ಜಿಲ್ಲೆಯನ್ನು ಬರಪೀಡಿತ ಪಟ್ಟಿಗೆ ಸೇರಿಸಲು ಆಗ್ರಹಿಸಿ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮಂಗಳವಾರ ನಗರದಲ್ಲಿ ಗ್ರೇಡ್-2 ತಹಸೀಲ್ದಾರ್ ಅರುಣ ಕಾರಗಿ ಮೂಲಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಮನವಿ ಸಲ್ಲಿಸಿದರು.
ರಾಣಿಬೆನ್ನೂರು: ಜಿಲ್ಲೆಯನ್ನು ಬರಪೀಡಿತ ಪಟ್ಟಿಗೆ ಸೇರಿಸಲು ಆಗ್ರಹಿಸಿ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮಂಗಳವಾರ ನಗರದಲ್ಲಿ ಗ್ರೇಡ್-2 ತಹಸೀಲ್ದಾರ್ ಅರುಣ ಕಾರಗಿ ಮೂಲಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಮನವಿ ಸಲ್ಲಿಸಿದರು.
ಸಂಘಟನೆಯ ರಾಜ್ಯಾಧ್ಯಕ್ಷ ನಿತ್ಯಾನಂದ ಕುಂದಾಪುರ ಮಾತನಾಡಿ, ರಾಜ್ಯ ಸರ್ಕಾರ ಇತ್ತೀಚೆಗೆ ಬಿಡುಗಡೆ ಮಾಡಿದ ಬರ ಪೀಡಿತ ಜಿಲ್ಲೆಗಳ ಪಟ್ಟಿಯಲ್ಲಿ ಹಾವೇರಿ ಜಿಲ್ಲೆಯನ್ನು ಕೈಬಿಡಲಾಗಿದೆ. ಆದರೆ, ಮಳೆ ಕೊರತೆ, ಬೆಳೆ ಇಳುವರಿ ಕುಸಿತ ಹಾಗೂ ಜಲಮೂಲಗಳ ಆತಂಕಕಾರಿ ಸ್ಥಿತಿಯ ನಡುವೆಯೂ ಹಾವೇರಿ ಜಿಲ್ಲೆಯ ಒಂದೇ ಒಂದು ತಾಲೂಕಿಗೂ ಬರಪೀಡಿತ ಪಟ್ಟಿಯಲ್ಲಿ ಸ್ಥಾನ ಸಿಗದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಸವಣೂರು, ಹಾವೇರಿ ಹಾಗೂ ರಾಣಿಬೆನ್ನೂರು, ರಟ್ಟೀಹಳ್ಳಿ ತಾಲೂಕುಗಳು ಮಲೆನಾಡು ಪ್ರದೇಶದಿಂದ ಹೊರತಾದ ಬಯಲು ಸೀಮೆಯಾಗಿದ್ದು ಮಳೆ ಪ್ರಮಾಣ ಕಡಿಮೆಯಾಗಿದೆ. ಕಳೆದೆರಡು ವರ್ಷಗಳಿಂದ ಈ ಭಾಗದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ. ಕೆರೆ-ಕಟ್ಟೆಗಳು ಭರ್ತಿಯಾಗಿಲ್ಲ, ಹಳ್ಳ-ಕೊಳ್ಳಗಳು ತುಂಬಿ ಹರಿದಿಲ್ಲ. ಪ್ರಸಕ್ತ ವರ್ಷ ಬಂದಿರುವ ಅಲ್ಪ ಮಳೆಯಿಂದ ಬೆಳೆ ಬೆಳೆದಿದ್ದರೂ ಕೂಡ ಇಳುವರಿ ಗಣನೀಯವಾಗಿ ಕುಸಿಯುವ ಆತಂಕ ರೈತರನ್ನು ಕಾಡುತ್ತಿದೆ. ಬಿತ್ತನೆಗೆ ಮುನ್ನವೇ ಮಳೆ ಕೊರತೆಯಿಂದ ಸಂಕಷ್ಟಕ್ಕೀಡಾಗಿದ್ದ ರೈತರ ಹೊಲಗಳಿಗೆ ಸದ್ಯ ಉತ್ತಮ ಮಳೆಯ ಅಗತ್ಯವಿದೆ. ಆದರೆ ಕಳೆದ ಒಂದು ವಾರದಿಂದ ಮಳೆ ಕೈಕೊಟ್ಟಿರುವುದು ರೈತರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಹೀಗಿರುವಾಗ ಜಿಲ್ಲೆಯಲ್ಲಿ ಬರದ ಪರಿಸ್ಥಿತಿಯೇ ಇಲ್ಲ ಎಂಬ ಸರ್ಕಾರದ ನಿಲುವು ರೈತರ ವಾಸ್ತವ ಪರಿಸ್ಥಿತಿಗೆ ವಿರುದ್ಧವಾಗಿದೆ ಎಂದರು.ರಾಜ್ಯ ಸಂಚಾಲಕ ಮಲ್ಲಿಕಾರ್ಜುನ ಸಾವಕ್ಕಳವರ, ತಾಲೂಕು ಅಧ್ಯಕ್ಷ ಮಾತನಾಡಿದರು.
ಸಿದ್ಧಾರೂಢ ಗುರುಂ, ಪರಶುರಾಮ ಕುರುವತ್ತಿ, ಆನಂದ ಲಮಾಣಿ, ನಿಂಗಪ್ಪ ಬೀರಣ್ಣನವರ, ಗೋಪಿ ಕುಂದಾಪುರ, ಶಂಕರ ಹಳ್ಳಪ್ಪನವರ, ಮರಡೆಪ್ಪ ಚಳಗೇರಿ, ಚಂದ್ರುಶೇಖರ ಕುದುರಿಹಾಳ, ಹನುಮಂತಪ್ಪ ನಾಯಕ, ಶಿವಕುಮಾರ ನಾಯಕ, ನಾಗಪ್ಪ ಉಜ್ಜನಗೌಡ್ರು, ಚನ್ನಪ್ಪ ಉಜ್ಜನಗೌಡ್ರು ಮತ್ತಿತರರಿದ್ದರು.