ಕನಕಗಿರಿ ಪಟ್ಟಣದ ಜೂನಿಯರ್ ಕಾಲೇಜಿಗೆ ಹೋಗುವ ರಸ್ತೆಯಲ್ಲಿರುವ ಛತ್ರಪತಿ ಶಿವಾಜಿ ಸಹೋದರ ಸಂಭಾಜಿ ಸಮಾಧಿಗೆ ಪೂಜೆ ಸಲ್ಲಿಸಲು ಮಹಾರಾಷ್ಟ್ರದಿಂದ ಬಂದಿದ್ದ ವ್ಯಕ್ತಿಯೋರ್ವನನ್ನು ೪ ಗಂಟೆಗಳ ಕಾಲ ಪೊಲೀಸರು ವಿಚಾರಣೆ ನಡೆಸಿದರು.
ಕನಕಗಿರಿ: ಪಟ್ಟಣದ ಜೂನಿಯರ್ ಕಾಲೇಜಿಗೆ ಹೋಗುವ ರಸ್ತೆಯಲ್ಲಿರುವ ಛತ್ರಪತಿ ಶಿವಾಜಿ ಪುತ್ರ ಸಂಭಾಜಿ ಸಮಾಧಿಗೆ ಪೂಜೆ ಸಲ್ಲಿಸಲು ಮಹಾರಾಷ್ಟ್ರದಿಂದ ಬಂದಿದ್ದ ವ್ಯಕ್ತಿಯೋರ್ವನನ್ನು ೪ ಗಂಟೆಗಳ ಕಾಲ ಪೊಲೀಸರು ವಿಚಾರಣೆ ನಡೆಸಿದರು.
ಶಿವಾಜಿ ಮಹಾರಾಜರ ಪುತ್ರ ಸಂಭಾಜಿ (ಶಂಭೂ ಮಹಾರಾಜ) ಕನಕಗಿರಿಯಲ್ಲಿ ಹತನಾಗಿದ್ದಾನೆ ಎಂದು ಹಲವು ಸಂಶೋಧಕರು, ಇತಿಹಾಸಕಾರರು ವಿವಿಧ ಕುರಹುಗಳ ಮೂಲಕ ಉಲ್ಲೇಖಿಸಿದ್ದು, ಸಂಶೋಧನೆಗಳ ಪ್ರಕಾರ ಈ ಸಮಾಧಿಯು ಸಂಭಾಜಿ ಅವರದ್ದೆ ಆಗಿದೆ ಎಂಬುದು ಸ್ಥಳೀಯರ ಮತ್ತು ಮಹಾರಾಷ್ಟ್ರ ಮೂಲದವರ ನಂಬಿಕೆಯಾಗಿದೆ.ಸೆ. ೯ರ ಚತುರ್ದಶಿ ದಿನವಾದ ಶುಕ್ರವಾರ ಪುಣ್ಯಸ್ಮರಣೋತ್ಸವ ಹಿನ್ನಲೆಯಲ್ಲಿ ಸಮಾಧಿಗೆ ತರ್ಪಣ ಹಾಗೂ ಪುಷ್ಪ ನಮನ ಸಲ್ಲಿಸಲು ಬಂದಿದ್ದ ಮಹರಾಷ್ಟ್ರ ಮೂಲದ ಸಂದೀಪ ಮಹೇಂದ್ರಕರ ಎನ್ನುವ ಶಿವಾಜಿ ಅಭಿಮಾನಿಯನ್ನು ಪೊಲೀಸರು ಠಾಣೆಗೆ ಕರೆದೊಯ್ದು ೪ ಗಂಟೆಗಳ ಕಾಲ ವಿಚಾರಣೆ ನಡೆಸಿದ್ದು, ವ್ಯಕ್ತಿಯ ಆಧಾರ್ ಕಾರ್ಡ್, ಲೆಟರ್ ಪ್ಯಾಡ್ ಸೇರಿದಂತೆ ನಾನಾ ದಾಖಲೆಗಳನ್ನು ಪಡೆದಿದ್ದಾರೆ.
ಸಮಾಧಿಗೆ ತರ್ಪಣ ಹಾಗೂ ಪುಷ್ಪ ನಮನಕ್ಕೆ ಅವಕಾಶ ನೀಡದ ಕಾರಣ ಅಲ್ಲೇ ಇರುವ ಸೂರ್ಯ ಮಂದಿರದಲ್ಲಿ ಶಿವಾಜಿ ವಂಶಸ್ಥರಿಗೆ ಶ್ರಾದ್ಧ, ಪಿಂಡ ಪ್ರದಾನ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮವನ್ನು ಇಲ್ಲಿನ ಮರಾಠ ಸಮಾಜದ ಯುವಕರು ಹಮ್ಮಿಕೊಂಡು, ಸಂಭಾಜಿ ಅವರನ್ನು ಸ್ಮರಿಸಿದರು. ಕೆಲಕಾಲ ಸಾಮೂಹಿಕ ಭಜನೆಯೊಂದಿಗೆ ಜೀಜಾಬಾಯಿ, ಹಿಂದೂ ಸಾಮ್ರಾಟ್, ಧರ್ಮವೀರ ಛತ್ರಪತಿ ಶಿವಾಜಿ ಮಹಾರಾಜರನ್ನು ಸ್ಮರಿಸಿ, ಘೋಷಣೆ ಕೂಗಿದರು.ಹನುಮೇಶ ಗಾಯಕವಾಡ, ಬಸವರಾಜ ಆರ್ಯರ, ರವಿ ಮರಾಠಿ, ರಾಮು, ಪ್ರಕಾಶ ರೆಡ್ಡಿ, ನಾಗರಾಜ, ಶರಣಪ್ಪ ಚವ್ಹಾಣ, ನಾಗೇಂದ್ರ ಇದ್ದರು.
ಉದ್ದೇಶಪೂರ್ವಕ ತೊಂದರೆ: ಸಂಭಾಜಿ ಮಹಾರಾಜರ ಪುಣ್ಯ ಸ್ಮರಣೋತ್ಸವ ಹಿನ್ನೆಲೆ ಕನಕಗಿರಿಯಲ್ಲಿನ ಸಮಾಧಿಗೆ ತರ್ಪಣ, ಪುಷ್ಪನಮನ ಸಲ್ಲಿಸಲು ಬಂದಿದ್ದೆ. ಈ ಪುಣ್ಯ ಕಾರ್ಯಕ್ಕೆ ಸ್ಥಳೀಯರು ಕೈ ಜೋಡಿಸಿದರು. ಆದರೆ, ಪೊಲೀಸರು ಮತ್ತು ಆಡಳಿತವು ಅನುಚಿತವಾಗಿ ವರ್ತಿಸಿದೆ. ಬೆನ್ನುನೋವಿನಿಂದ ಬಳಲುತ್ತಿರುವ ನನಗೆ ಉದ್ದೇಶಪೂರ್ವಕವಾಗಿ ರೈಲು ತಪ್ಪಿಸಿದ್ದು, ಅಮಾನವೀಯ ಸಂಗತಿ ಎಂದು ಮಹಾರಾಷ್ಟ್ರ ಮೂಲದ ನಿವಾಸಿ ಸಂದೀಪ ಮಹೇಂದ್ರಕರ ಹೇಳಿದರು.ಸಂಭಾಜಿ ಸಮಾಧಿ ಎನ್ನುವುದಕ್ಕೆ ಪುರಾವೆಗಳಿಲ್ಲ. ಅಹಿಕರ ಘಟನೆ ನಡೆಯದಂತೆ ಸಿಸಿ ಕ್ಯಾಮೆರಾ ಮತ್ತು ಪೊಲೀಸರನ್ನು ನಿಯೋಜಿಸಲಾಗಿದೆ. ಸಮಾಧಿ ವಿವಾದಿತ ಆಗಿರುವ ಕಾರಣ ಯಾರಿಗೂ ಪೂಜೆಗೆ ಅವಕಾಶ ನೀಡಿಲ್ಲ. ತಹಸೀಲ್ದಾರರೂ ಪೂಜೆಗೆ ಅನುಮತಿ ನೀಡಲು ಅವಕಾಶ ನೀಡಿಲ್ಲ. ಪೂಜೆಗೆ ಮುಂದಾಗಿದ್ದ ಮಹಾರಾಷ್ಟ್ರ ಮೂಲದ ವ್ಯಕ್ತಿಯನ್ನು ಠಾಣೆಗೆ ಕರೆತಂದು ತನಿಖೆ ನಡೆಸಲಾಗಿದೆ ಎಂದು ಪಿಐ ಶಿವರಾಜ ಇಂಗಳೆ ಹೇಳಿದರು.