ಪುತ್ಥಳಿ ಸ್ಥಾಪನೆಗೆ ಅನುಮತಿ ಕಡ್ಡಾಯ

| Published : Jul 30 2025, 12:45 AM IST

ಸಾರಾಂಶ

ಜಿಲ್ಲೆಯ ಕೆಲವೆಡೆ ಸಾರ್ವಜನಿಕ ಸ್ಥಳಗಳಲ್ಲಿ ದೇಶ ಸೇವೆಗೆ ಶ್ರಮಿಸಿದ ಮಹನೀಯರ ನಾಮಫಲಕಗಳನ್ನು, ಪ್ರತಿಮೆಗಳನ್ನು ಹಾಗೂ ಪುತ್ಥಳಿಗಳನ್ನು ಅನಧಿಕೃತವಾಗಿ ನಿರ್ಮಿಸುತ್ತಿರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಿದೆ. ಈ ರೀತಿಯ ಕಾನೂನು ಬಾಹಿರವಾಗಿ ಪುತ್ಥಳಿ ನಿರ್ಮಿಸಿ, ನಾಮಫಲಕ ಹಾಕಿ ಸಾರ್ವಜನಿಕ ಶಾಂತಿಗೆ ಭಂಗ ಉಂಟಾಗುವ ರೀತಿ ಯಾವುದೇ ವ್ಯಕ್ತಿಗಳು ಅಥವಾ ಸಂಘ ಸಂಸ್ಥೆಗಳು ನಡೆದುಕೊಳ್ಳಬಾರದು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಜಿಲ್ಲೆಯಲ್ಲಿನ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ, ಸರ್ಕಾರಿ ಕಚೇರಿಗಳ ಆವರಣದಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳ ಅನುಮತಿ ಪಡೆಯದೆ ಮಹನೀಯರ ಪುತ್ಥಳಿಗಳನ್ನು ನಿರ್ಮಿಸುವಂತಿಲ್ಲ ಹಾಗೂ ಸರ್ಕಾರಿ ಜಾಗಳಲ್ಲಿ ನಾಮಫಲಕಗಳನ್ನು ಹಾಕುವಂತಿಲ್ಲ ಎಂದು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಎಚ್ಚರಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ‘ಸಾರ್ವಜನಿಕ ಸ್ಥಳಗಳಲ್ಲಿ ಪುತ್ಥಳಿ ನಿರ್ಮಾಣದ ನಿರ್ವಹಣೆಯ ಜಿಲ್ಲಾ ಮಟ್ಟದ ಟಾಸ್ಕ್ ಪೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಾರ್ವಜನಿಕ ಶಾಂತಿಗೆ ಭಂಗ

ಜಿಲ್ಲೆಯ ಕೆಲವೆಡೆ ಸಾರ್ವಜನಿಕ ಸ್ಥಳಗಳಲ್ಲಿ ದೇಶ ಸೇವೆಗೆ ಶ್ರಮಿಸಿದ ಮಹನೀಯರ ನಾಮಫಲಕಗಳನ್ನು, ಪ್ರತಿಮೆಗಳನ್ನು ಹಾಗೂ ಪುತ್ಥಳಿಗಳನ್ನು ಅನಧಿಕೃತವಾಗಿ ನಿರ್ಮಿಸುತ್ತಿರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಿದೆ. ಈ ರೀತಿಯ ಕಾನೂನು ಬಾಹಿರವಾಗಿ ಪುತ್ಥಳಿ ನಿರ್ಮಿಸಿ, ನಾಮಫಲಕ ಹಾಕಿ ಸಾರ್ವಜನಿಕ ಶಾಂತಿಗೆ ಭಂಗ ಉಂಟಾಗುವ ರೀತಿ ಯಾವುದೇ ವ್ಯಕ್ತಿಗಳು ಅಥವಾ ಸಂಘ ಸಂಸ್ಥೆಗಳು ನಡೆದುಕೊಳ್ಳಬಾರದು. ಪುತ್ಥಳಿ ಸ್ಥಾಪನೆ ಹಾಗೂ ನಾಮಫಲಕ ಹಾಕಲು ಅನುಮತಿ ಪಡೆಯುವುದು ಕಡ್ಡಾಯ ಎಂದು ಹೇಳಿದರು.

ಟಾಸ್ಕ್‌ಫೋರ್ಸ್‌ ಸಮಿತಿ ಕ್ರಮ

ಈ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ನಿರಂತರವಾಗಿ ನಿಗಾ ಇಡಲು ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಟಾಸ್ಕ್ ಫೋರ್ಸ್ ಸಮಿತಿಗಳನ್ನು ರಚಿಸಲಾಗಿದೆ. ಸರ್ಕಾರಿ ಜಾಗದಲ್ಲಿ ಯಾವುದೇ ಪುತ್ಥಳಿಗಳು, ನಾಮಫಲಕಗಳು ಅನಧಿಕೃತವಾಗಿ ಯಾವುದೇ ವ್ಯಕ್ತಿಗಳಿಂದ ಹಾಗೂ ಸಂಘ ಸಂಸ್ಥೆಗಳಿಂದ ನಿರ್ಮಾಣವಾದಲ್ಲಿ ಅಂತಹವರ ಮೇಲೆ ತಾಲೂಕು ಮಟ್ಟದ ಟಾಸ್ಕ್ ಪೋರ್ಸ್ ಸಮಿತಿಗಳು ಕಾನೂನು ಕ್ರಮ ಜರುಗಿಸಬೇಕು ಹಾಗೂ 24 ಗಂಟೆಯ ಒಳಗೆ ಕಾರ್ಯಾಚರಣೆ ಪುತ್ಥಳಿ, ನಾಮಫಲಕಗಳನ್ನು ತೆರವುಗೊಳಿಸಿ ಜಿಲ್ಲಾಡಳಿತಕ್ಕೆ ಒಪ್ಪಿಸಬೇಕು ಎಂದರು.

ಸಾಮಾಜಿಕ ಹೊಣೆಗಾರಿಕೆ ಯೋಜನೆಯಡಿ (ಸಿ.ಎಸ್.ಆರ್) ಯಾವುದೇ ಖಾಸಗಿ ಸಂಸ್ಥೆಗಳು ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳುವ ಮುನ್ನ ಸರ್ಕಾರದ ಮಾರ್ಗಸೂಚಿ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ವಿಸ್ತೃತ ಯೋಜನಾ ವರದಿಗಳ (ಡಿಪಿಆರ್)ನ್ನು ಸಂಬಂಧಪಟ್ಟ ಇಲಾಖೆಗೆ ಸಲ್ಲಿಸಿ ಅನುಮತಿ ಪಡೆದ ನಂತರ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.

ಆ. 7ಕ್ಕೆ ಜನಸ್ಪಂದನಾ ಕಾರ್ಯಕ್ರಮಸಾರ್ವಜನಿಕರ ಅಹವಾಲುಗಳನ್ನು ಹಾಗೂ ಮನವಿಗಳನ್ನು ಆಲಿಸಿ, ಜನರ ಸಮಸ್ಯೆಗಳನ್ನು ಸ್ಥಳೀಯವಾಗಿ ಪರಿಹರಿಸಲು ಸರ್ಕಾರ ರೂಪಿಸಿರುವ ಜನಸ್ಪಂದನಾ ಕಾರ್ಯಕ್ರಮವನ್ನು ಆಗಸ್ಟ್ 7 ರಂದು ಜಿಲ್ಲೆಯ ಚೇಳೂರು ತಾಲ್ಲೂಕು ಕೇಂದ್ರದಲ್ಲಿ ಹಮ್ಮಿಕೊಂಡಿದ್ದು, ಸ್ಥಳೀಯ ಸಾರ್ವಜನಿಕರು ಈ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಳ್ಳಬೇಕು. ಆಗಸ್ಟ್ 7 ಕ್ಕೆ ಮುಂಚಿತವಾಗಿ ಸ್ಥಳೀಯ ಸಾರ್ವಜನಿಕರು ತಾಲ್ಲೂಕು ಆಡಳಿತಕ್ಕೆ ತಮ್ಮ ಅಹವಾಲುಗಳನ್ನು ಹಾಗೂ ಮನವಿಗಳನ್ನು ಸಲ್ಲಿಸಿ ಸ್ವೀಕೃತಿ ಪಡೆದಲ್ಲಿ ಕಾನೂನು ರೀತ್ಯ ತಮ್ಮ ಅರ್ಜಿಗಳನ್ನು ವಿಲೇವಾರಿ ಮಾಡಲಾಗುವುದು ಎಂದರು.

ಅರ್ಜಿಗಳ ವಿಲೇವಾರಿಗೆ ಕ್ರಮ

ಸ್ಥಳೀಯವಾಗಿ ಬಗೆಹರಿಸಲು ಸಾಧ್ಯವಾದಲ್ಲಿ ಕಾರ್ಯಕ್ರಮದಂದೆ ಕೆಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಕ್ರಮವಹಿಸಲಾಗುವುದು. ಬಾಕಿ ಅರ್ಜಿಗಳನ್ನು ಕಾಲಮಿತಿಯಲ್ಲಿ ವಿಲೇವಾರಿ ಮಾಡಲಾಗುವುದು. ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿಯು ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ ಆನ್ ಲೈನ್ ತಂತ್ರಾಂಶದಲ್ಲಿ ನಮೂದಿಸಿ ಪರಿಹಾರ ಕ್ರಮಕ್ಕೆ ಸಂಬಂಧಪಟ್ಟ ಇಲಾಖೆಗಳಿಗೆ ವರ್ಗಾಯಿಸಲು ಜಿಲ್ಲಾಧಿಕಾರಿಗಳು ಸೂಚಿಸಿದರು. ಈ ಸಂದರ್ಭದಲ್ಲಿ ಜಿಪಂ ಸಿಇಒ ಡಾ. ವೈ. ನವೀನ್ ಭಟ್, ಎಸ್ಪಿ ಕುಶಲ್ ಚೌಕ್ಸೆ, ಅಪರ ಡಿಸಿ ಡಾ. ಎನ್. ಭಾಸ್ಕರ್, ಉಪವಿಭಾಗಾಧಿಕಾರಿ ಡಿ.ಎಚ್. ಅಶ್ವಿನ್ ಇತರ ಅಧಿಕಾರಿಗಳು ಇದ್ದರು.