ವಿದ್ಯುತ್ ಸ್ಪರ್ಶದಿಂದ ವ್ಯಕ್ತಿ ಸಾವು: ಗ್ರಾಪಂ ಕಚೇರಿ ಎದುರು ಶವ ಇಟ್ಟು ಪ್ರತಿಭಟನೆ

| Published : Jan 16 2025, 12:48 AM IST

ವಿದ್ಯುತ್ ಸ್ಪರ್ಶದಿಂದ ವ್ಯಕ್ತಿ ಸಾವು: ಗ್ರಾಪಂ ಕಚೇರಿ ಎದುರು ಶವ ಇಟ್ಟು ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯುತ್ ಸಂಪರ್ಕ ಕಡಿತಗೊಳಿಸದೇ ಕಂಬ ಏರಿ ಬಲ್ಬ್ ಅಳವಡಿಸಲು ಹೋಗಿದ್ದ ಎಲೆಕ್ಟ್ರಿಷಿಯನ್ ಕೆಂಚೇಗೌಡ ಸಾವಿಗೆ ಪಿಡಿಒ ನೇರ ಕಾರಣ ಎಂದು ಆರೋಪಿಸಿ ನೂರಾರು ಗ್ರಾಮಸ್ಥರು ಮತ್ತು ಸಾರ್ವಜನಿಕರು ಬುಧವಾರ ದಳವಾಯಿ ಕೋಡಿಹಳ್ಳಿ ಗ್ರಾಪಂ ಕಚೇರಿ ಎದುರು ಕೆಂಚೇಗೌಡರ ಶವಇಟ್ಟು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಹಲಗೂರು

ವಿದ್ಯುತ್ ಸಂಪರ್ಕ ಕಡಿತಗೊಳಿಸದೇ ಕಂಬ ಏರಿ ಬಲ್ಬ್ ಅಳವಡಿಸಲು ಹೋಗಿದ್ದ ಎಲೆಕ್ಟ್ರಿಷಿಯನ್ ಕೆಂಚೇಗೌಡ ಸಾವಿಗೆ ಪಿಡಿಒ ನೇರ ಕಾರಣ ಎಂದು ಆರೋಪಿಸಿ ನೂರಾರು ಗ್ರಾಮಸ್ಥರು ಮತ್ತು ಸಾರ್ವಜನಿಕರು ಬುಧವಾರ ದಳವಾಯಿ ಕೋಡಿಹಳ್ಳಿ ಗ್ರಾಪಂ ಕಚೇರಿ ಎದುರು ಕೆಂಚೇಗೌಡರ ಶವಇಟ್ಟು ಪ್ರತಿಭಟನೆ ನಡೆಸಿದರು.

ದೇವಿರಹಳ್ಳಿಯಲ್ಲಿ ವಿದ್ಯುತ್ ಕಂಬ ಏರಿ ಬಲ್ಬ್ ಅಳವಡಿಸಲು ಹೋಗುವ ಮುನ್ನ ಪಿಡಿಒ ಚೆಸ್ಕಾಂಗೆ ಮಾಹಿತಿ ನೀಡಿ ಸಂಪರ್ಕ ಕಡಿತಗೊಳಿಸಬೇಕಿತ್ತು. ಆದರೆ, ಗ್ರಾಪಂ ಪಿಡಿಒ ವಿಜಯ್ ಕುಮಾರ್ ಅವರ ಬೇಜವಾಬ್ದಾರಿಯಿಂದಾಗಿ ಕೆಂಚೇಗೌಡರ ಸಾವು ಸಂಭವಿಸಿದೆ. ಕೆಂಚೇಗೌಡ ಸಾವಿಗೆ ಪರೋಕ್ಷವಾಗಿ ಪಿಡಿಒ ವಿಜಯ್ ಕುಮಾರ್ ಕಾರಣ. ಅವರನ್ನು ತಕ್ಷಣ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದ ಕೆಂಚೇಗೌಡರು ಮೃತಪಟ್ಟಿದ್ದು, ಕುಟುಂಬಕ್ಕೆ ಅತಂತ್ರ ಸ್ಥಿತಿ ಎದುರಾಗಿದೆ. ಕುಟುಂಬದ ಸದಸ್ಯರಿಗೆ ಪಂಚಾಯ್ತಿಯಲ್ಲಿ ತಾತ್ಕಾಲಿಕ ಉದ್ಯೋಗ ನೀಡಬೇಕು ಮತ್ತು ಗ್ರಾಪಂನಿಂದ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ಮಂಡ್ಯ ಜಿಪಂ ಕಾರ್ಯದರ್ಶಿ ಬಾಬು, ತಾಪಂ ಇಒ ಎಚ್.ಜಿ.ಶ್ರೀನಿವಾಸ್, ಗ್ರಾಪಂ ಅಧ್ಯಕ್ಷ ಶಿವಣ್ಣ ನೇತೃತ್ವದಲ್ಲಿ ಜಂಟಿ ಸಭೆ ನಡೆಸಿ ಕುಟುಂಬಕ್ಕೆ 3 ಲಕ್ಷ ರು. ಪರಿಹಾರ ನೀಡುವುದಾಗಿ ಒಪ್ಪಿಕೊಂಡರು. ತನಿಖೆಯ ವರದಿ ಬಂದ ನಂತರ ಪಿಡಿಒ ವಿಜಯ್ ಕುಮಾರ್ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು.

ಭರವಸೆಯ ನಂತರ ಸಾರ್ವಜನಿಕರು ಪ್ರತಿಭಟನೆ ಹಿಂಪಡೆದು, ಮೃತದೇಹವನ್ನು ಅಂತ್ಯಕ್ರಿಯೆ ಮಾಡಲು ಕೆಂಪಯ್ಯನದೊಡ್ಡಿ ಗ್ರಾಮಕ್ಕೆ ಕೊಂಡೊಯ್ದರು. ಈ ವೇಳೆ ಕರ್ನಾಟಕ ಜನಪರ ವೇದಿಕೆ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಸಿಂಹ ಶ್ರೀನಿವಾಸ್, ಮುಖಂಡರಾದ ತಮ್ಮಣ್ಣಗೌಡ, ಮಹದೇವ, ಶಿವಣ್ಣ, ರವಿ, ಸುರೇಶ್, ಮೋಹನ್ ಕುಮಾರ್, ಜಯಶಂಕರ್, ಮಾದೇಗೌಡ ಸೇರಿದಂತೆ ಹಲವರು ಭಾಗವಹಿಸಿದ್ದರು.

ಬೀದಿ ದೀಪ ಅಳವಡಿಸುವಾಗ ವಿದ್ಯುತ್ ಸ್ಪರ್ಶ: ವ್ಯಕ್ತಿ ಸಾವು

ಹಲಗೂರು:

ಬೀದಿ ದೀಪ ಅಳವಡಿಸುವಾಗ ವಿದ್ಯುತ್ ಸ್ಪರ್ಶಿಸಿ ಕಂಬದಿಂದ ಬಿದ್ದು ತೀವ್ರ ಗಾಯಗೊಂಡ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ಸಮೀಪದ ದೇವಿರಹಳ್ಳಿಯಲ್ಲಿ ನಡೆದಿದೆ.ಹಲಗೂರು ಸಮೀಪದ ಕೆಂಪಯ್ಯನದೊಡ್ಡಿ ಗ್ರಾಮದ ಕೆಂಚೇಗೌಡ (62) ಮೃತ ವ್ಯಕ್ತಿ.

ದಳವಾಯಿ ಕೋಡಿಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಕಳೆದ 10 ವರ್ಷಗಳಿಂದ ಅಧ್ಯಕ್ಷ ಮತ್ತು ಪಿಡಿಒ ಅವರ ಮೌಖಿಕ ಆದೇಶದ ಮೇರೆಗೆ ಗುತ್ತಿಗೆ ಅಧಾರದಲ್ಲಿ ವಿದ್ಯುತ್ ಬಲ್ಬ್ ಅಳವಡಿಸುವ ಕೆಲಸ ಮಾಡುತ್ತಿದ್ದನು.

ದೇವಿರಹಳ್ಳಿಯಲ್ಲಿ ಮಂಗಳವಾರ ಬೆಳಗ್ಗೆ 10 ಗಂಟೆಗೆ ವಾಟರ್ ಮ್ಯಾನ್ ಬಸವಲಿಂಗೇಗೌಡರು ಕೆಂಚೇಗೌಡರಿಗೆ ಕರೆ ಮಾಡಿ ಬಲ್ಬ್ ಅಳವಡಿಸಲು ಕರೆದುಕೊಂಡು ಹೋಗಿದ್ದಾರೆ. ಗ್ರಾಮದ ಬೀದಿ ದೀಪ ಅಳವಡಿಸುವಾಗ ವಿದ್ಯುತ್ ಸ್ಪರ್ಶಿಸಿ ಅಯತಪ್ಪಿ ಕೆಳಗೆ ಬಿದ್ದಿದ್ದಾನೆ. ತೀವ್ರ ಗಾಯಗೊಂಡ ಕೆಂಚೇಗೌಡರನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ರಾತ್ರಿ ಮೃತಪಟ್ಟಿದ್ದಾರೆ. ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.