ಸಾರಾಂಶ
ವಿಧಾನ ಪರಿಷತ್ : ರಾಜಧಾನಿಯ ಸುತ್ತ ನಿರ್ಮಿಸಲು ಉದ್ದೇಶಿಸಿರುವ ಪೆರಿಫೆರಲ್ ವರ್ತುಲ ರಸ್ತೆ ಯೋಜನೆ-2 ಕೈ ಬಿಡಲು ಸಾಧ್ಯವಿಲ್ಲ. ಭೂಸ್ವಾಧೀನದಿಂದ ಭೂಮಿ, ಕಟ್ಟಡ, ಮನೆ ಕಟ್ಟಿಕೊಂಡಿದ್ದರೆ ಅವರಿಗೆ ಉತ್ತಮ ಪರಿಹಾರ ಕೊಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಗುರುವಾರ ಬಿಜೆಪಿಯ ಎಚ್.ಎಸ್.ಗೋಪಿನಾಥ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, 2005-2005ರಲ್ಲಿ ಫೆರಿಫೆರಲ್ ರಿಂಗ್ ರಸ್ತೆ 2ಕ್ಕೆ ಮೊದಲ ಅಧಿಸೂಚನೆ ಹೊರಡಿಸಿದರೂ ಯಾವುದೇ ಸರ್ಕಾರ ಇದನ್ನು ಡಿನೋಟಿಫಿಕೇಷನ್ ಮಾಡಲಿಲ್ಲ. ಡಿನೋಟಿಫಿಕೇಶನ್ ಮಾಡದೇ ಪ್ಲಾನ್‌ಗಳಿಗೆ ಅನುಮತಿ ನೀಡಿಲ್ಲ. ಈಗ ಡಿನೋಟಿಫಿಕೇಶನ್ ಮಾಡಿ ಜೈಲಿಗೆ ಹೋಗಲು ಸಿದ್ಧನಿಲ್ಲ. ನೈಸ್ ರಸ್ತೆ ಇಲ್ಲದಿದ್ದರೆ ಬೆಂಗಳೂರು ಸತ್ತು ಹೋಗುತ್ತಿತ್ತು. ಇದು ನೈಸ್ ರಸ್ತೆಗೆ ಪರ್ಯಾಯವಾಗಿ ಬರುತ್ತಿರುವ ರಸ್ತೆಯಾಗಿದೆ. ಪಿಆರ್‌ಆರ್-1ಕ್ಕೆ ಈಗ 26 ಸಾವಿರ ಕೋಟಿ ರು. ಬೇಕಾಗಿದೆ. ಅಂದಿನ ಕಾಲದಲ್ಲೇ ಮಾಡಿದ್ದರೆ 4-5 ಸಾವಿರ ಕೋಟಿ ರು.ಗಳಲ್ಲಿ ಮುಗಿಯುತ್ತಿತ್ತು. ಬಿಡಿಎ ವ್ಯಾಪ್ತಿಯಲ್ಲಿ ಹೊಸ ಪರಿಹಾರ ನೀತಿ ಬರುವುದಿಲ್ಲ. ಆದರೂ ನಾವು ರೈತರಿಗೆ ತೊಂದರೆ ಮಾಡಬಾರದು ಎಂದು ಉತ್ತಮ ಪರಿಹಾರ ನೀಡಲಾಗುವುದು ಎಂದರು.
ಅದೇ ರೀತಿ ಪಿಆರ್‌ಆರ್-2 ಕೂಡ ಆರ್ಥಿಕವಾಗಿ ಸರಿದೂಗಬೇಕು. ಇದಕ್ಕೆ ₹27 ಸಾವಿರ ಕೋಟಿ ಸಾಲ ಮಾಡಲು ಆಗುವುದಿಲ್ಲ. ಇಲ್ಲಿ ಕೆಲವರು ಮನೆ ಕಟ್ಟಿದ್ದಾರೆ, ಕೆಲವರು ಕಟ್ಟಿಲ್ಲ. ಹಾಗಾಗಿ ಎಲ್ಲರ ಹಿತ ಗಮನದಲ್ಲಿಟ್ಟುಕೊಂಡು ಪ್ರತಿ ಪ್ರಕರಣವನ್ನು ಪರಿಶೀಲನೆ ಮಾಡುತ್ತೇವೆ. ಆದರೆ, ಈ ರಸ್ತೆ ಮಾಡುವುದನ್ನು ನಿಲ್ಲಿಸಲು ಆಗುವುದಿಲ್ಲ. ಗೊಟ್ಟಿಗೆರೆ ಭಾಗದಲ್ಲಿ ಸುಮಅರು ಸಾವಿರ ಮನೆ ಇವೆ. ಎಲ್ಲವನ್ನು ಕೆಡವಲು ಆಗುತ್ತದೆಯೇ ಎಂಬ ಪ್ರಶ್ನೆ ಇದೆ. ಹೀಗಾಗಿ ಈ ಭಾಗದಲ್ಲಿ ಪರ್ಯಾಯ ಮಾರ್ಗ ಇದೆಯೇ ಎಂದು ಪರಿಶೀಲಿಸುತ್ತೇವೆ ಎಂದು ತಿಳಿಸಿದರು.
ಕಂದಾಯ ಭೂಮಿಯಲ್ಲಿ ಮನೆ ಕಟ್ಟಿದ್ದರೆ, ಮನೆ ಮಾಲೀಕನಿಗೆ ಪರಿಹಾರ ನೀಡುತ್ತಿರೋ ಅಥವಾ ಜಾಗದ ಮಾಲೀಕನಿಗೆ ಪರಿಹಾರ ಕೊಡತ್ತಿರಾ ಎಂದು ಗೋಪಿನಾಥ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಯಾರು ಆ ಜಾಗದಲ್ಲಿ ಇದ್ದಾರೋ, ಯಾರ ಬಳಿ ದಾಖಲೆಗಳಿವೆಯೋ ಅವರಿಗೆ ಪರಿಹಾರ ನೀಡುತ್ತೇವೆ ಎಂದು ಸ್ಪಷ್ಟನೆ ನೀಡಿದರು.