ಸಾರಾಂಶ
ಆತ್ಮಭೂಷಣ್
ಕನ್ನಡಪ್ರಭ ವಾರ್ತೆ ಮಂಗಳೂರುಮಂಗಳೂರಿನಲ್ಲಿ ಪರ್ಮಿಟ್ ಮತ್ತು ಎಲೆಕ್ಟ್ರಿಕ್ ಅಟೋರಿಕ್ಷಾಗಳ ನಡುವಿನ ವಿವಾದ ಇನ್ನೂ ಬಗೆಹರಿದಿಲ್ಲ. ಕಳೆದ ಎರಡು ಬಾರಿ ವಿಧಾನಸಭಾ ಅಧಿವೇಶನದಲ್ಲಿ ಈ ಬಗ್ಗೆ ಪ್ರಸ್ತಾಪವಾಗಿದ್ದು, ಸರ್ಕಾರ ಪರಿಹರಿಸುವ ಭರವಸೆ ನೀಡಿದ್ದು ಬಿಟ್ಟರೆ ಸಮಸ್ಯೆ ಇನ್ನೂ ಜ್ವಲಂತವಾಗಿಯೇ ಇದೆ. ಈ ಬಾರಿಯ ಅಧಿವೇಶನದಲ್ಲೂ ಮತ್ತೆ ಈ ಸಮಸ್ಯೆ ಬಗೆಹರಿಸುವ ಭರವಸೆ ದೊರೆತಿದೆ!
7 ವರ್ಷಗಳಿಂದ ಜೀವಂತ ವಿವಾದ:2018ರಲ್ಲಿ ಎಲೆಕ್ಟ್ರಿಕಲ್ ಆಟೋರಿಕ್ಷಾಗಳಿಗೆ ಕೇಂದ್ರ ಸರ್ಕಾರದ ಮೋಟಾರು ವಾಹನ ಕಾಯ್ದೆಯ ನಿಯಮದಂತೆ ದೇಶಾದ್ಯಂತ ಪರವಾನಿಗೆ ರಹಿತ ಮುಕ್ತ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದರ ಎಫೆಕ್ಟ್ ಮಂಗಳೂರಿಗೂ ತಟ್ಟಿದ್ದು, ಕಳೆದ ಏಳು ವರ್ಷಗಳಲ್ಲಿ ಮೂರು ಸಾವಿರಕ್ಕೂ ಅಧಿಕ ಇ ಆಟೋರಿಕ್ಷಾಗಳು ಮಂಗಳೂರು ರಸ್ತೆಗೆ ಇಳಿದಿವೆ. ಇದರಿಂದಾಗಿ ಈಗಾಗಲೇ ಬಾಡಿಗೆ ಮಾಡುತ್ತಿರುವ ಏಳು ಸಾವಿರದಷ್ಟು ಪರ್ಮಿಟ್ ಹೊಂದಿರುವ ಆಟೋರಿಕ್ಷಾಗಳಿದ್ದು, ಇವುಗಳು ತೊಂದರೆ ಎದುರಿಸುವಂತಾಗಿದೆ. ಆಟೋರಿಕ್ಷಾಗಳ ಸಂಖ್ಯೆ ನಗರ ಪ್ರದೇಶದಲ್ಲಿ ಮಿತಿಮೀರಿದ ಕಾರಣ ಸರಿಯಾದ ಬಾಡಿಗೆ ಇಲ್ಲದೆ ಚಾಲಕರು ಪರದಾಟ ನಡೆಸುತ್ತಿದ್ದಾರೆ. ತಮಿಳುನಾಡು ಮಾದರಿ ಏನಿದು ಪರಿಹಾರ?:
ಮುಕ್ತ ಪರವಾನಿಗೆಯಡಿ ಸಂಚರಿಸುವ ಎಲೆಕ್ಟ್ರಿಕ್ ಆಟೋಗಳಿಗೆ ಕಡಿವಾಣ ಹಾಕಲು ತಮಿಳನಾಡು ಮಾದರಿಯನ್ನು ಅನುಸರಿಸುವಂತೆ ರಾಜ್ಯ ಸರ್ಕಾರಕ್ಕೆ ಮಂಗಳೂರಿನ ಜನಪ್ರತಿನಿಧಿಗಳು ಒತ್ತಾಯಿಸುತ್ತಿದ್ದಾರೆ.ತಮಿಳುನಾಡಿನಲ್ಲಿ ಇ ಆಟೋಗಳಿಗೆ 2020ರಲ್ಲಿ ಪ್ರತ್ಯೇಕ ಕಾನೂನು ಜಾರಿಗೆ ತಂದಿದೆ. ಹೊಸದಾಗಿ ರಸ್ತೆಗೆ ಇಳಿಸುವ ಇ ಆಟೋಗಳು ಕಡ್ಡಾಯ ಪರವಾನಿಗೆ ಮಾಡಿಸಬೇಕು. ಆದರೆ ನೋಂದಣಿ ಶುಲ್ಕ ಇರುವುದಿಲ್ಲ. ಈ ವೇಳೆ ಆಟೋಗಳ ನಗರ-ಗ್ರಾಮಾಂತರ ವರ್ಗೀಕರಣದಿಂದಾಗಿ ಆಟೋಗಳ ಬೇಕಾಬಿಟ್ಟಿ ಓಡಾಟಕ್ಕೆ ಕಡಿವಾಣ ಬಿತ್ತು. ದೆಹಲಿಯಲ್ಲಿ ಪ್ರತಿ ವರ್ಷ 500 ಹೊಸ ಆಟೋಗಳಿಗೆ ಮಾತ್ರ ಪರವಾನಿಗೆ ನೀಡುತ್ತಾರೆ. ಈ ಮಾದರಿಯನ್ನು ಮಂಗಳೂರಲ್ಲೂ ಜಾರಿಗೆ ತಂದರೆ ಯಾವುದೇ ತೊಂದರೆಯಾಗದು ಎಂದು ಸ್ಥಳೀಯ ಶಾಸಕ ವೇದವ್ಯಾಸ್ ಕಾಮತ್ ಹಾಗೂ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆದಿದ್ದರು. ಇದಕ್ಕೆ ಈ ಬಾರಿಯೂ ಸರ್ಕಾರ ಹಿಂದಿನಂತೆ ಸಮಸ್ಯೆ ಇತ್ಯರ್ಥಕ್ಕೆ ಒಪ್ಪಿದ್ದು, ತಮಿಳುನಾಡು ಮಾದರಿಯ ಅಧ್ಯಯನ ನಡೆಸುವುದಾಗಿ ಭರವಸೆ ನೀಡಿದೆ.
-------------------ಒಮ್ಮೆ ನಿರ್ಬಂಧ, ಮತ್ತೆ ತೆರವು2021ರಲ್ಲಿ ಪರ್ಮಿಟ್ ಮತ್ತು ಇ ಆಟೋರಿಕ್ಷಾಗಳ ಜಟಾಪಟಿ ತಾರಕಕ್ಕೆ ಏರಿದಾಗ ಪ್ರಾದೇಶಿಕ ಸಾರಿಗೆ ಅಧಿಕಾರಿಯಾದ ಜಿಲ್ಲಾಧಿಕಾರಿಗಳು ಅಧಿಕಾರ ಬಳಸಿ ಹೊಸ ಆಟೋಗಳ ನಗರ ಪ್ರವೇಶ ನಿರ್ಬಂಧಿಸಿದ್ದರು. ಇದರಿಂದಾಗಿ ಆಟೋರಿಕ್ಷಾಗಳ ಮಾರಾಟಕ್ಕೆ ತೊಡಕಾಗುತ್ತಿದೆ ಖಾಸಗಿ ಆಟೋರಿಕ್ಷಾ ಕಂಪನಿಯೊಂದು ಹೈಕೋರ್ಟ್ ನಿರ್ದೇಶನ ತಂದು ಜಿಲ್ಲಾಡಳಿತದ ನಿರ್ಬಂಧವನ್ನು ತೆಗೆದುಹಾಕುವಲ್ಲಿ ಯಶಸ್ವಿಯಾಗಿತ್ತು. ಇದರಿಂದಾಗಿ ಇ ಆಟೋಗಳು ನಗರದಲ್ಲಿ ಮುಕ್ತವಾಗಿ ಸಂಚರಿಸತೊಡಗಿತು. ಇದೇ ವೇಳೆ ಮಂಗಳೂರು ಮಹಾನಗರ ಪಾಲಿಕೆ ಕೂಡ ಆಟೋ ತಂಗುದಾಣಗಳಲ್ಲಿ ಇ ಆಟೋಗಳ ನಿಲುಗಡೆಗೆ ಆಸ್ಪದ ನೀಡಿ ಉರಿಯುವ ಬೆಂಕಿಗೆ ತುಪ್ಪ ಸುರಿಯಿತು. ಇದರಿಂದಾಗಿ ಪರ್ಮಿಟ್ ಮತ್ತು ಇ ಆಟೋ ಚಾಲಕರ ನಡುವೆ ಕಂದಕ ಹೆಚ್ಚುವಂತಾಯಿತು.
ಕ್ವೋಟ್ಸ್----ಮಂಗಳೂರಲ್ಲಿ ಕೆಲವು ಆಟೋ ಮಾಲೀಕರು ಒಂದಕ್ಕಿಂತ ಜಾಸ್ತಿ ಆಟೋರಿಕ್ಷಾಗಳನ್ನು ಹೊಂದಿದ್ದಾರೆ. ಇದಕ್ಕೆ ಕಡಿವಾಣ ಹಾಕಿ ಒಬ್ಬರಿಗೆ ಒಂದೇ ಆಟೋರಿಕ್ಷಾ ನಿಯಮ ರೂಪಿಸಬೇಕು. ಇ ಆಟೋಗಳನ್ನು ನೋಂದಾಯಿಸುವ ಬಗ್ಗೆ ಕಾನೂನಿಗೆ ತಿದ್ದುಪಡಿ ತರಬೇಕು. ಹೊರಗಿನವರು ಆಟೋ ಓಡಿಸುವುದನ್ನು ನಿರ್ಬಂಧಿಸಬೇಕು.
-ವಿಷ್ಣುಮೂರ್ತಿ, ಅಧ್ಯಕ್ಷರು, ದ.ಕ.ಜಿಲ್ಲಾ ಆಟೋರಿಕ್ಷಾ ಚಾಲಕರ ಸಂಘಹಳೆ ಪರವಾನಿಗೆಯ ಆಟೋ ಮತ್ತು ಹೊಸ ಇ ಆಟೋರಿಕ್ಷಾಗಳ ಓಡಾಟಕ್ಕೆ ಸಂಬಂಧಿಸಿ ಬಹಳ ಗೊಂದಲ ಇದೆ. ಇದರಿಂದಾಗಿ ಆಟೋ ಚಾಲಕರ ನಡುವೆ ಮನಸ್ತಾಪಕ್ಕೆ ಕಾರಣವಾಗಿದೆ. ಮೂರು ಬಾರಿ ಅಧಿವೇಶನದಲ್ಲಿ ಪ್ರಸ್ತಾಪಿಸಿದಾಗ ಸರ್ಕಾರ ಸಮಸ್ಯೆ ಇತ್ಯರ್ಥಕ್ಕೆ ಭರವಸೆ ನೀಡುತ್ತದೆಯೇ ವಿನಃ ಕಾರ್ಯಗತಗೊಳಿಸುತ್ತಿಲ್ಲ. ಇನ್ನಾದರೂ ತಮಿಳುನಾಡು ಮಾದರಿಯಲ್ಲಿ ಪರಿಹಾರ ಕಂಡುಕೊಳ್ಳಬೇಕಾಗಿದೆ.-ವೇದವ್ಯಾಸ್ ಕಾಮತ್, ಶಾಸಕರು, ಮಂಗಳೂರು ದಕ್ಷಿಣ.