ಸಾರಾಂಶ
ಬೆಂಗಳೂರು ಹೊರವತಲಯದಲ್ಲಿ ನಿರ್ಮಿಸಲಾಗುವ ಪೆರಿಫೆರಲ್ ರಿಂಗ್ ರಸ್ತೆ ಯೋಜನೆಯನ್ನು ಎಕಾನಾಮಿಕ್ ಕಾರಿಡಾರನ್ನಾಗಿ ಪರಿವರ್ತಿಸಿ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ.
ಕನ್ನಡಪ್ರಭ ವಾರ್ತೆ ವಿಧಾನಸಭೆ
ಬೆಂಗಳೂರು ಹೊರವತಲಯದಲ್ಲಿ ನಿರ್ಮಿಸಲಾಗುವ ಪೆರಿಫೆರಲ್ ರಿಂಗ್ ರಸ್ತೆ ಯೋಜನೆಯನ್ನು ಎಕಾನಾಮಿಕ್ ಕಾರಿಡಾರನ್ನಾಗಿ ಪರಿವರ್ತಿಸಿ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ.
ಜತೆಗೆ ಯೋಜನೆಗೆ ಭೂಮಿ ನೀಡುವ ರೈತರಿಗೆ ಹೆಚ್ಚಿನ ಪರಿಹಾರ ನೀಡಲು ಸಚಿವ ಸಂಪುಟದ ಮುಂದೆ ವಿಷಯ ಮಂಡಿಸಲಾಗುವುದು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಬಿಜೆಪಿಯ ಡಾ। ಶೈಲೇಂದ್ರ ಬೆಲ್ದಾಳೆ ಅವರು ಪೆರಿಫೆರಲ್ ರಿಂಗ್ ರಸ್ತೆ ಅನುಷ್ಠಾನ ಕುರಿತು ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಡಿ.ಕೆ.ಶಿವಕುಮಾರ್ ಅವರ ಗಮನ ಸೆಳೆದರು.
ಅದಕ್ಕುತ್ತರಿಸಿದ ಡಿಕೆಶಿ, ಪೆರಿಫೆರಲ್ ರಿಂಗ್ ರಸ್ತೆ ಯೋಜನೆಯನ್ನು ಕಳೆದ 15 ವರ್ಷಗಳ ಹಿಂದೆಯೇ ರೂಪಿಸಲಾಗಿತ್ತು. ಆದರೆ, ಹಲವು ಪ್ರಯತ್ನಗಳ ನಂತರವೂ ಯೋಜನೆ ಜಾರಿ ಆಗಿರಲಿಲ್ಲ.
ಇದೀಗ ಯೋಜನೆಯನ್ನು ಆರ್ಥಿಕ ಕಾರಿಡಾರ್ ಆಗಿ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದ್ದು, ಅದಕ್ಕೆ ಅಗತ್ಯವಿರುವಂತೆ ಯೋಜನೆ ರೂಪಿಸಲಾಗಿದೆ.
ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು, ಬಿಡ್‌ಗಳು ಸಲ್ಲಿಕೆಯಾಗುತ್ತಿದೆ. ಫೆ.29ರಂದು ಬಿಡ್ ತೆರೆದು ಅರ್ಹ ಗುತ್ತಿಗೆದಾರರಿಗೆ ಟೆಂಡರ್ ನೀಡಲಾಗುವುದು ಎಂದರು.
ಯೋಜನೆಗೆ 2,596 ಎಕರೆ ಅವಶ್ಯಕತೆಯಿದ್ದು, ಅದರಲ್ಲಿ 220 ಎಕರೆ ಮಾತ್ರ ಸರ್ಕಾರಿ ಭೂಮಿಯಾಗಿದೆ. ಉಳಿದ ಜಾಗ ಖಾಸಗಿಯವರದ್ದಾಗಿದೆ.
ಭೂಮಿ ನೀಡುವ ರೈತರ ಹಿತದೃಷ್ಟಿಯಿಂದಾಗಿ ಈಗಾಗಲೇ ನೋಟಿಫೈ ಆಗಿರುವ ಭೂಮಿಯನ್ನು ಯಾವುದೇ ಕಾರಣಕ್ಕೂ ಡಿ-ನೋಟಿಫೈ ಮಾಡುವುದಿಲ್ಲ ಎಂದು ರೈತರಿಗೆ ಭರವಸೆ ನೀಡಲಾಗಿದೆ.
ಜತೆಗೆ ರೈತರಿಗೆ ಸೂಕ್ತ ಪರಿಹಾರವನ್ನೂ ನೀಡಲಾಗುವುದು. ರೈತರಿಗೆ ಹೆಚ್ಚಿನ ಪರಿಹಾರ ನೀಡುವ ಕುರಿತಂತೆ ಸಚಿವ ಸಂಪುಟ ಸಭೆಯಲ್ಲಿ ವಿಷಯ ಮಂಡಿಸಲು ನಿರ್ಧರಿಸಿದ್ದೇನೆ ಎಂದು ತಿಳಿಸಿದರು.