ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಹಲವು ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ನೀರಾವರಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಿ ರೈತರಿಗೆ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಸರ್ಕಾರ ಮಟ್ಟದಲ್ಲಿ ಹೋರಾಟ ಮಾಡಿ ಅನುದಾನ ತಂದು ಕಾಮಗಾರಿ ಮಾಡಲಾಗುತ್ತಿದೆ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.ಕ್ಯಾತಘಟ್ಟ ಗ್ರಾಮದಲ್ಲಿ ಹಿಂದುಳಿದ ವರ್ಗಗಳ ಇಲಾಖೆಯಿಂದ ಸಮುದಾಯ ಭವನದ ಹೆಚ್ಚುವರಿ ಕಾಮಗಾರಿ ಶ್ರೀಬಸವೇಶ್ವರ ದೇವಸ್ಥಾನದ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಮದ್ದೂರು ಕ್ಷೇತ್ರದ ರೈತರ ಕಲ್ಯಾಣಕ್ಕಾಗಿ ನಾನು ಸದಾ ಸಿದ್ದನಿದ್ದು, ಕ್ಷೇತ್ರದ ರೈತರಿಗೆ ಹೆಚ್ಚಿನ ಆದ್ಯತೆ ನೀಡುತಿದ್ದೇನೆ ಎಂದರು.
ನೀರಾವರಿ ಕ್ಷೇತ್ರಕ್ಕೆ ಸರ್ಕಾರದಿಂದ ಈಗಾಗಲೇ ಸಾವಿರ ಕೋಟಿ ಅನುದಾನ ತಂದು ಕ್ಷೇತ್ರದ ವಿವಿಧ ಏತ ನೀರಾವರಿ ಯೋಜನೆಗಳು, ಕೆರೆ ಕಾಲುವೆಗಳ ಅಭಿವೃದ್ಧಿ ಕೈಗೊಂಡಿದ್ದು, ಕಾಮಗಾರಿಗಳು ಪ್ರಗತಿಯಲ್ಲಿವೆ. ಶೀಘ್ರದಲ್ಲೇ ಇನ್ನಷ್ಟು ಹೆಚ್ಚಿನ ಅನುದಾನ ತಂದು ಕ್ಷೇತ್ರದ ನೀರಾವರಿ ಸಮಸ್ಯೆಗಳಿಗೆ ಮುಕ್ತಿ ನೀಡುತ್ತೇನೆ ಎಂದರು.ಈ ಹಿಂದೆ ಕ್ಯಾತಘಟ್ಟ ಗ್ರಾಮಕ್ಕೆ ಭೇಟಿ ನೀಡಿದಾಗ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್‌ನಿಂದ ಸರ್ಕಾರಿ ಶಾಲೆಗೆ ಪುನಶ್ಚೇತನಕ್ಕೆ ಸಹಾಯ ಮಾಡಿದ್ದೆ. ಶಾಸಕನಾದ ಗ್ರಾಮಕ್ಕೆ ಭೇಟಿ ನೀಡಿದಾಗ ರಸ್ತೆ ಮತ್ತು ಚರಂಡಿಗಳ ನಿರ್ಮಾಣ ಕಾಮಗಾರಿಗೆ ಹಾಗೂ ಗ್ರಾಮದ ಸಮುದಾಯದ ಭವನದ ಅಭಿವೃದ್ಧಿಗೆ ಮನವಿ ಸಲ್ಲಿಸಲಾಗಿತ್ತು. ಗ್ರಾಮಸ್ಥರ ಮನವಿ ಮೇರೆಗೆ ಗ್ರಾಮ ಪರಿಮಿತಿ ರಸ್ತೆ ಅಭಿವೃದ್ಧಿ ಕಾಮಗಾರಿ ಚಾಲನೆ ನೀಡಿದ್ದೇನೆ. ಶೀಘ್ರ ಮುಖ್ಯ ರಸ್ತೆ ಮತ್ತು ಚರಂಡಿಗಳ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಬಹಳ ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ಕ್ಯಾತಘಟ್ಟ ಏತ ನೀರಾರವರಿ ಯೋಜನೆಗೆ ಶೀಘ್ರ ಚಾಲನೆ ನೀಡಲಾಗುವುದು ಅಲ್ಲದೇ, ಗ್ರಾಮಕ್ಕೆ ಈ ಬಾರಿ ಪಶು ಆಸ್ಪತ್ರೆ ನೀಡಲಾಗುವುದು ಎಂದರು.
ಈ ವೇಳೆ ಮಂಡ್ಯ ಜಿಲ್ಲಾ ಸಹಕಾರಿ ಮುದ್ರಣ ಮತ್ತು ಪ್ರಕಾಶನಾಲಯದ ನಿರ್ದೇಶಕ ಗಿರೀಶ್ ಕ್ಯಾತಘಟ್ಟ, ಭಾರತಿನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಎಸ್.ರಾಜೀವ್, ಮನ್ಮುಲ್ ಮಾಜಿ ಅಧ್ಯಕ್ಷ ಕದಲೂರು ರಾಮಕೃಷ್ಣ, ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಅಜ್ಜಹಳ್ಳಿ ರಾಮಕೃಷ್ಣ, ಗ್ರಾಪಂ ಮಾಜಿ ಅಧ್ಯಕ್ಷರಾದ ಕ್ಯಾತಘಟ್ಟ ರವಿಕುಮಾರ್, ವಿಜಯ ಕುಮಾರ್, ನಾಡಗೌಡ ಅಪ್ಪೇಗೌಡ, ಮುಖಂಡರಾದ ಕೆ.ಟಿ. ಜಯರಾಮು, ಚಂದ್ರಹಾಸ, ಚಂದ್ರಕಾಂತ್, ಪಟೇಲ್ ಮರಿಸ್ವಾಮಿ, ಅಜ್ಜಹಳ್ಳಿ ಮನು, ವೀರೇಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು..