ಸಾರಾಂಶ
Personality development through cultural activities: Patil
-ಸಾಂಸ್ಕೃತಿಕ, ಕ್ರೀಡೆ, ಎನ್ನೆಸ್ಸೆಸ್, ವಿವಿಧ ಘಟಕಗಳ ಚಟುವಟಿಕೆಗಳ ಉದ್ಘಾಟನೆ
----ಕನ್ನಡಪ್ರಭ ವಾರ್ತೆ ಶಹಾಪುರ
ವಿದ್ಯಾರ್ಥಿಗಳು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದರಿಂದ ವ್ಯಕ್ತಿತ್ವ ವಿಕಸನವಾಗುತ್ತದೆ. ಪ್ರತಿಯೊಬ್ಬರು ಸಮಾಜದಲ್ಲಿ ಉತ್ತಮ ನಾಗರಿಕನಾಗಿ ಹೊರಹೊಮ್ಮಬೇಕಾದರೆ ಗುರಿ, ಛಲ ಹಾಗೂ ಏಕಾಗ್ರತೆಯಿಂದ ಶಿಕ್ಷಣದಲ್ಲಿ ತೊಡಗಬೇಕು ಎಂದು ಪೊಲೀಸ್ ಇನ್ಸ್ ಪೆಕ್ಟರ್ ಎಸ್. ಎಂ. ಪಾಟೀಲ್ ಹೇಳಿದರು.ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2023-24ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ, ಎನ್.ಎಸ್.ಎಸ್., ರೆಡ್ ಕ್ರಾಸ್ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ವಿವಿಧ ಘಟಕಗಳ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ ಮತ್ತು ಪ್ರಥಮ ವರ್ಷದ ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಅಪಾರವಾದ ಕನಸುಗಳೊಂದಿಗೆ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ನಿರಂತರ ಪ್ರಯತ್ನ, ಕಠಿಣ ಪರಿಶ್ರಮ, ಶ್ರದ್ಧೆಯ ಓದು, ಸಾಧನೆಯ ಛಲದೊಂದಿಗೆ ಗುರಿ ಸಾಧಿಸಬೇಕು. ವಿದ್ಯಾರ್ಥಿಗಳ ಸಾಧನೆಗೆ ಅಗತ್ಯವಿರುವ ಕಾಲೇಜಿನ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು. ಹಿರಿಯ ಸಾಹಿತಿ ಡಾ. ಅಬ್ದುಲ್ ಕರೀಂ ಕನ್ಯಾಕೊಳೂರು ಅವರು, ವಿವಿಧ ಸಾಹಿತ್ಯ ಪ್ರಕಾರದ ಅಧ್ಯಯನದ ಪ್ರಯೋಜನಗಳ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.ಹಾಸ್ಯ ಕಲಾವಿದ ಗುಂಡಣ್ಣ ಡಿಗ್ಗಿ ಮಾತನಾಡಿ, ವಿದ್ಯಾರ್ಥಿಗಳ ಸೃಜನಾತ್ಮಕ ಕಲಿಕೆಗೆ ಪಠ್ಯೇತರ ಚಟುವಟಿಕೆಗಳು ತುಂಬಾ ಮುಖ್ಯವಾಗುತ್ತವೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕಾಲೇಜಿನ ಪ್ರಾಂಶುಪಾಲ ಡಾ. ಸಂಗಪ್ಪ ಎಸ್. ರಾಂಪೂರೆ ಮಾತನಾಡಿ, ಕಾಲೇಜಿನ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಪರಿಣಾಮಕಾರಿಯಾಗಿ ತೊಡಗಿಸಿಕೊಂಡು ಉಜ್ವಲ ಭವಿಷ್ಯವನ್ನು ಕಂಡಕೊಳ್ಳಬೇಕು ಎಂದರು.
ಸಾಂಸ್ಕೃತಿಕ ಚಟುವಟಿಕೆಗಳ ಸಂಚಾಲಕ ಪ್ರೊ. ಸಿದ್ದಪ್ಪ ಬಿ. ದಿಗ್ಗಿ ಮಾತನಾಡಿದರು. ರೆಡ್‌ಕ್ರಾಸ್ ಹಾಗೂ ಎನ್.ಎಸ್.ಎಸ್. ಎ ಘಟಕದ ಅಧಿಕಾರಿ ಪ್ರೊ. ಮಹೇಶ ಬೀದರಕರ್, ಐ.ಕ್ಯೂ.ಎ.ಸಿ. ಸಂಯೋಜಕಿ ಡಾ. ಶಂಕ್ರಮ್ಮ ಎಂ. ಪಾಟೀಲ್, ರೇಂಜರ್ಸ್ ಘಟಕದ ಸಂಚಾಲಕ ಪ್ರೊ. ಕಾಳಮ್ಮ ಎಸ್.ಎಚ್., ಎನ್.ಎಸ್.ಎಸ್. ಬಿ ಘಟಕದ ಕಾರ್ಯಕ್ರಮ ಅಧಿಕಾರಿ ಡಾ. ಮಹಾದೇವಪ್ಪ, ಕ್ರೀಡಾ ಹಾಗೂ ಸ್ಕೌಡ್ಸ ಮತ್ತು ಗೈಡ್ಸ್ ಸಂಚಾಲಕ ಡಾ. ಮಹಿಬೂಬ ಅಲಿ ಸೌದಾಗಾರ, ಅಧ್ಯಾಪಕರಾದ ಪ್ರೊ. ಯಂಕಯ್ಯ, ಪ್ರೊ. ಭೀಮಣ್ಣ ಮಾಲಿ ಪಾಟೀಲ್, ಡಾ. ಸುರೇಶ ಇದ್ದರು.-----
ಫೋಟೊ: ಶಹಾಪುರ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2023-24ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ, ಎನ್.ಎಸ್.ಎಸ್ ಹಾಗೂ ವಿವಿಧ ಘಟಕಗಳ ಚಟುವಟಿಕೆಗಳ ಉದ್ಘಾಟನೆ ಮತ್ತು ಪ್ರಥಮ ವರ್ಷದ ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ನಡೆಯಿತು.