ಸಾರಾಂಶ
ಹಳಿಯಾಳ: ಮತೀಯ ಸಾಮರಸ್ಯದ ಪ್ರತೀಕವಾಗಿರುವ ಪೇಟೆಯ ಬಸವೇಶ್ವರ ರಥೋತ್ಸವವು ಗುರುವಾರ ಅದ್ಧೂರಿಯಾಗಿ ನಡೆಯಿತು.ತಾಲೂಕಿನ ವಿವಿಧೆಡೆಯಿಂದ ಆಗಮಿಸಿದ ಭಕ್ತರು ಉಧೋ... ಉಧೋ.... ಉದ್ಘೋಷಗಳೊಂದಿಗೆ, ಬಸವೇಶ್ವರ ಮಹಾರಾಜ್‌ಕೀ ಜೈ ಎಂಬ ಘೋಷಣೆಗಳೊಂದಿಗೆ ತೇರನ್ನು ಎಳೆದರು. ಉಳಿದ ಭಕ್ತರು ತೇರಿಗೆ ಉತ್ತತ್ತಿ, ಬಾಳೆಹಣ್ಣು ಎಸೆದು ಪುನೀತರಾದರು. ಡೊಳ್ಳು ಕುಣಿತ, ಮಹಿಳಾ ವಾದ್ಯಮೇಳಗಳ ನಿನಾದ ಜೈಕಾರಗಳಿಂದಾಗಿ ಭಕ್ತಿಯ ಹೊನಲು ಹರಿಯಿತು.
ಮಧ್ಯಾಹ್ನ ನಡೆದ ಸಮಾರಂಭದಲ್ಲಿ ಮುರುಘಾಮಠದ ಮಲ್ಲಿಕಾರ್ಜುನ ಶ್ರೀ ಪೂಜಾವಿಧಿ ನೆರವೇರಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.ದೇವಸ್ಥಾನದಿಂದ ಆರಂಭಗೊಂಡ ರಥೋತ್ಸವವು ರಥಬೀದಿಯಲ್ಲಿ ಸಾಗಿ ಶಿವಾಜಿ ವೃತದಲ್ಲಿ ಬಂದು ತಲುಪಿತು. ತಾಲೂಕಾಡಳಿತದ ಪರವಾಗಿ ತಹಸೀಲ್ದಾರ ಪ್ರವೀಣ ಹುಚ್ಚಣ್ಣನವರ ರಥಕ್ಕೆ ಪೂಜೆ ಸಲ್ಲಿಸಿದರು. ನಂತರ ರಥವು ಬಂದ ದಾರಿಯಲ್ಲಿ ಮರಳಿ ಸಾಗುತ್ತಾ ಜವಾಹರ ರಸ್ತೆ ಮೂಲಕ ವಿರಕ್ತಮಠದವರೆಗೆ ತಲುಪಿತು.
ನೆರೆದ ಭಕ್ತರು ರಥದ ಪೂಜೆ ಮಾಡಿದರು. ನಂತರ ರಥವು ದೇವಸ್ಥಾನದತ್ತ ಮರಳಿತು. ಮಧ್ಯಾಹ್ನ ಆರಂಭಗೊಂಡ ರಥೋತ್ಸವವು ಸಂಜೆಯವರೆಗೆ ನಡೆಯಿತು. ರಥೋತ್ಸವಕ್ಕೂ ಮುನ್ನ ಮಧ್ಯಾಹ್ನ ದೇವಸ್ಥಾನದ ಆವರಣದಲ್ಲಿ ಭಕ್ತರಿಗೆ ಅನ್ನಪ್ರಸಾದ ವಿತರಣೆ ನಡೆಯಿತು.ಜಿಲ್ಲಾ ಶರಣ ಸಾಹಿತ್ಯ ಅಧ್ಯಕ್ಷ ಶಿವದೇವ ದೇಸಾಯಸ್ವಾಮಿ, ತಾಲೂಕು ಲಿಂಗಾಯತ ವೀರಶೈವ ಮಹಾಸಭಾದ ಉಪಾಧ್ಯಕ್ಷ ಲಿಂಗರಾಜ್ ಹಿರೇಮಠ, ಪೇಟೆ ಬಸವೇಶ್ವರ ದೇವಸ್ಥಾನ ಅಧ್ಯಕ್ಷ ಶಿವು ಶೆಟ್ಟರ, ಪುರಸಭೆ ನಾಮನಿರ್ದೇಶಿತ ಸದಸ್ಯ ರವಿ ತೋರಣಗಟ್ಟಿ, ಸತ್ಯಜಿತ ಗಿರಿ, ಅಪ್ಪು ಚರಂತಿಮಠ, ಉಮೇಶ ಬೊಳಶೆಟ್ಟಿ, ಮಂಜುನಾಥ ಪಂಡಿತ ಪಾಲ್ಗೋಂಡಿದ್ದರು.