತ್ಯವ್ಯ ಅಚ್ಚುಕಟ್ಟಾಗಿ ನಿರ್ವಹಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಚುನಾವಣೆಯ ಕಾರ್ಯದಲ್ಲಿರುವ ಸರ್ಕಾರಿ ಹಾಗೂ ಖಾಸಗಿ ವಲಯಗಳ ಅಧಿಕಾರಿಗಳು ಮತ್ತು ಇತರೆ ಅಧಿಕಾರಿಗಳು ಮತ್ತು ಸಿಬ್ಬಂದಿಯು ನಿಯಮಾನುಸಾರ ನಮೂನೆಗಳನ್ನು ಭರ್ತಿ ಮಾಡಿ ಅಂಚೆ ಮತಪತ್ರ ಪಡೆದು ಮತದಾನ ಮಾಡಬೇಕು.

ಹೊಸಪೇಟೆ: ವಿವಿಧ ಇಲಾಖೆಗಳ ಕರ್ತ್ಯವ್ಯದಲ್ಲಿರುವ ಸಿಬ್ಬಂದಿಗೆ ಅಂಚೆ ಮತ ಚೀಟಿ ಮೂಲಕ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಎಂ.ಎಸ್. ದಿವಾಕರ ಹೇಳಿದರು.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಸಂಜೆ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದದಲ್ಲಿ ಪೂರ್ವಸಿದ್ಧತೆ ಸಭೆಯಲ್ಲಿ ಮಾತನಾಡಿದರು.

ಚುನಾವಣೆಯ ಕಾರ್ಯದಲ್ಲಿರುವ ಸರ್ಕಾರಿ ಹಾಗೂ ಖಾಸಗಿ ವಲಯಗಳ ಅಧಿಕಾರಿಗಳು ಮತ್ತು ಇತರೆ ಅಧಿಕಾರಿಗಳು ಮತ್ತು ಸಿಬ್ಬಂದಿಯು ನಿಯಮಾನುಸಾರ ನಮೂನೆಗಳನ್ನು ಭರ್ತಿ ಮಾಡಿ ಅಂಚೆ ಮತಪತ್ರ ಪಡೆದು ಮತದಾನ ಮಾಡಬೇಕು. ಈ ಹಿನ್ನೆಲೆಯಲ್ಲಿ ಎವಿಇಎಸ್ ಕೆಟಗೇರಿ ಎಂದು ಗುರುತಿಸಿದ ವಿವಿಧ ವಲಯಗಳ ಮುಖ್ಯಸ್ಥರು ಈ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ನಿಗದಿತ ನಮೂನೆಯನ್ನು ಭರ್ತಿ ಮಾಡಿಸಿ ಅಂಚೆ ಮತಪತ್ರ ನೋಡಲ್ ಅಧಿಕಾರಿಗೆ ಸಲ್ಲಿಸುವ ಕಾರ್ಯವನ್ನು ಅತಿ ತುರ್ತಾಗಿ ಮಾಡಲು ಕ್ರಮ ವಹಿಸಬೇಕು ಎಂದರು.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಾಗಿದ್ದು, ಯಾವುದೇ ಕಡೆಗಳಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಗಳು ನಡೆಯದಂತೆ ಮುನ್ನೆಚ್ಚರಿಕೆ ಮತ್ತು ತಿಳಿವಳಿಕೆ ನೀಡಬೇಕು. ಸಭೆ-ಸಮಾರಂಭಗಳಿಗೆ ಅನುಮತಿ ಕೋರಿ ಸಲ್ಲಿಕೆಯಾಗುವ ಅರ್ಜಿಗಳಿಗೆ ಕಡ್ಡಾಯವಾಗಿ ಷರತ್ತುಗಳನ್ನು ವಿದಿಸಿ ಅನುಮತಿ ಪತ್ರ ನೀಡಬೇಕು ಎಂದರು.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಈಗಾಗಲೇ ಜಿಲ್ಲೆಯ ವಿವಿಧೆಡೆ ಸ್ಥಾಪಿಸಿರುವ ಚೆಕ್‌ಪೋಸ್ಟಗಳಲ್ಲಿ ವಾಹನಗಳ ತಪಾಸಣಾ ಕ್ರಮವನ್ನು ಬಿಗಿಗೊಳಿಸಬೇಕು. ೫೦ ಸಾವಿರಕ್ಕೂ ಅಧಿಕ ಹಣದ ದಾಖಲೆ ಖಚಿತಪಡಿಸಿಕೊಳ್ಳಬೇಕು. ಧರಿಸಿದ ಆಭರಣ ಹೊರತುಪಡಿಸಿ ದೊರೆಯುವ ಅಧಿಕ ಬೆಳೆಬಾಳುವ ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳಲು ಕ್ರಮ ವಹಿಸಬೇಕು ಎಂದರು.

ಅಪರ ಜಿಲ್ಲಾಧಿಕಾರಿ ಜಿ.ಅನುರಾಧ, ಡಿಎಚ್‌ಒ ಶಂಕರ್‌ನಾಯ್ಕ, ಆಹಾರ ಇಲಾಖೆ ಡಿಡಿ ಮಲ್ಲಿಕಾರ್ಜುನ ನಾಯ್ಕ, ವಾರ್ತಾಧಿಕಾರಿ ಗವಿಸಿದ್ದಪ್ಪ ಇತರರಿದ್ದರು.