ಸಾರಾಂಶ
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ವೃತ್ತಿಪರರಲ್ಲಿ ಒತ್ತಡ ಸರ್ವೇ ಸಾಮಾನ್ಯವಾಗಿದ್ದು, ಪೊಲೀಸ್ ಇಲಾಖೆಯಲ್ಲಿ ಹೆಚ್ಚಿನ ಕೆಲಸಗಳು ಇರುವುದರಿಂದ ಹೆಚ್ಚಿನ ಒತ್ತಡಿವಿದೆ ಎಂದು ಬಿಎಲ್‌ಡಿಇ ಆಸ್ಪತ್ರೆಯ ಮನಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರು ಮತ್ತು ಮನೋಲಯ ಆಸ್ಪತ್ರೆಯ ಮುಖ್ಯಸ್ಥ ಡಾ.ಮನೋವಿಜಯ ಕಳಸಗೊಂಡ ಹೇಳಿದರು.ಮನ ಮನದ ಮಾನಸಿಕ ಆರೋಗ್ಯ ಜಾಗೃತಿಗಾಗಿ ಮನೆ ಮನೆಗೂ ಮನೋಲಯ ಘೋಷ ವಾಕ್ಯದೊಂದಿಗೆ ನಡೆಯುತ್ತಿರುವ ಮಹಾ ಆರೋಗ್ಯ ಜಾಗೃತಿ ಅಭಿಯಾನದ ಅಂಗವಾಗಿ ವಿಜಯಪುರದ ಮನೋಲಯ ಆಸ್ಪತ್ರೆ, ಬಸವನಬಾಗೇವಾಡಿ ಅಮರೇಶ್ವರ ಕ್ಲಿನಿಕ್, ಬಸವನಬಾಗೇವಾಡಿ ಪೊಲೀಸ್ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಆರಕ್ಷಕರಿಗಾಗಿ ಮಾನಸಿಕ ಆರೋಗ್ಯ ನಿರ್ವಹಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒತ್ತಡವನ್ನು ನಿಭಾಯಿಸುವ ಸಾಮರ್ಥ್ಯ, ಮಾನಸಿಕ ಆರೋಗ್ಯದ ಕಾಳಜಿ ಮಾಡಿದಾಗ ವ್ಯಕ್ತಿಯ ಕಾರ್ಯಕ್ಷಮತೆ ಇನ್ನೂ ಹೆಚ್ಚಾಗುತ್ತದೆ ಎಂದು ತಿಳಿಸಿದರು.ಬಸವನ ಬಾಗೇವಾಡಿ ಡಿವೈಎಸ್ಪಿ ಬಲ್ಲಪ್ಪ ನಂದಗಾವಿ ಮಾತನಾಡಿ, ಪೊಲೀಸರಿಗೂ ಕೂಡ ಒತ್ತಡವಿದ್ದು, ಒತ್ತಡವನ್ನು ನಿರ್ವಹಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಯಾವುದೇ ದುಷ್ಚ ಚಟಗಳಿಗೆ ಬಲಿಯಾಗಬಾರದು. ದುಶ್ಚಟಗಳಿಂದ ಆರೋಗ್ಯ ಹಾಳಾಗಲಿದೆ ಎಂದರು.ಕಾರ್ಯಕ್ರಮದಲ್ಲಿ ಸಿಪಿಐ ಗುರುಶಾಂತ ದಾಶ್ಯಾಳ, ಪಿಎಸೈ ಐ.ಎಂ.ದುಂಡಸಿ ಉಪಸ್ಥಿತರಿದ್ದರು. ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಪುರಸ್ಕೃತ ಡಾ.ಅಮರೇಶ ಎಸ್.ಮಿಣಜಗಿ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮನೋಲಯ ಆಸ್ಪತ್ರೆಯ ಮುಖ್ಯಸ್ಥ ಡಾ.ಮನೋವಿಜಯ ಕಳಸಗೊಂಡ ಅವರನ್ನು ಸನ್ಮಾನಿಸಲಾಯಿತು.