ಸಾರಾಂಶ
ಕನ್ನಡಪ್ರಭ ವಾರ್ತೆ, ಚಿತ್ರದುರ್ಗ
ಪ್ರಜಾ ಪ್ರಾತಿನಿಧ್ಯ ಕಾಯಿದೆ, 1951ರ ಸೆಕ್ಷನ್ 127-A ಅನ್ವಯ ಚುನಾವಣಾ ಕರಪತ್ರಗಳು ಮತ್ತು ಪೋಸ್ಟರ್‌ಗಳ ಮುದ್ರಣ ಮತ್ತು ಪ್ರಕಟಣೆಗೆ ಅನುಮತಿ ಕಡ್ಡಾಯವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ನೀಡಿದರು.ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ-2024ರ ಸಂಬಂಧ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ರಾಜಕೀಯ ಪಕ್ಷದ ಪ್ರತಿನಿಧಿಗಳು ಹಾಗೂ ಮುದ್ರಣಾಲಯಗಳ ಮಾಲೀಕರ ಸಭೆ ನಡೆಸಿ ಮಾತನಾಡಿದ ಅವರು, ಯಾವುದೇ ಮುದ್ರಿತ ಚುನಾವಣಾ ಕರಪತ್ರ, ಪ್ಲೇಕಾರ್ಡ್ ಅಥವಾ ಪೋಸ್ಟರ್, ಮಲ್ಟಿಗ್ರಾಫ್ ಮುಂಭಾಗದಲ್ಲಿ ಮುದ್ರಕರ ಹಾಗೂ ಪ್ರಕಾಶಕರ ಹೆಸರು ಮತ್ತು ವಿಳಾಸವನ್ನು ನಮೂದು ಮಾಡಬೇಕು. ಇದರ ಜೊತೆಗೆ ಮುದ್ರಿಸಿದ ಪ್ರತಿಗಳ ಸಂಖ್ಯೆ ಸಹ ನಮೂದಿಸಬೇಕು. ಚುನಾವಣಾ ಸಾಮಗ್ರಿಗಳನ್ನು ಬೆಂಗಳೂರಿನಲ್ಲಿ ಮುದ್ರಿಸಿದ್ದರೆ ಮುದ್ರಕನು ತನ್ನ ಘೋಷಣೆಯನ್ನು ಮುಖ್ಯ ಚುನಾವಣಾ ಧಿಕಾರಿಗಳು, ಮತ್ತು ಚುನಾವಣಾಧಿಕಾರಿಗೆ ಹಾಗೂ ಬೇರೆ ಜಿಲ್ಲೆಗಳಲ್ಲಿ ಮುದ್ರಿಸಿದ್ದರೆ ಜಿಲ್ಲಾ ಮ್ಯಾಜಿಸ್ಟ್ರೇಟ್‍ಗೆ ಒಂದು ಪ್ರತಿಯನ್ನು ಕಳುಹಿಸಬೇಕು. ಜಿಲ್ಲೆಯಲ್ಲಿ ಮುದ್ರಿತ ವಸ್ತುಗಳ ನಾಲ್ಕು ಪ್ರತಿಗಳನ್ನು ಮುದ್ರಣದ ಹತ್ತು ದಿನಗಳೊಳಗೆ ಪ್ರಕಾಶಕರ ಘೋಷಣೆಗಳನ್ನು ತಪ್ಪದೇ ಜಿಲ್ಲಾಧಿಕಾರಿ ಕಚೇರಿಗೆ ತಲುಪಿಸಬೇಕು. ನಿಬಂಧನೆಗಳನ್ನು ಪಾಲಿಸದೇ ಇದ್ದರೆ ಕಾನೂನಿನ ಪ್ರಕಾರ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಿ.ಎನ್.ಮೈಲಾರಪ್ಪ, ಸಿಪಿಐ (ಎಂ) ಡಿಒಸಿ ಸಿ.ಕೆ.ಗೌಸ್‍ಪೀರ್, ಸಿಪಿಐ ಜಿಲ್ಲಾ ಕಾರ್ಯದರ್ಶಿ ಜಿ.ಸಿ ಸುರೇಶ್ ಬಾಬು, ಸತ್ಯಕೀರ್ತಿ, ಜೆಡಿಎಸ್ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಡಿ.ಗೋಪಾಲಸ್ವಾಮಿ ನಾಯಕ, ಬಿಜೆಪಿಯ ಟಿ.ಯಶವಂತ ಕುಮಾರ್ ಸೇರಿದಂತೆ ಮುದ್ರಣಾಲಯಗಳ ಮಾಲೀಕರು ಇದ್ದರು.