ಕೇಂದ್ರದಿಂದ ರಾಜ್ಯಕ್ಕೆ ನಿರಂತರ ಅನ್ಯಾಯ

| Published : Apr 23 2024, 12:58 AM IST

ಸಾರಾಂಶ

ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಬಾಯಿ ಬಡಿದುಕೊಳ್ಳುತ್ತಿದ್ದಾರೆ. ಈ ಹಿಂದೆ ಮಾಜಿ ಸಿಎಂಗಳಾದ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಯಿ ಕಾಲದಲ್ಲೂ ರಾಜ್ಯಕ್ಕೆ ಅನ್ಯಾಯ ಆಗಿದೆ. ಈ ಬಗ್ಗೆ ದ್ವನಿ ಎತ್ತುವ ತಾಕತ್ತು, ಗಂಡಸು ಬಿಜೆಪಿಯಲ್ಲಿ ಇಲ್ಲ ಎಂದು ಚಾಮರಾಜನಗರ ಲೋಕಸಭಾ ಮೀಸಲು ಕ್ಷೇತ್ರದ ಬಹುಜನ ಸಮಾಜ ಪಾರ್ಟಿ ಅಭ್ಯರ್ಥಿ ಎಂ.ಕೃಷ್ಣಮೂರ್ತಿ ವಾಗ್ದಾಳಿ ನೆಡೆಸಿದರು.

ಕನ್ನಡಪ್ರಭ ವಾರ್ತೆ ಹನೂರು

ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಬಾಯಿ ಬಡಿದುಕೊಳ್ಳುತ್ತಿದ್ದಾರೆ. ಈ ಹಿಂದೆ ಮಾಜಿ ಸಿಎಂಗಳಾದ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಯಿ ಕಾಲದಲ್ಲೂ ರಾಜ್ಯಕ್ಕೆ ಅನ್ಯಾಯ ಆಗಿದೆ. ಈ ಬಗ್ಗೆ ದ್ವನಿ ಎತ್ತುವ ತಾಕತ್ತು, ಗಂಡಸು ಬಿಜೆಪಿಯಲ್ಲಿ ಇಲ್ಲ ಎಂದು ಚಾಮರಾಜನಗರ ಲೋಕಸಭಾ ಮೀಸಲು ಕ್ಷೇತ್ರದ ಬಹುಜನ ಸಮಾಜ ಪಾರ್ಟಿ ಅಭ್ಯರ್ಥಿ ಎಂ.ಕೃಷ್ಣಮೂರ್ತಿ ವಾಗ್ದಾಳಿ ನೆಡೆಸಿದರು.ಹನೂರು ಪಟ್ಟಣದ ದಿ.ಎಚ್.ನಾಗಪ್ಪ ವೃತ್ತ (ಖಾಸಗಿ ಬಸ್ ನಿಲ್ದಾಣ) ದಲ್ಲಿ ಬಿಎಸ್‌ಪಿ ವತಿಯಿಂದ ಹಮ್ಮಿಕೊಂಡಿದ್ದ ರ್‍ಯಾಲಿ ಹಾಗೂ ಮತಪ್ರಚಾರದಲ್ಲಿ ಮಾತನಾಡಿದರು.ಬಿಜೆಪಿಯಿಂದ ಏನು ಬಂದಿಲ್ಲ:

ಕೇಂದ್ರದಿಂದ ತಮಿಳುನಾಡಿಗೆ 300ಕೋಟಿ ಅನುದಾನ, ಕರ್ನಾಟಕಕ್ಕೆ ಬರಿ 50ಕೋಟಿ ಬಂದಿದೆ. ಕೇಂದ್ರ ಬಜೆಟ್‌ನ ಶೇ.10ರಷ್ಟು ಹಣ ರೈತರಿಗೆ ದಕ್ಕಿಲ್ಲ, ರೈತರ ಸಾಲ ಮನ್ನಾ ಮಾಡಿಲ್ಲ. ಬಿಜೆಪಿಯ ರಾಜ್ಯದ 25 ಸಂಸದರ ಕೊಡುಗೆ ಏನು ಎಂದು ಪ್ರಶ್ನಿಸಿದರು. ಮೊದಲು ಸಿಇಟಿ ಇತ್ತು, ಇದೀಗ ನೀಟ್ ಪರೀಕ್ಷೆಯಿಂದ ಕರ್ನಾಟಕದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಕೇಂದ್ರಸರ್ಕಾರ ಅನ್ಯಾಯ ಮಾಡಿದೆ. ನೀಟ್ ರದ್ದು ಬಗ್ಗೆ ತಮಿಳುನಾಡು ಸಂಸದರು ಧ್ವನಿ ಇದ್ದು, ಕರ್ನಾಟಕದಲ್ಲಿ ಧ್ವನಿ ಎತ್ತುವ ಧೈರ್ಯವಿಲ್ಲವಾಗಿದೆ. ವಿದ್ಯಾರ್ಥಿ ವೇತನ ನಿಲ್ಲಿಸಿ, ರೈತ ವಿರೋಧಿ ಮೂರು ಕೃಷಿ ಕಾಯ್ದೆ ತಂದು ನೂರಾರು ರೈತರ ಸಾವಾಗಿದೆ. ಕಾವೇರಿ ನ್ಯಾಯಾಲಯ ಮಂಡಳಿ ತಮಿಳುನಾಡಿಗೆ ಕಾವೇರಿ ನೀರು ಹರಿವು ಮಾಡುತ್ತಿದೆ ಈ ಬಗ್ಗೆ ನರೇಂದ್ರಮೋದಿ ಕೇಂದ್ರ ಸರ್ಕಾರ ಮಧ್ಯ ಪ್ರವೇಶ ವಿಲ್ಲ, ಹೊಗೇನೆಕಲ್, ಮೇಕೆದಾಟು ಅಣೆಕಟ್ಟುಗೆ ಅನುಮತಿ ನೀಡಿಲ್ಲ ಎಂದು ವಾಗ್ದಾಳಿ ನಡಿಸಿ, ಬಿಜೆಪಿ ಎಲೆಕ್ಟ್ರಾಲ್ ಬಾಂಡ್ ಮೂಲಕ ಬಿಜೆಪಿ ಹಣ ಪಡೆದಿದೆ ಎಂದು ಆರೋಪಿದರು.

ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಹಣ, ಹೆಂಡ ಹಂಚದೆ, ಸುಳ್ಳು ಹೇಳದೆ ಚುನಾವಣೆ ನೆಡೆಸಲ್ಲ ಹೀಗಾಗಿ ಸಮಗ್ರ ಅಭಿವೃದ್ಧಿಗೆ ಶ್ರಮಿಸುವ ಬಿಎಸ್‌ಪಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಪ್ರವಾಸೋಧ್ಯಮಕ್ಕೆ ಒತ್ತು:

ಚಾಮರಾಜನಗರ ಜಿಲ್ಲೆಗೆ ಸೂಪರ್ ಸ್ಪೆಷಲಿಟಿ ಹಾಸ್ಪಿಟಲ್, ತಾಲೂಕಿನ ಆಸ್ಪತ್ರೆ ಮೇಲ್ದಾರ್ಜೆಗೇರಿಸುವುದು, ವಿಶ್ವವಿದ್ಯಾನಿಲಯ ಸೇರಿದಂತೆ ಶಿಕ್ಷಕರ ಖಾಯಂ ನೇಮಕ, ಡ್ಯಾಮ್ ಬಳಸಿಕೊಂಡು ಸಾವಿರಾರು ಕೆರೆಗಳಿಗೆ ನೀರು ತುಂಬಿಸುವುದು, ಕಾರ್ಖಾನೆ ಸ್ಥಾಪನೆ, ಚಾಮರಾಜನಗರ ಸ್ಮಾರ್ಟ್‌ ಸಿಟಿ ಪರಿವರ್ತನೆ ಮಾಡಿ ಮಹದೇಶ್ವರಬೆಟ್ಟ ಹೊಗೇನೆಕಲ್ ನಿಂದ ಎಚ್‌.ಡಿ.ಕೋಟೆ ತನಕ ಪ್ರವಾಸೋದ್ಯಮಕ್ಕೆ ಒತ್ತು ನೀಡಲಾಗುವುದು ಎಂದರು.

55ವರ್ಷ ಆಡಳಿತ ಮಾಡಿದ ಕಾಂಗ್ರೆಸ್ ಮೀಸಲಾತಿ ಸಂವಿಧಾನ ಬಗ್ಗೆ ಮಾತನಾಡುತ್ತಿದ್ದಾರೆ, 110 ತಿದ್ದುಪಡಿ ಮಾಡಿ ದುರ್ಬಲಗೊಳಿಸಿದ್ದಾರೆ. ಚಾಮರಾಜನಗರ ಜಿಲ್ಲೆ ಹಿಂದುಳಿದ ಜಿಲ್ಲೆಯಗಿರುವುದಕ್ಕೆ ಕಾಂಗ್ರೆಸ್ ಕಾರಣವಾಗಿದೆ ಕೇವಲ ಗ್ಯಾರಂಟಿ ಬಗ್ಗೆ ಮಾತನಾಡುತ್ತಿದೆ ಅಭಿವೃದ್ಧಿ ಬಗ್ಗೆ ಇಲ್ಲ ಸಿದ್ದರಾಮಯ್ಯ ಹಾಗೂ ಮಹದೇವಪ್ಪರನ್ನು ನಂಬಬೇಡಿ ಎಂದರು.

ಅಪ್ಪ ಮಂತ್ರಿ, ಹಣ, ಅಧಿಕಾರ ಇದೆ ಇಲ್ಲಿನ ಕಾಂಗ್ರೆಸ್ ಅಭ್ಯರ್ಥಿ ಮೋಜು ಮಸ್ತಿಯಲ್ಲೇ ಕಾಲಹರಣ ಮಾಡುತ್ತಾರೆ, ಸಂವಿಧಾನ, ಬಜೆಟ್ ಮಂಡನೆ ಬಗ್ಗೆ ಅರಿವಿಲ್ಲ ಬೇಕಿದ್ದರೆ ಚರ್ಚೆ ಬರಲಿ ಎಂದು ಸವಾಲ್ ಎಸೆದರು. ಬಿಜೆಪಿ ಅಭ್ಯರ್ಥಿ ಒಂದೂ ಬಾರಿ ಶಾಸಕರಾಗಿದ್ದರು ಅನುದಾನ, ಕೊಡುಗೆ ಅಭಿವೃದ್ಧಿ ಇಲ್ಲ, ಪಕ್ಷಾಂತರ ಮಾಡಿದ್ದಾರೆ ಬಿಜೆಪಿ ಗೆದ್ದರು ಪ್ರಯೋಜನವಿಲ್ಲ ಎಂದು ಟೀಕಿಸಿದರು.

ಇದಕ್ಕೂ ಮುನ್ನ ಹನೂರು ಪಟ್ಟಣದ ಅನ್ನಪೂರ್ಣ ಹೋಟೆಲ್ ಬಳಿಯಿಂದ ರ್‍ಯಾಲಿ ಆರಂಭವಾಗಿ ಮಲೆ ಮಹದೇಶ್ವರಬೆಟ್ಟ ಮುಖ್ಯ ರಸ್ತೆ ಮೂಲಕ ಕೊಳ್ಳೇಗಾಲ ಮಾರ್ಗವಾಗಿ ಸಾಗಿತು.

ಈ ವೇಳೆ ಬಿಎಸ್‌ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹ.ರಾ.ಮಹೇಶ್, ಜಿಲ್ಲಾಧ್ಯಕ್ಷ ಎನ್.ನಾಗಯ್ಯ, ಜಿಲ್ಲಾ ಉಪಾಧ್ಯಕ್ಷ ಶಾಗ್ಯ ಮಹೇಶ್, ಬ್ಯಾಡಮೂಡ್ಲು ಬಸವಣ್ಣ, ಕೊಳ್ಳೇಗಾಲ ಹನುಮಂತು, ಪ್ರಧಾನ ಕಾರ್ಯದರ್ಶಿ ಬ.ಮ. ಕೃಷ್ಣಮೂರ್ತಿ, ಹನೂರು ತಾಲೂಕು ಘಟಕ ಅಧ್ಯಕ್ಷ ಸೀಗನಾಯಕ, ಜಿಲ್ಲಾ ಉಸ್ತುವಾರಿ ಪ್ರಕಾಶ ಅಮಚವಾಡಿ, ಬಿ.ವಿ.ಎಫ್ ಜಿಲ್ಲಾ ಸಂಯೋಜಕ ರವಿಮೌರ್ಯ, ಮುಡುಗುಂಡ ರವಿ ಹಾಗೂ ಮತ್ತಿತರರಿದ್ದರು.