ಸಾರಾಂಶ
ನರಗುಂದ: ಬೆಳೆಗಳಿಗೆ ತಗಲುವ ನಾನಾ ಕೀಟ ಮತ್ತು ರೋಗಗಳ ನಿಯಂತ್ರಣಕ್ಕಾಗಿ ರೈತರು ಹಲವಾರು ಕೀಟನಾಶಕ ಮತ್ತು ಪೀಡೆನಾಶಕಗಳ ಬಳಕೆಯಿಂದಾಗಿ ಜೀವಸಂಕುಲ ವಿನಾಶಕ್ಕೆ ನಾವೇ ದಾರಿ ಮಾಡಿಕೊಡುತ್ತಿದ್ದೇವೆ. ರಾಸಾಯನಿಕ ಗೊಬ್ಬರದ ಉಪಯೋಗದಿಂದ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಕೋಟುಮಚಗಿ ಸಾವಯವ ಕೃಷಿಕ ವೀರೇಶ ನೇಗಲಿ ತಿಳಿಸಿದರು.
ತಾಲೂಕಿನ ಭೈರನಹಟ್ಟಿ ಗ್ರಾಮದಲ್ಲಿ ದೊರೆಸ್ವಾಮಿ ವಿವಿಧೋದ್ದೇಶ ಟ್ರಸ್ಟಿನ ಆಶ್ರಯದಲ್ಲಿ ದೊರೆಸ್ವಾಮಿಗಳ ಪುಣ್ಯಸ್ಮರಣೋತ್ಸವ ಅಂಗವಾಗಿ ನಡೆದ ಶ್ರೇಷ್ಠ ಪ್ರಗತಿಪರ ರೈತರಿಗೆ ಸನ್ಮಾನ ಹಾಗೂ ಹಾಡಿರೇ ರಾಗಗಳ ತೂಗಿರೇ ದೀಪಗಳ ವಿಶೇಷ ಸಾಂಸ್ಕೃತಿಕ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.ಭಾರತದಲ್ಲಿ ಸಾವಯವ ಕೃಷಿಗೆ ಭೂಮಿ, ಮೂಲ ಸೌಕರ್ಯ ಮತ್ತು ಉಪಕರಣಗಳಲ್ಲಿ ಹೆಚ್ಚಿನ ಆರಂಭಿಕ ಹೂಡಿಕೆಯ ಅಗತ್ಯವಿದೆ. ಇದರ ಬಗೆಗೆ ಸರ್ಕಾರ ಹೆಚ್ಚು ಮುತುವರ್ಜಿ ವಹಿಸಿ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದರು. ಸಾವಯವ ಕೃಷಿಯು ಮಣ್ಣು, ಪರಿಸರ ವ್ಯವಸ್ಥೆಗಳು ಮತ್ತು ಜನರ ಆರೋಗ್ಯವನ್ನು ಉಳಿಸಿಕೊಳ್ಳುವ ಉತ್ಪಾದನಾ ವ್ಯವಸ್ಥೆಯಾಗಿದೆ. ಸಾವಯವ ಕೃಷಿಯು ಸಂಪ್ರದಾಯ, ನಾವೀನ್ಯತೆ ಮತ್ತು ವಿಜ್ಞಾನವನ್ನು ಸಂಯೋಜಿಸಿ ಹಂಚಿಕೆಯ ಪರಿಸರಕ್ಕೆ ಪ್ರಯೋಜನವನ್ನು ನೀಡುತ್ತದೆ. ಉತ್ತಮ ಗುಣಮಟ್ಟದ ಜೀವನವನ್ನು ಉತ್ತೇಜಿಸುತ್ತದೆ. ಸಾವಯವ ಕೃಷಿಯು ಪ್ರಕೃತಿ ಮತ್ತು ಕೃಷಿಯ ನಡುವೆ ಸಮತೋಲಿತ ಸಂಬಂಧವನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ. ಜತೆಗೆ ಜನರು ಮತ್ತು ಪರಿಸರಕ್ಕೆ ಉತ್ತಮ ಭವಿಷ್ಯವನ್ನು ಉತ್ತೇಜಿಸುತ್ತದೆ ಎಂದರು.
ನೌಕರರ ಸಂಘದ ಜಿಲ್ಲಾಧ್ಯಕ್ಷ ಡಾ. ಬಸವರಾಜ ಬಳ್ಳಾರಿ ಮಾತನಾಡಿ, ನಾಡಿನ ಸಾಂಸ್ಕೃತಿಕ ಪರಂಪರೆ ಉಳಿಸಿ ಬೆಳೆಸುವ ಕಾರ್ಯವಾಗಬೇಕಿದೆ. ಇಂತಹ ಕಾರ್ಯಕ್ರಮಗಳು ಸಂಸ್ಕೃತಿ, ಕಲೆಯನ್ನು ಗಟ್ಟಿಗೊಳಿಸುವಲ್ಲಿ ನಿರಂತರವಾಗಿ ಶ್ರಮಿಸುತ್ತಿದೆ. ಶ್ರೇಷ್ಠ ಪರಂಪರೆಯನ್ನು ಹೊಂದಿರುವ ಕರ್ನಾಟಕದ ಸಾಂಸ್ಕೃತಿಕ ಪರಂಪರೆ ಜಗತ್ತಿಗೆ ಮಾದರಿಯಾಗಿದೆ ಎಂದರು.ಈ ವೇಳೆ ಪ್ರಗತಿಪರ ರೈತರಾದ ಅಶೋಕ ಹಿರೇಮಠ, ಮೃತ್ಯುಂಜಯ್ಯ ವಸ್ತ್ರದ, ವೀರೇಶ ನೇಗಲಿ ಅವರನ್ನು ಶ್ರೀಮಠದಿಂದ ಸನ್ಮಾನಿಸಲಾಯಿತು. ಶಾಂತಲಿಂಗ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಗ್ರಾಪಂ ಅಧ್ಯಕ್ಷ ಶರಣಬಸಪ್ಪ ನರಸಾಪೂರ, ಉಪಾಧ್ಯಕ್ಷ ಪುಷ್ಪಾ ಪಾಟೀಲ, ಸದಸ್ಯರಾದ ನಾಗಪ್ಪ ಬೆನ್ನೂರ, ಜ್ಞಾನದೇವ ಮನೇನಕೊಪ್ಪ, ಪಿಡಿಒ ಯಲ್ಲಪ್ಪಗೌಡ ಸಂಕನಗೌಡ್ರ, ಕಲಾವಿದರಾದ ವೀರಣ್ಣ ಅಂಗಡಿ, ರಾಜಕುಮಾರ ಸೊಪ್ಪಡ್ಲ, ನವೀನ ಸೇರಿ ಪ್ರಮುಖರು ಉಪಸ್ಥಿತರಿದ್ದರು.