ನಿಷ್ಕಲ್ಮಶ ಮನಸ್ಸಿನಿಂದ ಹರ ಪೂಜೆ ಮಾಡಿ: ಡಾ.ಗುರುಲಿಂಗ ಶ್ರೀ

| Published : Apr 05 2025, 12:50 AM IST

ಸಾರಾಂಶ

ನಮ್ಮನ್ನು ನಾವು ಸಮರ್ಪಣೆ ಮಾಡಿಕೊಂಡಾಗ ಮಾತ್ರ ಹರ ಪೂಜೆ ಸಫಲವಾಗುತ್ತದೆ

ಮುಂಡಗೋಡ: ಡಾಂಬಿಕತೆ, ತೋರಿಕೆಯ ಭಕ್ತಿ ಸಲ್ಲದು. ಆಸೆ ಆಮಿಷವನ್ನು ಬಿಟ್ಟು ನಿಷ್ಕಲ್ಮಶ ಮನಸ್ಸಿನಿಂದ ನಮ್ಮನ್ನು ನಾವು ಸಮರ್ಪಣೆ ಮಾಡಿಕೊಂಡಾಗ ಮಾತ್ರ ಹರ ಪೂಜೆ ಸಫಲವಾಗುತ್ತದೆ ಎಂದು ಹಾವೇರಿಯ ಅಗಡಿ ಅಕ್ಕಿಮಠದ ಡಾ. ಗುರುಲಿಂಗ ಶ್ರೀ ಹೇಳಿದರು.

ಗುರುವಾರ ರಾತ್ರಿ ಇಲ್ಲಿಯ ಬಸವಣ್ಣ ದೇವಾಲಯ ಬಯಲುರಂಗ ಮಂಟಪದಲ್ಲಿ ಬಸವಣ್ಣ, ವೀರಭದ್ರೇಶ್ವರ ದೇವರ ನೂತನ ರಥ ಲೋಕಾರ್ಪಣೆ ರಥೋತ್ಸವ ಹಾಗೂ ಲಕ್ಷ ದೀಪೋತ್ಸವದ ಅಂಗವಾಗಿ ಜೀವನ ದರ್ಶನ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದರು.

ದೇವರು ಏನನ್ನು ಕೂಡ ಅಪೇಕ್ಷೆ ಪಡುವುದಿಲ್ಲ. ದೇಹ ಒಂದು ಕಡೆ ಮನಸ್ಸು ಒಂದು ಕಡೆ ಇಟ್ಟುಕೊಂಡು ಎಷ್ಟೇ ಪೂಜೆ ಮಾಡಿದರೂ ಪ್ರಯೋಜನವಿಲ್ಲ. ಭಗವಂತ ಸೃಷ್ಟಿ ಮಾಡಿದ ಹಣ್ಣು, ಕಾಯಿ ಸೇರಿದಂತೆ ಮುಂತಾದ ವಸ್ತುಗಳನ್ನು ದೇವರಿಗೆ ಸಮರ್ಪಿಸುವುದರಲ್ಲಿ ಯಾವ ಅರ್ಥವೂ ಇಲ್ಲ. ಮನೆ ಕಟ್ಟುವಾಗ ಎಲ್ಲ ಕೋಣೆಯನ್ನು ದೊಡ್ಡದಾಗಿ ನಿರ್ಮಿಸಿಕೊಳ್ಳುತ್ತಾರೆ. ಆದರೆ ದೇವರ ಕೋಣೆ ಮಾತ್ರ ಚಿಕ್ಕದಾಗಿ ನಿರ್ಮಿಸಿಕೊಳ್ಳುತ್ತಾರೆ. ದೈವ ಭಕ್ತಿ ಎಂಬುವುದು ನಶಿಸಿಹೋಗುತ್ತಿದೆ. ಕಂಡ ಕಂಡ ದೇವರನ್ನು ಪೂಜಿಸುವ ಬದಲು ಒಬ್ಬ ದೇವರನ್ನು ಭಕ್ತಿಯಿಂದ ಪೂಜೆ ಮಾಡಿದರೆ ಸಾಕು. ಆತ್ಮವನ್ನು ಪರಮಾತ್ಮನನ್ನಾಗಿ ಮಾಡುವ ಶಕ್ತಿ ಇರುವುದು ಲಿಂಗಕ್ಕೆ ಮಾತ್ರ ಎಂದರು.

ನಮ್ಮ ಮೇಲೆ ನಮಗೆ ನಂಬಿಕೆ ಇಲ್ಲದಂತಾಗಿದೆ. ಇಂದಿನ ವೇಗದ ಜೀವನದಲ್ಲಿ ಬಿತ್ತನೆ ಮಾಡಿದ ತಕ್ಷಣ ಬೆಳೆ ಬರಬೇಕು. ತಕ್ಷಣ ಪರಿಹಾರವಾಗಬೇಕು. ಕಾಯುವ ತಾಳ್ಮೆ ನಮಗಿಲ್ಲ. ನಮ್ಮ ಮೇಲೆ ನಮಗೆ ನಂಬಿಕೆ ಇಲ್ಲದಂತಾದರೆ ಬೇರೆಯವರ ಬದುಕನ್ನು ಹೇಗೆ ನಿರ್ಮಿಸಲು ಸಾಧ್ಯ. ಬೇರೆಯವರಿಗೆ ಕಣ್ಣೀರು ಹಾಕಿಸುವ ಬದಲು ಇನ್ನೊಬ್ಬರ ಕಣ್ಣೀರು ಒರೆಸುವುದೇ ನಿಜವಾದ ಮಾನವ ಧರ್ಮ. ಮನುಷ್ಯ ಮನುಷ್ಯನಲ್ಲಿ ಜಾತಿ ಮಾಡಿಕೊಂಡಿದ್ದಾರೆ ಎಂದರು.

ವಿಶ್ವ ವಿದ್ಯಾಲಯಗಳಲ್ಲಿ ಪದವಿ ಪಡೆಯುತ್ತಾರೆ. ಆದರೆ ತಮ್ಮ ಜೀವನದ ಬಗ್ಗೆ ಅರ್ಥ ಮಾಡಿಕೊಳ್ಳುತ್ತಿಲ್ಲ. ಹಿರಿಯರ ಬಗ್ಗೆ ಗೌರವವಿಲ್ಲ. ಸಹಾಯ, ಸಹಕಾರ ಮನೋಭಾವವಿಲ್ಲ. ಸಂಬಂಧಗಳಿಗೆ ಬೆಲೆ ಇಲ್ಲದಂತಾಗಿದೆ. ಪ್ರೀತಿ, ವಿಶ್ವಾಸಕ್ಕೆ ಜಾಗವಿಲ್ಲದಂತೆ ನಾಲ್ಕು ಗೋಡೆಗಳ ಮಧ್ಯ ಯಂತ್ರಗಳಂತೆ ಬದುಕು ಸಾಗಿಸುತ್ತಿದ್ದೇವೆ. ಯಾರಿಗೂ ಸೇವೆ ಮಾಡುವ ಮನೋಭಾವ ಇಲ್ಲ ಎಂದರು.

ಸ್ವಾಮಿಗಳಿಗೆ ನಮಸ್ಕಾರ ಮಾಡದಿದ್ದರೂ ಪರವಾಗಿಲ್ಲ. ಆದರೆ ತಂದೆ- ತಾಯಿಯನ್ನು ದೇವರಂತೆ ಪೂಜೆ ಮಾಡಿದರೆ ಮಾತ್ರ ಬದುಕು ಸಾರ್ಥಕವಾಗುತ್ತದೆ. ತಂದೆ- ತಾಯಂದಿರನ್ನು ವೃದ್ಧಾಶ್ರಮಕ್ಕೆ ಬಿಡುವ ಮಕ್ಕಳು ಇಂದಿನ ಕಾಲದಲ್ಲಿ ಹೆಚ್ಚಿದ್ದಾರೆ. ಒಂದು ನೆನಪಿಟ್ಟುಕೊಳ್ಳಬೇಕು. ನಾವು ಮಾಡಿದನ್ನು ಇಲ್ಲಿಯೇ ಉಂಡು ಹೋಗಬೇಕು. ನಾವು ನಮ್ಮ ತಂದೆ- ತಾಯಂದಿರಿಗೆ ಮಾಡಿದ್ದನ್ನು ನಮ್ಮ ಮಕ್ಕಳು ನಮಗೆ ಮಾಡುತ್ತಾರೆ ಎಂಬ ಅರಿವು ನಮಗಿರಬೇಕು ಎಂದರು.

ಧಾರವಾಡ ಜಿಲ್ಲೆಯ ಅಣ್ಣಿಗೇರಿ ಮಣಕವಾಡ ದೇವರಮಂದಿರ ಮಹಾಮಠದ ಅಭಿನವ ಮೃತ್ಯುಂಜಯ ಶ್ರೀ ಸಾನ್ನಿಧ್ಯ ವಹಿಸಿದ್ದರು. ರಾಮಣ್ಣ ಕುನ್ನೂರ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ, ಪಪಂ ಸದಸ್ಯ ಫಣಿರಾಜ ಹದಳಗಿ, ಮುಂಡಗೋಡ ವಲಯ ಅರಣ್ಯಾಧಿಕಾರಿ ವಾಗೀಶ ಬಾಚಿನಕಜೊಪ್ಪ, ನ್ಯಾಯವಾದಿ ಗುಡ್ಡಪ್ಪ ಕಾತೂರ, ಛಲವಾದಿ ಸಮಾಜದ ಮುಖಂಡ ಪ್ರಕಾಶ ದೇವರಮನಿ ಉಪಸ್ಥಿತರಿದ್ದರು.

ರಾಜಶೇಖರ ಹುಬ್ಬಳ್ಳಿ ನಿರೂಪಿಸಿದರು.