ಮಳೆ ಹಾನಿ ತಡೆಯಲು ಶಾಶ್ವತ ಪರಿಹಾರ

| Published : Aug 17 2025, 02:29 AM IST

ಸಾರಾಂಶ

ಪರಿಹಾರ ಕಲ್ಪಿಸಲು ವಿವಿಧ ಕಾಮಗಾರಿಯನ್ನು ಪಾಲಿಕೆಯಿಂದ ಕೈಗೊಳ್ಳಲಾಗಿದ್ದು, ಪ್ರಗತಿಯಲ್ಲಿವೆ

ಕನ್ನಡಪ್ರಭ ವಾರ್ತೆ ವಿಜಯಪುರ

ಮಳೆಯಿಂದ ನಗರದ ಯಾವ ಪ್ರದೇಶದಲ್ಲಿ ನೀರು ಬಂದು ಸಮಸ್ಯೆಯಾಗಲಿದೆ ಎಂಬುದರ ಕುರಿತು ಮುಂಚಿತವಾಗಿಯೇ ಅಂತಹ ಸ್ಥಳಗಳನ್ನು ಗುರುತಿಸಲಾಗಿದೆ. ಪ್ರತಿ ಸಲ ಈ ಸಮಸ್ಯೆ ಮರುಕಳಿಸದಂತೆ ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ಕ್ರಮ ವಹಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಹೇಳಿದರು.

ನಗರದ ಶಿವಾಜಿ ಸರ್ಕಲ್ ಹತ್ತಿರವಿರುವ ಕೋಟೆಗೋಡೆ ಕಂದಕ, ನವಭಾಗ ರಸ್ತೆಯ ಸಿಕ್ಯಾಬ್ ಕಾಲೇಜ್ ಹತ್ತಿರ, ರಾಮನಗರ ಹಾಗೂ ಜುಮ್ಮಾ ಮಸೀದಿ ಹತ್ತಿರದ ಬಾಗಾಯತ್‍ಗಲ್ಲಿಗೆ ಶುಕ್ರವಾರ ಭೇಟಿ ನೀಡಿದ ಅವರು, ಮಳೆಯಿಂದ ಹಾನಿಗೊಳಗಾದ ಪ್ರದೇಶಗಳನ್ನು ಪರಿಶೀಲಸಿದರು. ಮಹಾನಗರ ಪಾಲಿಕೆಯಿಂದ ಮುಂಜಾಗ್ರತವಾಗಿ ಶಾಶ್ವತವಾಗಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾಮಗಾರಿ ವೀಕ್ಷಿಸಿ ಮಾತನಾಡಿದರು.

ಈ ಹಿಂದೆ ಮಳೆಯಿಂದ ಹಾನಿಯಾದ ಪ್ರದೇಶದಲ್ಲಿ ಕಾಮಗಾರಿ ಕೈಗೊಂಡು ಶಾಶ್ವತ ಪರಿಹಾರ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಅದರಂತೆ ಪರಿಹಾರ ಕಲ್ಪಿಸಲು ವಿವಿಧ ಕಾಮಗಾರಿಯನ್ನು ಪಾಲಿಕೆಯಿಂದ ಕೈಗೊಳ್ಳಲಾಗಿದ್ದು, ಪ್ರಗತಿಯಲ್ಲಿವೆ ಎಂದರು. ಪ್ರಮುಖವಾಗಿ ಬೇಗಂ ತಲಾಬ್ ಕೆರೆಯಿಂದ ಬರುವ ಹಾಗೂ ಕೋಟೆಗೋಡೆ ಹೊರಗಡೆಯಿಂದ ಬರುವ ನೀರನ್ನು ತಡೆಯಲು ₹15 ಕೋಟಿ ವೆಚ್ಚದಲ್ಲಿ ಈಗಾಗಲೇ ಕಾಮಗಾರಿ ಕೈಗೊಳ್ಳಲಾಗಿದೆ. ಇನ್ನೂ ₹150 ಕೋಟಿ ಅನುದಾನ ಮಂಜೂರಾತಿಗೆ ಇರುವ ತಾಂತ್ರಿಕ ಸಮಸ್ಯೆ ನಿವಾರಿಸಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ನಗರದಲ್ಲಿ ಮಳೆ ಹಾನಿಗೆ ತಾತ್ಕಾಲಿಕವಾಗಿ ಪರಿಹಾರ ಕಲ್ಪಿಸಲು ಸೂಚಿಸಲಾಗಿದೆ. ಮುಳೆಗಾಲದ ನಂತರ ಶಾಶ್ವತ ಪರಿಹಾರ ಒದಗಿಸಿ 6 ತಿಂಗಳೊಳಗಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸಿ, ಮಳೆ ನೀರಿನಿಂದ ಪ್ರವಾಹ ಮರುಕಳಿಸದಂತೆ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ ಎಂದರು. ನಗರದ ಶಿವಾಜಿ ವೃತ್ತದ ಹತ್ತಿರವಿರುವ ಕಂದಕ ಒಂದೂವರೆ ಮೀಟರ್ ಎತ್ತರವಿರುವುದರಿಂದ ನೀರು ನಿಂತು ಸಮಸ್ಯೆಯಾಗುತ್ತಿದೆ. ಇದರ ಪರಿಹಾರಕ್ಕಾಗಿ ಅಧಿಕಾರಿಗಳು ಅಡ್ಡವಾಗಿ ಟನಲ್ ನಿರ್ಮಿಸಲು ಸಲಹೆ ನೀಡಿದ್ದು, ಬೆಂಗಳೂರಿನಿಂದ ಪರಿಣಿತರ ತಂಡ ವಿಜಯಪುರಕ್ಕೆ ಬಂದು ಪರಿಶೀಲಿಸಿ ಈ ಸಮಸ್ಯೆ ಶಾಶ್ವತ ಪರಿಹಾರಕ್ಕೆ ವರದಿ ನೀಡಲಿದೆ. ಸಮಗ್ರ ವರದಿಯೊಂದಿಗೆ ಚರ್ಚಿಸಿ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ಈ ವೇಳೆ ಕಾಂಗ್ರೆಸ್ ಮುಖಂಡರಾದ ಅಬ್ದುಲ್ ಅಮೀದ್ ಮುಶ್ರೀಪ್, ಅಬ್ದುಲ ರಜಾಕ ಹೊರ್ತಿ, ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯಕ, ಮಹಾನಗರ ಪಾಲಿಕೆ ಮಹಾಪೌರ ಎಸ್.ಎಂ.ಕರಡಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕನ್ನಾನ ಮುಶ್ರೀಪ್, ಜಿಲ್ಲಾಧಿಕಾರಿ ಡಾ.ಆನಂದ.ಕೆ, ಜಿಪಂ ಸಿಇಒ ರಿಷಿ ಆನಂದ, ಎಸ್ಪಿ ಲಕ್ಷ್ಮಣ ನಿಂಬರಗಿ, ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ಉಪವಿಭಾಗಾಧಿಕಾರಿ ಗುರುನಾಥ ದಡ್ಡೆ ಸೇರಿ ಮುಂತಾದವರಿದ್ದರು.