ಸಾರಾಂಶ
ಕೊಪ್ಪಳ:
ಪ್ರತಿಯೊಂದು ಕುಟುಂಬವು ಸ್ಥಳೀಯವಾಗಿಯೇ ಸಿಗು ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ 60 ದಿನ ಕೆಲಸ ನಿರ್ವಹಿಸಿ ಆರ್ಥಿಕವಾಗಿ ಸದೃಢವಾಗಬೇಕೆಂದು ಜಿಪಂ ಯೋಜನಾ ನಿರ್ದೇಶಕ ಪ್ರಕಾಶ್ ವಿ ಹೇಳಿದರು.ತಾಲೂಕಿನ ಹಲಗೇರಿ ಗ್ರಾಮದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಪುಟ್ಟಪ್ಪನ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಭೇಟಿ ಪರಿಶೀಲಿಸಿ ಮಾತನಾಡಿದ ಅವರು, ನರೇಗಾ ಯೋಜನೆಯು ಗ್ರಾಮೀಣ ಭಾಗದ ಕೂಲಿಕಾರರಿಗೆ ಕೂಲಿ ಕೆಲಸ ಒದಗಿಸುವ ಯೋಜನೆಯಾಗಿದೆ. ಪ್ರತಿಯೊಬ್ಬರು ₹ 370 ಕೂಲಿ ಬರುವಂತೆ ಕೂಲಿ ಕೆಲಸ ನಿರ್ವಹಿಸಬೇಕು. ಬೇಸಿಗೆ ಇರುವುದರಿಂದ ಕೆಲಸದ ಪ್ರಮಾಣದಲ್ಲಿ ಶೇ. 30% ವಿನಾಯಿತಿ ನೀಡಲಾಗಿದ್ದು ನೀಡಿರುವ ಅಳತೆಗನುಗುಣವಾಗಿ ಕೆಲಸ ನಿರ್ವಹಿಸಬೇಕೆಂದು ಹೇಳಿದರು.
ಬಿಸಿಲಿನ ಪ್ರಮಾಣ ಹೆಚ್ಚಳವಾಗಿರುವುದರಿಂದ ಕೆಲಸಕ್ಕೆ ಬರುವ ಪಾಲಕರು ತಮ್ಮ 6 ತಿಂಗಳಿಂದ 3 ವರ್ಷದೊಳಗಿ ಮಕ್ಕಳನ್ನು ಕೂಸಿನ ಮನೆಗೆ ಸೇರ್ಪಡೆ ಮಾಡಬೇಕು ಎಂದ ಅವರು, ಪ್ರತಿಯೊಬ್ಬರಿಗೂ 6 ಪೂಟ್ ಉದ್ದ, 6 ಅಗಲ, 1 ಪೂಟ್ ಆಳ ಕೆಲಸ ನಿರ್ವಹಿಸಿದಲ್ಲಿ ₹ 370 ಕೂಲಿ ಬರುತ್ತದೆ ಎಂದರು.ಸಂವಾದ:
ಕೆರೆ ಕಾಮಗಾರಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಮಹಿಳಾ ಕೂಲಿಕಾರರೊಂದಿಗೆ ಯೋಜನಾ ನಿರ್ದೇಶಕರು ಸಂವಾದ ನಡೆಸಿದರು. ಹೆಚ್ಚಿನ ಪ್ರಮಾಣದಲ್ಲಿ ಕೆಲಸಕ್ಕೆ ಹಾಜರಾಗಿ ಮಹಿಳಾ ಭಾಗವಹಿಸುವಿಕೆ ಹೆಚ್ಚಳವಾಗಬೇಕೆಂದರು. ಕೆರೆ ಕಾಮಗಾರಿಯಲ್ಲಿ ಕೆಲಸ ನಿರ್ವಹಿಸಿರುವ ಕುರಿತು ಎನ್ಎಂಎಂಎಸ್‌ನಲ್ಲಿ ಹಾಜರಾತಿ ಸೆರೆ ಹಿಡಿದು ಅಪಲೋಡ್ ಮಾಡಿರುವ ಕುರಿತು ಆನ್‌ಲೈನ್ ಹಾಜರಾತಿ ಖುದ್ದು ಪರಿಶೀಲಿಸಿದರು.ಹಲಗೇರಿ ಕೂಸಿನ ಮನೆ ಪರಿವೀಕ್ಷಣೆ:
ಗ್ರಾಮದ ಕೂಸಿನ ಮನೆಗೆ ಭೇಟಿ ನೀಡಿ ಮಕ್ಕಳು ದಾಖಲಾಗಿರುವ ಕುರಿತು ಕೆರ್ ಟೆಕರ್ಸ್‌ಗಳಿಂದ ಮಾಹಿತಿ ಪಡೆದರು. ಪ್ರಸ್ತುತ 15 ಮಕ್ಕಳು ಪ್ರತಿ ದಿನ ಕೂಸಿನ ಮನೆಗೆ ಬರುತ್ತಿದ್ದು ಬೆಳಗ್ಗೆ ಹಾಲು, ಬಾಳೆಹಣ್ಣು, ದಾಲ್ ಖಿಚಡಿ, ಹೆಸರು ಬೆಳೆ ಪಾಯಸ, ಶಾವಿಗೆ ಪಾಯಸ, ಮೊಟ್ಟೆ ನೀಡುತ್ತಿರುವ ಕುರಿತು ವಿವರಿಸಿದರು.ಬಿಸರಳ್ಳಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ನರೇಗಾ ಕೂಲಿಕಾರರಿಗೆ ಕೆಲಸ ನೀಡುವಂತೆ ಸೂಚಿಸಿದರು. ಪ್ರಧಾನಮಂತ್ರಿ ಆವಾಸ್ ಪ್ಲಸ್ ಸಮೀಕ್ಷೆಯನ್ನು ವಸತಿ ರಹಿತ ಯಾವುದೇ ಕುಟುಂಬವು ಹೊರಗುಳಿಯದಂತೆ ಜಿಪಿಎಸ್ ಮಾಡಬೇಕೆಂದು ಗಣಕಯಂತ್ರ ನಿರ್ವಾಹಕರಿಗೆ ಪ್ರಕಾಶ ಸೂಚಿಸಿದರು.
ಸಂಸದರ ನರೇಗಾ ದತ್ತು ಗ್ರಾಮ ಮೋರನಾಳಕ್ಕೆ ಭೇಟಿ ನೀಡಿ ನರೇಗಾ ಯೋಜನೆಯ ಶಾಲಾ ಕಾಂಪೌಂಡ್, ಶಾಲಾ ಶೌಚಾಲಯ, ಅಡುಗೆ ಕೋಣೆ ಮತ್ತು ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಯಿಂದ ಅನುಷ್ಠಾನಿಸುತ್ತಿರುವ ಪ್ರಗತಿಯಲ್ಲಿರುವ ನಮ್ಮ ಹೊಲ ನಮ್ಮ ರಸ್ತೆ ಕಾಮಗಾರಿ ವೀಕ್ಷಿಸಿದರು.ಈ ವೇಳೆ ತಾಪಂ ನರೇಗಾ ಸಹಾಯಕ ನಿರ್ದೇಶಕ ಯಂಕಪ್ಪ, ಬಿಸರಳ್ಳಿ ಗ್ರಾಪಂ ಅಧ್ಯಕ್ಷ ರಮೇಶರಡ್ಡಿ, ಪಿಡಿಒ ಅಶೋಕ ರಾಂಪುರ, ತಾಲೂಕು ಐಇಸಿ ಸಂಯೋಜಕ ದೇವರಾಜ ಪತ್ತಾರ, ತಾಂತ್ರಿಕ ಸಂಯೋಜಕ ಯಮನೂರ, ಗ್ರಾಪಂ ಕಾರ್ಯದರ್ಶಿ ದೊಡ್ಡನಗೌಡ, ತಾಂತ್ರಿಕ ಸಹಾಯಕ ಪ್ರವೀಣ ಗದಗ, ಪಂಚಾಯಿತಿ ಸಿಬ್ಬಂದಿ ಹಾಜರಿದ್ದರು.