ಸಾರಾಂಶ
ಚನ್ನಪಟ್ಟಣ: ಕಾಡಾನೆ ಸೇರಿದಂತೆ ವನ್ಯಜೀವಿಗಳ ಉಪಟಳದಿಂದ ರಾಮನಗರ ಜಿಲ್ಲೆಯ ರೈತರು ತೀವ್ರ ಕಿರಿಕಿರಿ ಅನುಭವಿಸುತ್ತಿದ್ದು, ಆನೆ ಉಪಟಳಕ್ಕೆ ಇನ್ನೆರಡು ವರ್ಷದಲ್ಲಿ ಶಾಶ್ವತ ಪರಿಹಾರ ಕಲ್ಪಿಸಲಾಗುವುದು ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಘೋಷಿಸಿದರು.
ತಾಲೂಕಿನ ಬಿ.ವಿ.ಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ರಾಮನಗರ ಜಿಲ್ಲೆಯ ಆನೆ ಮತ್ತು ಮಾನವ ಸಂಘರ್ಷ ವಿಷಯದ ಬಗ್ಗೆ ರೈತರೊಂದಿಗೆ ಸಭೆ ಹಾಗೂ ಸಂವಾದ ಉದ್ಘಾಟಿಸಿ ಮಾತನಾಡಿದ ಅವರು, ಆನೆ ದಾಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ವಿಸ್ತೃತ ವರದಿ ಸಿದ್ಧಪಡಿಸಿದ್ದಾರೆ. ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಸೇರಿದಂತೆ ಹಲವು ಯೋಜನೆಗಳಿಗೆ ೩೦೦ ಕೋಟಿ ಅಗತ್ಯವಿದೆ ಎಂದು ತಿಳಿಸಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು. ಮುಂದಿನ ಬಜೆಟ್‌ನಲ್ಲಿ ಆನೆ ದಾಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ಸಂಬಂಧ ಹೆಚ್ಚಿನ ಅನುದಾನ ಮೀಸಲಿಡಲು ಮನವಿ ಸಲ್ಲಿಸಲಾಗುವುದು ಎಂದರು.ಜಿಲ್ಲೆಯಲ್ಲಿ ಆನೆ ಶಿಬಿರ ನಿರ್ಮಾಣಕ್ಕೆ ಬೇಡಿಕೆ ಇದೆ. ಇದಕ್ಕೆ ಸುಮಾರು ೫೦ ಕೋಟಿ ರು. ಅನುದಾನದ ಅಗತ್ಯವಿದೆ. ಮುಂದಿನ ದಿನಗಳಲ್ಲಿ ಸಿಎಂ ಜತೆ ಚರ್ಚಿಸಿ ಜಿಲ್ಲೆಯಲ್ಲಿ ಆನೆ ವಿಹಾರಧಾಮ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಬ್ಯಾರಿಕೇಡ್ ನಿರ್ಮಾಣಕ್ಕೆ ೪೦ ಕೋಟಿ ಮಂಜೂರು:ಕಳೆದ ವರ್ಷ ಜಿಲ್ಲೆಯಲ್ಲಿ ೩೫ ಕಿಲೋ ಮೀಟರ್ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ೬೦ ಕೋಟಿ ಅನುದಾನ ನೀಡಲಾಗಿತ್ತು. ಇದೀಗ ಇನ್ನು ೨೬ ಕಿಲೋ ಮೀಟರ್ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ೪೦ ಕೋಟಿ ರು. ಅನುದಾನಕ್ಕೆ ಅರಣ್ಯ ಇಲಾಖೆ ಬೇಡಿಕೆ ಇಟ್ಟಿದ್ದು, ಇದನ್ನು ನಾಳೆಯೇ ಮಂಜೂರು ಮಾಡುವುದಾಗಿ ಘೋಷಿಸಿದರು.
ಕಾಡಾನೆಗಳ ಮೇಲೆ ನಿಗಾ ಇಡಲು ಈಗಾಗಲೇ ಕೆಲವು ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಸಲಾಗಿದೆ. ಇನ್ನು ಡ್ರೋಣ್ ಮೂಲಕ ಆನೆಗಳ ಚಲನವಲನದ ಮೇಲೆ ನಿಗಾ ಇಡಲಾಗುತ್ತಿದೆ. ಇದೀಗ ಸಂಪೂರ್ಣ ಡ್ರೋಣ್ ನಿರ್ವಾಹಣಾ ತಂಡ ರಚನೆಗೆ ಅರಣ್ಯ ಇಲಾಖೆಯಿಂದ ಬೇಡಿಕೆ ಇದ್ದು, ಅದನ್ನು ಶೀಘ್ರದಲ್ಲೇ ರಚಿಸಲಾಗುವುದು ಎಂದು ತಿಳಿಸಿದರು.ಆನೆ ಕಾರಿಡಾರ್ ಸೇರಿದಂತೆ ಆನೆಗಳ ಸ್ಥಾವರಕ್ಕೆ ಕುತ್ತು ಎದುರಾಗಿದೆ. ಅರಣ್ಯ ಪ್ರದೇಶದಲ್ಲಿ ಆನೆಗಳಿಗೆ ಮೇವು ಸಿಗುತ್ತಿಲ್ಲ. ಆಹಾರ, ನೀರು ಸಿಗದೇ ಆನೆಗಳು ಅರಣ್ಯದಿಂದ ಆಚೆ ಬಂದು ರೈತರ ಜಮೀನುಗಳ ಮೇಲೆ ದಾಂಗುಡಿ ಇಡುತ್ತಿವೆ. ಇದರ ಬಗ್ಗೆ ವಿಸ್ತೃತ ಅಧ್ಯಯನಕ್ಕೆ ಸಮಿತಿ ರಚಿಸಿದ್ದೇವೆ ಎಂದು ತಿಳಿಸಿದರು.
ಆನೆ ದಾಳಿ ತಗ್ಗಿಸುವ ನಿಟ್ಟಿನಲ್ಲಿ ಈಗಾಗಲೇ ಎರಡು ಆನೆಗಳನ್ನು ಹಿಡಿದು ಸ್ಥಳಾಂತರ ಮಾಡಲಾಗಿದೆ. ಆನೆ ದಾಳಿಗೆ ಶಾಶ್ವತ ಪರಿಹಾರ ಒಂದು ಎರಡು ದಿನದಲ್ಲಿ ಆಗುವುದಿಲ್ಲ. ಎಲ್ಲ ಕ್ರಮಗಳನ್ನು ಕೈಗೊಂಡು ಆನೆ ದಾಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ಪ್ರಯತ್ನ ನಡೆಸಲಾಗುವುದು ಎಂದು ಭರವಸೆ ನೀಡಿದರು.ಆನೆ ದಾಳಿಯಿಂದ ಸಾಕಷ್ಟು ರೈತರು ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು ಬೆಳೆಗಳಿಗೂ ಹಾನಿಯಾಗಿದೆ. ಈಗಾಗಲೇ ಬೆಳೆಹಾನಿಗೆ ಸಂಬಂಧಿಸಿದಂತೆ ೧೧ ಕೋಟಿ ಪರಿಹಾರ ನೀಡಲಾಗಿದೆ. ಇನ್ನೊಂದು ಎರಡು ಕೋಟಿ ಪರಿಹಾರ ನೀಡುವುದು ಬಾಕಿ ಇದ್ದು, ಇದನ್ನು ತಕ್ಷಣ ಬಿಡುಗಡೆ ಮಾಡಲಾಗುವುದು. ವನ್ಯಜೀವಿಗಳ ದಾಳಿಯಿಂದ ಆಗುವ ಬೆಳೆ ನಷ್ಟಕ್ಕೆ ಪರಿಹಾರ ಹೆಚ್ಚಿಸುವ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು. ಅರಣ್ಯ ಕಾಯ್ದೆಗಳು ಗಂಭೀರವಾಗಿವೆ. ಏನೇ ಮಾಡಿದರೂ ಕೇಂದ್ರದ ಅನುಮತಿ ಪಡೆದೇ ಕೆಲಸ ಮಾಡಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಶಾಸಕರಾದ ಸಿ.ಪಿ.ಯೋಗೇಶ್ವರ್, ಇಕ್ಬಾಲ್ ಹುಸೇನ್, ಮಾಜಿ ಸಂಸದ ಡಿ.ಕೆ. ಸುರೇಶ್, ಬಿಎಂಐಸಿಎಪಿಎ ಅಧ್ಯಕ್ಷ ರಘುನಂದನ್ ರಾಮಣ್ಣ, ಚನ್ನಪಟ್ಟಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್. ಪ್ರಮೋದ್, ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ರಂಗನಾಥ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಂಗನಾಥ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುನಿಲ್ ಮುಖಂಡರಾದ ಕಾಂತರಾಜ್, ಲಿಂಗೇಶ್ ಕುಮಾರ್, ಎ.ಸಿ.ವೀರೇಗೌಡ, ಆರ್.ಎಂ.ಮಲವೇಗೌಡ, ಅರಣ್ಯ ಇಲಾಖೆ ಅಧಿಕಾರಿಗಳು ಇತರರಿದ್ದರು.ಪೊಟೋ೨೮ಸಿಪಿಟಿ೧: ಚನ್ನಪಟ್ಟಣ ತಾಲೂಕಿನ ಬಿ.ವಿ.ಹಳ್ಳಿಯಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ರಾಮನಗರ ಜಿಲ್ಲೆಯ "ಆನೆ ಮತ್ತು ಮಾನವ ಸಂಘರ್ಷ " ವಿಷಯ ಕುರಿತು ರೈತರೊಂದಿಗೆ ಸಭೆ ಹಾಗೂ ಸಂವಾದ ನಡೆಸಿದರು. ಶಾಸಕರಾದ ಯೋಗೇಶ್ವರ್, ಇಕ್ಬಾಲ್ ಹುಸೇನ್, ಮಾಜಿ ಸಂಸದ ಡಿ.ಕೆ.ಸುರೇಶ್ ಇತರರಿದ್ದರು.