ರಸ್ತೆ ದುರಸ್ತಿಗೆ ಆಗ್ರಹಿಸಿ ಮನವಿ ಸಲ್ಲಿಕೆ

| Published : Dec 31 2024, 01:03 AM IST

ಸಾರಾಂಶ

ಕೂಡಲೇ ರಾಜ್ಯ ಹೆದ್ದಾರಿಗೆ ಕೂಡುವ ತಾಲೂಕಿನಲ್ಲಿನ ಎಲ್ಲ ಸಂಪರ್ಕ ರಸ್ತೆಗಳನ್ನು ಮರು ನಿರ್ಮಾಣ ಮಾಡುವುದರೊಂದಿಗೆ ಪ್ರಯಾಣಿಕರ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಡಬೇಕು

ಶಿರಹಟ್ಟಿ: ಕಳೆದ ೪-೫ ವರ್ಷಗಳಿಂದ ಗದಗ-ಹೊನ್ನಾಳಿ ರಸ್ತೆ ಕಾಮಗಾರಿ ನಡೆದಿದ್ದು,ಇದೀಗ ಅದಕ್ಕೆ ಹೊಂದಿಕೊಂಡಿರುವ ಸಂಪರ್ಕ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ಕೂಡಲೇ ದುರಸ್ತಿಗೊಳಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಡಬೇಕು ಎಂದು ಶಿರಹಟ್ಟಿ ಪಪಂ ಮಾಜಿ ಅಧ್ಯಕ್ಷ ನಾಗರಾಜ ಲಕ್ಕುಂಡಿ ಒತ್ತಾಯಿಸಿದರು.ಸೋಮವಾರ ಈ ಕುರಿತು ತಹಸೀಲ್ದಾರ ಮೂಲಕ ಗದಗ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದರು.

ಗದಗ-ಹೊನ್ನಾಳಿ ರಾಜ್ಯ ರಸ್ತೆ ಕಾಮಗಾರಿಯಿಂದ ಹೆಚ್ಚು ಭಾರಿ ಹೊತ್ತೊಯ್ಯುವ ವಾಹನಗಳ ಸಂಚಾರದಿಂದ ಸಂಪರ್ಕ ರಸ್ತೆಗಳು ಹದಗೆಟ್ಟಿವೆ. ಶಿರಹಟ್ಟಿ ತಾಲೂಕಿನಲ್ಲಿ ಹಾದು ಹೋಗಿರುವ ಗದಗ-ಹೊನ್ನಾಳಿ ರಾಜ್ಯ ರಸ್ತೆಗೆ ಕೂಡುವ ಎಲ್ಲ ರಸ್ತೆಗಳ ತಗ್ಗು-ಗುಂಡ ಬಿದ್ದು ಅಪಾಯಕ್ಕೆ ಆಹ್ವಾನ ನೀಡುವಂತಾಗಿವೆ ಎಂದು ದೂರಿದರು.

ರಾಜ್ಯ ಹೆದ್ದಾರಿ ಕಾಮಗಾರಿಗಳು ನಡೆಯುವುದಕ್ಕೂ ಮೊದಲು ರಸ್ತೆ ಸುಗಮ ಸಂಚಾರಕ್ಕೆ ಯೋಗ್ಯವಾಗಿದ್ದವು. ರಾಜ್ಯ ಹೆದ್ದಾರಿ ಕಾಮಾಗಾರಿ ಪೂರ್ಣಗೊಳ್ಳುವುದರಲ್ಲಿ ಅವುಗಳು ಹಾಳಾಗಿ ಸಂಚಾರ ಮಾಡದ ಸ್ಥಿತಿಗೆ ಬಂದು ತಲುಪಿವೆ. ರಾಜ್ಯ ಹೆದ್ದಾರಿ ಕಾಮಗಾರಿ ಸಂದರ್ಭದಲ್ಲಿ ಏಜೆನ್ಸಿ ಅವರ ಭಾರಿ ವಾಹನಗಳ ಸಂಚಾರದಿಂದಲೇ ಸಂಪರ್ಕ ರಸ್ತೆಗಳು ಹಾಳಾಗಿರುವುದರಿಂದ ಅವುಗಳ ಸಂಪೂರ್ಣ ದುರಸ್ತಿ ಕಾರ್ಯ ಏಜೆನ್ಸಿ ಪಡೆದವರದ್ದೇ ಆಗಿರುತ್ತದೆ. ಆದರೆ ಏಜೆನ್ಸಿ ಪಡೆದವರು ತಮ್ಮ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಸಂಪರ್ಕ ರಸ್ತೆ ಪೂರ್ಣ ಪ್ರಮಾಣದಲ್ಲಿ ರಿಪೇರಿ ಮಾಡದೆ ಅಲ್ಲಲ್ಲಿ ಮಣ್ಣಿನಿಂದ ತೆಗ್ಗುಗಳನ್ನು ಮುಚ್ಚಿ ಅವುಗಳ ಮೇಲೆ ಡಾಂಬರ್ ಹಾಕಿದ್ದಾರೆ.ಈ ಕೂಡಲೇ ರಾಜ್ಯ ಹೆದ್ದಾರಿಗೆ ಕೂಡುವ ತಾಲೂಕಿನಲ್ಲಿನ ಎಲ್ಲ ಸಂಪರ್ಕ ರಸ್ತೆಗಳನ್ನು ಮರು ನಿರ್ಮಾಣ ಮಾಡುವುದರೊಂದಿಗೆ ಪ್ರಯಾಣಿಕರ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಡಬೇಕು. ಇಲ್ಲದೆ ಹೋದಲ್ಲಿ ಗದಗ-ಹೋನ್ನಾಳಿ ರಾಜ್ಯ ಹೆದ್ದಾರಿ ಬಂದ ಮಾಡುವ ಮೂಲಕ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಫಕೀರೇಶ ರಟ್ಟಿಹಳ್ಳಿ ಮಾತನಾಡಿ, ರಾಜ್ಯ ಹೆದ್ದಾರಿ ಕಾಮಗಾರಿಗೆ ಬೃಹತ್ ವಾಹನಗಳ ಮೂಲಕ ಸಲಕರಣೆ ಸಾಗಿಸಲು ನಗರದ ರಸ್ತೆಗಳ ಮೂಲಕ ಸಂಚರಿಸಿ ನಗರದಲ್ಲಿರುವ ರಸ್ತೆಗಳು ಸಂಪೂರ್ಣ ಹದಗಟ್ಟಿವೆ. ಈ ರಾಜ್ಯ ಹೆದ್ದಾರಿ ಕಾಮಗಾರಿ ಈಗಾಗಲೇ ಸಂಪೂರ್ಣವಾಗಿ ಮುಗಿದಿದ್ದು ನಗರದಲ್ಲಿನ ಹದಗೆಟ್ಟಿರುವ ರಸ್ತೆಗಳ ಬಗ್ಗೆ ಇಲಾಖೆ ಅಧಿಕಾರಿಗಳು ಗುತ್ತಿಗೆದಾರರು ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ಬೃಹದಾಕಾರದ ಗುಂಡಿಗಳ ನಿರ್ಮಾಣವಾಗಿ ಮಹಿಳೆಯರಿಗೆ ವೃದ್ಧರಿಗೆ ಮಕ್ಕಳಿಗೆ ಲಘು ವಾಹನಗಳ ಸಂಚಾರಕ್ಕೆ ಬಹಳ ತೊಂದರೆಯಾಗಿದೆ. ಇದರ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಜಾಣ ಕುರುಡುತನ ಪ್ರದರ್ಶನ ತೋರುತ್ತಿದ್ದು, ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವ ಗುಂಡಿಗಳು ಬಿದ್ದಿರುವ ರಸ್ತೆ ದುರಸ್ತಿಗೊಳಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿದರು.

ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಎಂಟು ದಿನ ಒಳಗಾಗಿ ರಸ್ತೆ ಸಂಪೂರ್ಣವಾಗಿ ಡಾಂಬರೀಕರಣ ಮಾಡಿಕೊಡಬೇಕು ಇಲ್ಲವಾದಲ್ಲಿ ರಾಜ್ಯ ಹೆದ್ದಾರಿ ಬಂದ್ ಮಾಡಿ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ತಾಪಂ ಮಾಜಿ ಅಧ್ಯಕ್ಷ ಜಾನು ಲಮಾಣಿ, ಗೂಳಪ್ಪ ಕರಿಗಾರ, ಅಕ್ಬರಸಾಬ್ ಯಾದಗಿರಿ, ಮಲ್ಲು ಕಬಾಡಿ, ವಿನೋದ್ ಕಪ್ಪತ್ತನವರ್, ಮಂಜುನಾಥ್ ಬಳೆಗಾರ, ಮಲ್ಲು ಕುದುರೆ, ತಿಪ್ಪಣ್ಣ ಲಮಾಣಿ, ವೀರಣ್ಣ ಅಂಗಡಿ, ಗಿರೀಶ್ ತುಳಿ, ಸಂತೋಷ್ ಕುಬೇರ್, ಯಲ್ಲಪ್ಪ ಖಾನಾಪುರ್, ಬಸವರಾಜ್ ವಡವಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ತಹಸೀಲ್ದಾರ ಅನುಪಸ್ಥಿತಿಯಲ್ಲಿ ಸಿಬ್ಬಂದಿ ಸಂತೋಷ ಅಸ್ಕಿ ಮನವಿ ಸ್ವೀಕರಿಸಿದರು.