ಸಾರಾಂಶ
ಶಿರಸಿ: ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು(ಎನ್‌ಐಎ) ತಂಡವು ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ ಆರೋಪದ ಹಿನ್ನೆಲೆ ವ್ಯಕ್ತಿಯೊಬ್ಬನನ್ನು ಮಂಗಳವಾರ ವಶಕ್ಕೆ ಪಡೆದು ವಿಚಾರಣೆಗಾಗಿ ಬೆಂಗಳೂರಿಗೆ ಕರೆದೊಯ್ದಿದೆ.
ಎನ್‌ಐಎ ತಂಡದವರು ತಾಲೂಕಿನ ದಾಸನಕೊಪ್ಪದ ದನಗನಹಳ್ಳಿಯ ಅಬ್ದುಲ್ ಶಕೂರ (೩೪) ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.ಈತನ ವಿರುದ್ಧ ಪಾಸ್‌ಪೋರ್ಟ್ ನಕಲಿ ಮಾಡಿರುವುದು, ನಕಲಿ ಪಾಸ್‌ಪೋರ್ಟ್ ಮಾಡಿ ವಿದೇಶಕ್ಕೆ ತೆರಳುವ ಪ್ರಯತ್ನ ನಡೆಸುತ್ತಿರುವ ಆರೋಪವಿತ್ತು. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ದೇಶವಿರೋಧಿ ಚಟುವಟಿಕೆ ಮಾಡುತ್ತಿರುವುದನ್ನು ಗಮನಿಸಿ ವಶಕ್ಕೆ ಪಡೆಯಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಕೋಮುಗಲಭೆಗೆ ಉತ್ತೇಜಿಸಿ ಪೋಸ್ಟ್ ಮಾಡಿದ್ದ ಎಂಬ ಆರೋಪದ ಜತೆಗೆ ರಾಮೇಶ್ವರಂ ಕೆಫೆ, ಶಿವಮೊಗ್ಗ ಸ್ಫೋಟಕ್ಕೆ ಸಂಬಂಧಿಸಿ, ತನಿಖೆ ನಡೆದಿದೆ ಎನ್ನಲಾಗಿದೆ.ಕಳೆದ ೨ ವರ್ಷದ ಹಿಂದೆ ನಿಷೇಧಿತ ಪಿಎಫ್‌ಐ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ನಗರದ ಬನವಾಸಿ ರಸ್ತೆಯ ಟಿಪ್ಪುನಗರದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿ, ವಿಚಾರಣೆಗೆ ಕರೆದುಕೊಂಡು ಹೋಗಿದ್ದರು. ನಿಷೇಧಿತ ಪಿಎಫ್‌ಐ ಸಂಘಟನೆಯಲ್ಲಿ ಇನ್ನೂ ಕೆಲವರು ಸಕ್ರಿಯರಾಗಿರುವ ಮಾಹಿತಿ ತಿಳಿದ ಎನ್‌ಐಎ ತಂಡವು ಜಿಲ್ಲೆಗೆ ಆಗಮಿಸಿ ಹಲವರನ್ನು ವಿಚಾರಣೆಗೆ ಒಳಪಡಿಸಿತ್ತು. ಅಲ್ಲದೇ, ಕೆಲ ವ್ಯಕ್ತಿಗಳನ್ನು ವಶಕ್ಕೆ ಪಡೆದಿದೆ. ಇನ್ನೂ ಕೆಲ ವ್ಯಕ್ತಿಗಳ ಮನೆಗೆ ತನಿಖಾ ತಂಡವು ದಾಳಿ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ. ಸ್ಥಳೀಯ ಪೊಲೀಸರಿಗೂ ಮಾಹಿತಿ ನೀಡದೇ ವಶಕ್ಕೆ ತಾಲೂಕಿನ ದನಗನಹಳ್ಳಿಯ ಅಬ್ದುಲ್ ಶಕೂರ ಮನೆಗೆ ಭೇಟಿ ನೀಡಿದ ತನಿಖಾ ತಂಡವು ಮನೆಯವರನ್ನು ವಿಚಾರಣೆ ಮಾಡಿದೆ. ಆನಂತರ ಅಬ್ದುಲ್ ಶಕೂರ ಪಾಸ್‌ಪೋರ್ಟ್, ಆಧಾರ್ ಕಾರ್ಡ್ ಸೇರಿದಂತೆ ಮತ್ತಿತರರ ದಾಖಲೆಗಳನ್ನು ಪರಿಶೀಲಿಸಿದೆ. ಅದರಲ್ಲಿ ನ್ಯೂನತೆಯನ್ನು ಪತ್ತೆಹಚ್ಚಿ, ವಶಕ್ಕೆ ಪಡೆದು ವಿಚಾರಣೆಗೆ ಬೆಂಗಳೂರಿಗೆ ಕರೆದುಕೊಂಡು ಹೋಗಲಾಗಿದೆ. ರಾಷ್ಟ್ರೀಯ ತನಿಖಾ ತಂಡವು ಆಗಮಿಸಿರುವುದು ಸ್ಥಳೀಯರು ಬನವಾಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆ ನಂತರ ಬನವಾಸಿ ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ.