ಸಾರಾಂಶ
ಕನ್ನಡಪ್ರಭ ವಾರ್ತೆ ಉಳ್ಳಾಲ
ಕಲೆಯ ಆಸ್ವಾದನೆಗೂ ವ್ಯಕ್ತಿ ಮನಸಿಗೂ ಸಂಬಂಧವಿದೆ. ಚಿತ್ರಕಲೆಯ ರಚನೆ ಮತ್ತು ಆಸ್ವಾದನೆಯಿಂದ ಏಕಾಗ್ರತೆ, ತಾಳ್ಮೆ, ನೆನಪು ಶಕ್ತಿ ಹಾಗೂ ಸೃಜನಶೀಲ ಆಲೋಚನೆಗಳು ಸಾಧ್ಯವಾಗಿ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ ಎಂದು ಚಿತ್ರ ಕಲಾವಿದೆ ಜಯಶ್ರೀ ಶರ್ಮ ಹೇಳಿದರು.ಅವರು ಮಂಗಳೂರು ವಿಶ್ವವಿದ್ಯಾನಿಲಯ ಎನ್.ಜಿ. ಪಾವಂಜೆ ಲಲಿತಕಲಾ ಪೀಠ ಮತ್ತು ಭಾಷೆ ಮತ್ತು ಸಂಸ್ಕೃತಿ ಅಧ್ಯಯನ ನಿಕೇತನ ಕನ್ನಡ ವಿಭಾಗ, ಸೈಂಟ್ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯ ಸಹಯೋಗದೊಂದಿಗೆ ಪ್ರಚಾರೋಪನ್ಯಾಸ ಮಾಲಿಕೆಯಡಿಯಲ್ಲಿ ನಡೆದ ಚಿತ್ರಕಲೆ ರಚನೆ ಮತ್ತು ಆಸ್ವಾದನೆ: ಕೆಲವು ಪ್ರತಿಕ್ರಿಯೆಗಳು ಎಂಬ ವಿಷಯದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.
ಚಿತ್ರಕಲೆಯಲ್ಲಿ ಪ್ರಾಚೀನ, ಸಾಂಪ್ರದಾಯಿಕ, ಸಮಕಾಲೀನ, ನೈಜ, ಸೃಜನಶೀಲ, ಅಮೂರ್ತ ಎಂಬ ವಿವಿಧ ಪ್ರಕಾರಗಳಿದ್ದು ಬಣ್ಣಗಳಿಗೂ ಅದರದ್ದೇ ಆದ ಸಾಂಕೇತಿಕತೆಯಿದೆ. ಇತ್ತೀಚೆಗೆ ಕಲರ್ ಥೆರಪಿ ಕೂಡ ವೈದ್ಯಕೀಯ ಕ್ಷೇತ್ರದಲ್ಲಿ ಸದ್ದು ಮಾಡುತ್ತಿದೆ ಎಂದರು.ವಿವಿಯ ಎನ್‌ಜಿ ಪಾವಂಜೆ ಪೀಠದ ಸಂಯೋಜಕ ಡಾ.ಧನಂಜಯ ಕುಂಬ್ಳೆ ಮಾತನಾಡಿ, ಪಾವಂಜೆಯವರು ಜಲವರ್ಣ ಮತ್ತು ತೈಲವರ್ಣ ಚಿತ್ರಗಳ ಮೂಲಕ ದೇಶಾದ್ಯಂತ ಪರಿಚಿತರಾದ ಕರಾವಳಿಯ ಪ್ರತಿಭೆ. ಮೈಸೂರು ಅರಸರ ಪ್ರೋತ್ಸಾಹದಿಂದ ಜರ್ಮನಿಗೆ ಹೋಗಿ ಗ್ರಾಫಿಕ್ ಕಲೆಯನ್ನು ಕಲಿತು ಬಂದ ಮೊದಲ ಕನ್ನಡಿಗ. ವಿವಿಯ ಪಾವಂಜೆ ಪೀಠ ಅವರ ನೆನಪಿನಲ್ಲಿ ಚಿತ್ರಕಲೆಗೆ ಸಂಬಂಧಿಸಿ ಅನೇಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ತಿಳಿಸಿದರು.
ಸೈಂಟ್ ಅಲೋಶಿಯಸ್ ಪರಿಗಣಿತ ವಿವಿಯ ಕನ್ನಡ ವಿಭಾಗ ಮುಖ್ಯಸ್ಥ ಡಾ.ಮಹಾಲಿಂಗ ಭಟ್, ಮಾತನಾಡಿದರು.ವಿದ್ಯಾರ್ಥಿನಿ ಮೇಘನಾ ಸ್ವಾಗತಿಸಿದರು. ಉಪನ್ಯಾಸಕ ಕ್ರಿಸ್ಟೋಫರ್ ನೀನಾಸಂ ವಂದಿಸಿದರು. ಎನ್.ಮೊಹಮ್ಮದ್ ಹಫೀಜ್ ನಿರೂಪಿಸಿದರು. ನಾಟಕ ಸಂಘ ಮತ್ತು ಕನ್ನಡ ಸಂಘದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.