ಸಾರಾಂಶ
ಗ್ರಾಮೀಣ ಭಾಗದ ಸಾರಿಗೆ ವ್ಯವಸ್ಥೆ ಸರಿದೂಗಿಸಲು ಹೆಚ್ಚುವರಿ ಬಸ್ ಅವಶ್ಯಕತೆ ಇದೆ. ಇದರ ಬಗ್ಗೆ ಸಾರಿಗೆ ಇಲಾಖೆಯ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು.
ಅಳ್ನಾವರ:
ಬಡವರಿಗೆ ಅನುಕೂಲ ಕಲ್ಪಿಸಲು ರಾಜ್ಯ ಸರ್ಕಾರ ಸಮರ್ಪಕವಾಗಿ ಜಾರಿ ಮಾಡಿದ ಪಂಚ ಗ್ಯಾರಂಟಿ ಯೋಜನೆ ಸಮಾಜದ ಅಭ್ಯುದಯಕ್ಕೆ ವಿಶಿಷ್ಟ ಕೊಡುಗೆ ನೀಡಿದೆ. ಯೋಜನೆಯ ಸಮರ್ಪಕ ಅನುಷ್ಠಾನದಿಂದ ಬದಲಾವಣೆಯ ಪರ್ವ ಆರಂಭವಾಗಿದೆ ಎಂದು ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷವಿನಾಯಕ ಕುರುಬರ ಹೇಳಿದರು.
ಸಮೀಪದ ಬೆಣಚಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಸೋಮವಾರ ನಡೆದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಸಾರ್ವಜನಿಕರು ಅಹವಾಲು ಆಲಿಸಿದ ನಂತರ ಅವರು ಮಾತನಾಡಿದರು. ಯೋಜನೆಯ ಪರಿಣಾಮಕಾರಿ ಜಾರಿಗೆ ಗ್ರಾಮಮಟ್ಟದಲ್ಲಿ ಸಭೆ ಆಯೋಜಿಸಲಾಗುತ್ತಿದೆ. ಗ್ರಾಮಸ್ಥರು ಇದರ ಲಾಭ ಪಡೆದುಕೊಳ್ಳಿ ಎಂದರು.ತಾಲೂಕು ಪಂಚಾಯಿತಿ ಇಒ ಪ್ರಶಾಂತ ತುರ್ಕಾಣಿ ಮಾತನಾಡಿ, ಗ್ರಾಮೀಣ ಭಾಗದ ಸಾರಿಗೆ ವ್ಯವಸ್ಥೆ ಸರಿದೂಗಿಸಲು ಹೆಚ್ಚುವರಿ ಬಸ್ ಅವಶ್ಯಕತೆ ಇದೆ. ಇದರ ಬಗ್ಗೆ ಸಾರಿಗೆ ಇಲಾಖೆಯ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು. ಸಭೆಯಲ್ಲಿ ಕೇಳಿ ಬಂದ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸಲಾಗುವುದು, ಪಂಚ ಗ್ಯಾರಂಟಿ ಯೋಜನೆ ಎಲ್ಲರಿಗೂ ಸರಿಯಾಗಿ ತಲುಪಲು ಒತ್ತು ನೀಡಲಾಗಿದೆ ಎಂದು ಹೇಳಿದರು.
ಶಾಲಾ, ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರ ಅನುಕೂಲಕ್ಕಾಗಿ ಅಳ್ನಾವರ-ಬೆಣಚಿ-ಧಾರವಾಡ ಮಾರ್ಗದಲ್ಲಿ ನಿಗದಿತ ಸಮಯಕ್ಕೆ ಬಸ್ ಓಡಿಸಬೇಕು. ಹೊನ್ನಾಪುರಕ್ಕೆ ಎಕ್ಸ್‌ಪ್ರೆಸ್ ಬಸ್ ನಿಲುಗಡೆ ಮಾಡಬೇಕು ಹಾಗೂ ಸದ್ಯ ಮಳೆಗಾಲ ಮುಗಿದಿದ್ದು, ಕಬ್ಬು ಕಟಾವು ನಂತರ ಬೆಳೆಗೆ ನೀರು ಹಾಯಿಸಲು ನಿರಂತರ ವಿದ್ಯುತ್ ಪೂರೈಕೆ ಮಾಡಬೇಕು. ಟಿಸಿ ಬದಲಾವಣೆಯನ್ನು ತ್ವರಿತ ಗತಿಯಲ್ಲಿ ಮಾಡಬೇಕು. ಡೋರಿ ಗ್ರಾಮದ ಕುಡಿಯುವ ನೀರಿನ ಘಟಕಕ್ಕೆ ವಿದ್ಯುತ್ ಸಂಪರ್ಕ ನೀಡುವ ಬಗ್ಗೆ ಸಭೆಯಲ್ಲಿ ಅಹವಾಲುಗಳು ಕೇಳಿ ಬಂದವು.ಪಂಚ ಗ್ಯಾರಂಟಿ ಯೋಜನೆಯ ಪ್ರಗತಿ ಬಗ್ಗೆ ವಿವಿಧ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು. ಸ್ಥಿತಿವಂತರು ಬಿಪಿಎಲ್ ಕಾರ್ಡ್ ಹೊಂದಿದ್ದಲ್ಲಿ ಇಲಾಖೆಗೆ ಸ್ವಯಂ ಇಚ್ಛೆಯಿಂದ ಮರಳಿ ನೀಡಿ, ಅರ್ಹ ಫಲಾನುಭವಿಗಳಿಗೆ ಯೋಜನೆಯು ದೊರೆಯಲು ಸಹಕರಿಸಬೇಕು ಎಂದು ಆಹಾರ ಇಲಾಖೆಯ ವಿನಾಯಕ ದೀಕ್ಷಿತ ಹೇಳಿದರು.
ಗ್ರಾಪಂ ಅಧ್ಯಕ್ಷೆ ಗಂಗವ್ವ ಮುಷ್ಟಗಿ, ಉಪಾಧ್ಯಕ್ಷ ಅಲ್ಲಾಭಕ್ಷ ಬಡಗಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಸುಧಾ ಶಿರೋಳಕರ, ಪಿಡಿಒ ನಾಗರಾಜ ಪುಡಕಲಕಟ್ಟಿ, ಶೈಲಾ ಹಿರೇಮಠ, ಸಲೀಂ ತಡಕೋಡ, ಎಂ.ಕೆ. ಭಾಗವಾನ, ಸುರೇಶಗೌಡ ಪಾಟೀಲ, ಹೆಸ್ಕಾಂ ಎಇಇ ಗುಲ್ಜಾರಅಹ್ಮದ್ ಮುಲ್ಲಾ, ನಾರಾಯಣ ಹರಿಜನ್, ಜಯಶ್ರೀ ದಬಾಲಿ, ಅನುಸುಯಾ ಶೀಲಿ, ರುಕ್ಮೀಣಿ ಕಂಚನೋಳಕರ ಬಸವರಾಜ ಬೈಲೂರ ಇದ್ದರು.