ಕನ್ನಡಪ್ರಭ ವಾರ್ತೆ ಹಿರಿಯೂರು

ಕಳೆದ ಒಂದು ವರ್ಷದಿಂದ ಚರಂಡಿ ನೀರಿನ ಜೊತೆಯಲ್ಲಿಯೇ ಜೀವನ ಸಾಗಿಸಿದ್ದ ತಾಲೂಕಿನ ಹಲಗಲದ್ದಿ ಗ್ರಾಮದ ದಲಿತ ಕಾಲೋನಿಯ ಜನರು ಶನಿವಾರ ಈ ಸಮಸ್ಯೆಯಿಂದ ಸಮಾಧಾನದ ನಿಟ್ಟುಸಿರು ಬಿಟ್ಟರು.

ಕನ್ನಡಪ್ರಭ ಪತ್ರಿಕೆಯ ನಿರಂತರ ಸುದ್ದಿಗಳಿಂದ ಶನಿವಾರ ಚರಂಡಿ ನೀರಿನ ಸಮಸ್ಯೆಯಿಂದ ಮುಕ್ತಿ ಪಡೆದರು. ಮನೆಗಳ ಒಳಗೆ ಹೋಗಲು ಸಹ ಆಗದಂತೆ, ರಸ್ತೆಯಲ್ಲಿ ನಡೆಯಲು ಸಹ ಆಗದಷ್ಟು ಚರಂಡಿ ನೀರು ಸಂಗ್ರಹವಾಗಿ ಅಲ್ಲಿನ ಜನರು ವಿವಿಧ ರೀತಿಯ ಕಾಯಿಲೆಗಳಿಗೆ ತುತ್ತಾಗುತ್ತಿದ್ದರು. ದಲಿತ ಕಾಲೋನಿಯ 30ಕ್ಕೂ ಹೆಚ್ಚು ಮನೆಗಳ ಚರಂಡಿ ನೀರು ಕೆಳ ಹೋಗದಂತೆ ಕಾಲೋನಿ ಕೆಳಗಿನ ಜಮೀನಿನವರು ಅಡ್ಡ ಮಣ್ಣು ಸುರಿದಿದ್ದರಿಂದ ಕಳೆದ ಒಂದು ವರ್ಷದಿಂದ ಚರಂಡಿ ನೀರು ಕಾಲೋನಿಯ ರಸ್ತೆ ಚರಂಡಿಗಳಲ್ಲೇ ಶೇಖರವಾಗಿ ನಿಂತಿತ್ತು. ಜು.5 ರಂದು ಕನ್ನಡಪ್ರಭ ಪತ್ರಿಕೆಯಲ್ಲಿ ಕೊಳಚೆಯಲ್ಲಿ ಮುಳುಗಿದ ಜನತಾ ಕಾಲೋನಿ ಎಂಬ ಲೇಖನ ಪ್ರಕಟವಾಗಿತ್ತು. ಆನಂತರ ಜು.17 ರಂದು ಚಿತ್ರದುರ್ಗದಲ್ಲಿ ನಡೆದ ದಿಶಾ ಸಭೆಯಲ್ಲಿ ಸಂಸದ ಗೋವಿಂದ ಕಾರಜೋಳ ಅವರು ಪತ್ರಿಕೆಯ ವರದಿ ಉಲ್ಲೇಖಿಸಿ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡು ಇನ್ನು 15 ದಿನದೊಳಗೆ ಅಲ್ಲಿನ ಸಮಸ್ಯೆ ಪರಿಹಾರವಾಗಬೇಕು ಎಂದು ಆದೇಶಿಸಿದ್ದರು.

ಆದರೆ ಅವರು ನೀಡಿದ ಗಡುವು ಮುಗಿದರು ಅಲ್ಲಿನ ಸಮಸ್ಯೆ ಬಗೆಹರಿಯದಿದ್ದಾಗ ಪತ್ರಿಕೆ ಮತ್ತೆ ಆ.1 ರಂದು ಕಿಮ್ಮತ್ತು ಕಳೆದುಕೊಂಡ ಸಂಸದ ಗೋವಿಂದ ಕಾರಜೋಳರ ಕಾಳಜಿ ಎಂಬ ಮತ್ತೊಂದು ಲೇಖನ ಪ್ರಕಟಿಸಿತು. ಆಗ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಮಹಮ್ಮದ್ ಅಲಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ದಿನೇಶ್ ಹಾಗೂ ಪಂಚಾಯ್ತಿ ಇಂಜಿನಿಯರ್ ಸೇರಿ ಶನಿವಾರ ಸ್ಥಳಕ್ಕೆ ಭೇಟಿ ನೀಡಿ ಚರಂಡಿ ನೀರು ತಡೆದಿದ್ದ ಜಮೀನಿನವರನ್ನು ಮನವೊಲಿಸಿ ಚರಂಡಿ ನೀರು ಹರಿದು ಹೋಗಿ ಮುಖ್ಯ ಚರಂಡಿ ಸೇರಲು ಅನುವು ಮಾಡಿಕೊಟ್ಟಿದ್ದಾರೆ. ಚರಂಡಿಗೆ, ರಸ್ತೆಗೆ ಬ್ಲೀಚಿಂಗ್ ಪೌಡರ್, ಪೆನಾಯಿಲ್ ಸಿಂಪಡಿಸಿ ಸ್ವಚ್ಛಗೊಳಿಸಿದ್ದಾರೆ. ಇದೀಗ ವಿಬಿಜಿ ರಾಮ್ ಜಿ ಯೋಜನೆಯಡಿ ಚರಂಡಿ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಪಿಡಿಒ ಹೇಳಿದ್ದು ಹಲಗಲದ್ದಿ ಗ್ರಾಮದ ದಲಿತ ಕಾಲೋನಿ ಜನರ ಚರಂಡಿ ನೀರಿನ ಸಮಸ್ಯೆಗೆ ಪರಿಹಾರ ಸಿಕ್ಕಂತಾಗಿದೆ. ದಲಿತ ಕಾಲೋನಿ ನಿವಾಸಿಗಳಾದ ಕೃಷ್ಣಪ್ಪ, ರಂಗಸ್ವಾಮಿ,ರಾಮಣ್ಣ, ಹನುಮಂತಪ್ಪ, ತಿಪ್ಪಮ್ಮ, ರಾಧಮ್ಮ, ಲಕ್ಷ್ಮಿದೇವಿ, ಮಾರಕ್ಕ ಮುಂತಾದವರು ಪತ್ರಿಕೆಗೆ ಅಭಿನಂದಿಸಿದ್ದಾರೆ.