ಅಭಿವೃದ್ಧಿಗೆ ವೈಯಕ್ತಿಕ ಆರೋಗ್ಯವೇ ಮೆಟ್ಟಿಲು: ಡಾ.ಬಸವರಾಜೇಂದ್ರ

| Published : Oct 28 2024, 01:07 AM IST

ಅಭಿವೃದ್ಧಿಗೆ ವೈಯಕ್ತಿಕ ಆರೋಗ್ಯವೇ ಮೆಟ್ಟಿಲು: ಡಾ.ಬಸವರಾಜೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಚಾಮರಾಜನಗರ ತಾಲೂಕಿನ ಅರಕಲವಾಡಿ ಗ್ರಾಮದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಹಾಗೂ ಸ್ವಯಂಪ್ರೇರಿತ ರಕ್ತದಾನ ಶಿಬಿರಕ್ಕೆ ಗಣ್ಯರು ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಗ್ರಾಮಾಂತರ ಜನರ ಆರೋಗ್ಯ ಆರೋಗ್ಯಕರವಾಗಿದ್ದರೆ ಅವರ ಆರ್ಥಿಕ ಅಭಿವೃದ್ಧಿ ಸುಧಾರಿಸುವ ಮೂಲಕ ಗ್ರಾಮದ ಅಭಿವೃದ್ಧಿ ಸಾಧ್ಯ. ಈ ಮೂಲಕ ದೇಶ ಅಭಿವೃದ್ಧಿಯಾಗಲು ವ್ಯಕ್ತಿಯ ವೈಯಕ್ತಿಕ ಆರೋಗ್ಯವೇ ಪ್ರಥಮ ಮೆಟ್ಟಿಲು ಎಂದು ಬಸವ ರಾಜೇಂದ್ರ ಆಸ್ಪತ್ರೆಯ ಮುಖ್ಯಸ್ಥ ಹಾಗೂ ಲಯನ್ಸ್ ಕ್ಲಬ್‌ನ ಅಧ್ಯಕ್ಷ ಡಾ.ಎಂ.ಬಸವ ರಾಜೇಂದ್ರ ಹೇಳಿದರು.ಬಸವ ರಾಜೇಂದ್ರ ಮೆಡಿಕಲ್ ಟ್ರಸ್ಟ್, ಬಸವ ರಾಜೇಂದ್ರ ಆಸ್ಪತ್ರೆ ಮತ್ತು ರಕ್ತ ನಿಧಿ ಕೇಂದ್ರ, ಚಾಮರಾಜನಗರ ಲಯನ್ಸ್ ಕ್ಲಬ್, ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕ ಹಾಗೂ ಮಹಿಳಾ ಜಿಲ್ಲಾ ಘಟಕ ಮತ್ತು ಶಿವ ವಿವಿದೊದ್ದೇಶ ಸಹಕಾರ ಸಂಘದ ವತಿಯಿಂದ ತಾಲೂಕಿನ ಅರಕಲವಾಡಿ ಗ್ರಾಮದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಹಾಗೂ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು, ನಮ್ಮ ಜಿಲ್ಲೆ ಹಿಂದುಳಿದ ಹಣೆಪಟ್ಟಿಯನ್ನು ಕಳಚಿಕೊಂಡು ಮುಂದುವರೆಯುತ್ತಿರುವ ಜಿಲ್ಲೆಯಾಗಿ ನಿಂತಿದೆ. ಇನ್ನು ಅಭಿವೃದ್ಧಿ ಸಾಧಿಸಬೇಕಾದರೆ ಮನುಷ್ಯನಿಗೆ ಆರೋಗ್ಯ ಉತ್ತಮವಾಗಿರಬೇಕು. ಆರೋಗ್ಯ ಸುಧಾರಿಸಿದರೆ ದುಡಿಮೆ ಸುಧಾರಿಸುತ್ತದೆ. ಆ ಮೂಲಕ ಅವರ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗುವ ಮೂಲಕ ಹಳ್ಳಿಯ ಅಭಿವೃದ್ಧಿ ಅದರೊಂದಿಗೆ ದೇಶದ ಅಭಿವೃದ್ಧಿ ಸಾಧಿಸಲು ಸಾಧ್ಯವಾಗುತ್ತದೆ ಎಂದರು.ಇತ್ತೀಚಿನ ದಿನಗಳಲ್ಲಿ ಜನರ ಜೀವನ ಶೈಲಿಯ ಬದಲಾವಣೆಯಿಂದಾಗಿ ಗ್ರಾಮೀಣ ಜನತೆ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಅರಿವು ಮೂಡಿಸುವ ಉದ್ದೇಶದಿಂದ ಇಂತಹ ಶಿಬಿರಗಳನ್ನು ಆಯೋಜಿಸುತ್ತಿದ್ದೇವೆ. ಜನತೆ ಇದನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು. ಸಹಕಾರ ಸಂಘಗಳ ವತಿಯಿಂದ ಸರ್ಕಾರ ಜಾರಿ ಮಾಡಿರುವ ಆರೋಗ್ಯ ವಿಮೆ ಯಶಸ್ವಿನಿಯಂತಹ ಸದುಪಯೋಗಪಡಿಸಿಕೊಳ್ಳಿ, ಅಲ್ಲದೆ ಎಲ್ಲಾ ಮುಖಂಡರು ಈ ಬಗ್ಗೆ ಅರಿವು ಮೂಡಿಸಿ ಆರೋಗ್ಯ ವಿಮೆ ಅಭಿಯಾನ ಜಾರಿ ಮಾಡುವ ಮೂಲಕ ಫಲಾನಿಭವಿಗಳನ್ನು ಗುರುತಿಸಿ ಮಾಡಿಕೊಡಿ ಎಂದು ಮನವಿ ಮಾಡಿದರು. ರಕ್ತದಾನ ಜೀವದಾನ ಮಾಡಿದ ಹಾಗೆ. ರಕ್ತದಾನದ ಬಗ್ಗೆ ಇರುವಂತಹ ತಪ್ಪು ಕಲ್ಪನೆ ತೊರೆದು ಯುವ ಜನತೆ ರಕ್ತದಾನ ಮಾಡಲು ಮುಂದಾಗಬೇಕೆಂದು ಕರೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಎಸ್. ಗುರುಸ್ವಾಮಿ ಮಾತನಾಡಿ, ಮನುಷ್ಯನ ಸಂಪಾದನೆಯಲ್ಲಿ ಶೇ .೭೫ ಭಾಗ ಆರೋಗ್ಯ ಮತ್ತು ಶಿಕ್ಷಣಕ್ಕೆ ಖರ್ಚು ಮಾಡಬೇಕಾಗಿದೆ. ಕನಿಷ್ಠ ಜೀವನ ನಿರ್ವಹಣೆ ಹೊಂದಿರುವಂತಹ ವ್ಯಕ್ತಿ ಸಮಾಜ ಸೇವೆಗೆ ಬರಬೇಕು ಎಂದರು. ಇನ್ನು ಮುಂದೆ ಎಲ್ಲಾ ಉದ್ಯಮಿಗಳು ಹಾಗೂ ಸಮಾಜದ ಪ್ರಮುಖ ಮುಖಂಡರು ಅವರ ಜೊತೆಗೂಡಿ ಎಲ್ಲಾ ಆರೋಗ್ಯ ಕಾರ್ಯಕ್ರಮಗಳನ್ನು ಆಯೋಜಿಸೋಣ ಎಲ್ಲೇ ಅವರು ಶಿಬಿರ ನಡೆಸಿದರೂ ಅವರಿಗೆ ಕೈ ಜೋಡಿಸೋಣ ಎಂದು ಮನವಿ ಮಾಡಿದರು.

ಅರಕಲವಾಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಎಸ್. ಗುರುಸ್ವಾಮಿ ಹಾಗೂ ಅಖಿಲ ಭಾರತ ಲಿಂಗಾಯಿತ ವೀರಶೈವ ಮಹಾಸಭಾ ಜಿಲ್ಲಾ ನಿರ್ದೇಶಕ ಮಂಜೇಶ್ ರಕ್ತದಾನ ಮಾಡುವ ಮೂಲಕ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು. ಶಿಬಿರದಲ್ಲಿ ಸುಮಾರು ೩೦ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು. ಕಾರ್ಯಕ್ರಮದ ಸಾನ್ನಿಧ್ಯವನ್ನು ಅರಕಲವಾಡಿ ಪಟ್ಟದ ಮಠದ ಅಧ್ಯಕ್ಷ ಬಸವಣ್ಣಸ್ವಾಮಿಗಳು, ಅಧ್ಯಕ್ಷತೆಯನ್ನು ಗ್ರಾಪಂ ಉಪಾಧ್ಯಕ್ಷ ಹನುಮಂತನಾಯಕ, ಗ್ರಾಪಂ ಸದಸ್ಯರಾದ ಎಂ.ವೀರಪ್ಪ, ಸಿ.ರಾಮಯ್ಯ, ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಎ.ವಿ ರಾಜೇಂದ್ರ, ಜಿಲ್ಲಾ ನಿರ್ದೇಶಕರಾದ ಮೂಡ್ಲುಪುರ ಮಂಜೇಶ್, ಸ್ಟೈಲ್ ಮಂಜು, ಗುರುಪ್ರಸಾದ್, ಸದಸ್ಯರಾದ ಬಿಸಲವಾಡಿ ಉಮೇಶ್, ಪಿ ಮಹೇಶ್, ಅರಕಲವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ನವೀನ್ ಕುಮಾರ್, ಗ್ರಾಮದ ಮುಖಂಡರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.