ಸರ್ಕಾರದ ಆದೇಶದಂತೆ ತ್ವರಿತವಾಗಿ ಜಿಲ್ಲಾದ್ಯಂತ ಬೂತ್ ಮಟ್ಟದಲ್ಲಿ ಹೆಲ್ಪ್ ಡೆಸ್ಕ್ ಪ್ರಾರಂಭಿಸಲು ಆಗ್ರಹಿಸಿ ತಾಲೂಕಾ ನಾಗರಿಕ ಮತ ಕಾವಲು ಸಮಿತಿಯಿಂದ ಬುಧವಾರ ಸಂಜೆ ಮುಂಡಗೋಡ ತಹಸೀಲ್ದಾರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಮುಂಡಗೋಡ

ಸರ್ಕಾರದ ಆದೇಶದಂತೆ ತ್ವರಿತವಾಗಿ ಜಿಲ್ಲಾದ್ಯಂತ ಬೂತ್ ಮಟ್ಟದಲ್ಲಿ ಹೆಲ್ಪ್ ಡೆಸ್ಕ್ ಪ್ರಾರಂಭಿಸಲು ಆಗ್ರಹಿಸಿ ತಾಲೂಕಾ ನಾಗರಿಕ ಮತ ಕಾವಲು ಸಮಿತಿಯಿಂದ ಬುಧವಾರ ಸಂಜೆ ಮುಂಡಗೋಡ ತಹಸೀಲ್ದಾರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಬಿಎಲ್ಒಗಳು ಮನೆ ಮನೆಗೆ ತೆರಳಿ ಮತದಾರರಿಗೆ ಎನ್ಯುಮರೇಷನ್ ಫಾರಂ ವಿತರಿಸುತ್ತಿದ್ದಾರೆ. ಈ ಪ್ರಕ್ರಿಯೆಯಲ್ಲಿ ೨೦೦೨ರ ಮತಪಟ್ಟಿಯಲ್ಲಿ ಹೆಸರು ಹುಡುಕುವುದು ಫಾರಂ ತುಂಬುವುದು ಸೇರಿ ಹಲವು ಸಮಸ್ಯೆಗಳ ಪರದಾಟ, ಅಲೆದಾಟ ಭಯ ಆತಂಕದಲ್ಲಿ ಜನರು ದಿನ ಕಳೆಯುವಂತಾಗಿದೆ. ಇಂತಹ ಅವೈಜ್ಞಾನಿಕ ಎಸ್ಐಆರ್ ಪ್ರಕ್ರಿಯೆಯಲ್ಲಿ ನೂರಾರು ಸಮಸ್ಯೆಗಳು ಕರ್ನಾಟಕದಲ್ಲಿಯೂ ಬರುವುದು ಖಚಿತ ಎಂದು ಮನಗಂಡಿರುವ ನಾಗರಿಕ ಮತಕಾವಲು ಸಮಿತಿಯು ಸರ್ಕಾರದ ಮೇಲೆ ನಿರಂತರ ಒತ್ತಡ ಹಾಕಿ ಕೂಡಲೇ ಮತದಾರರಿಗೆ ನೆರವಿಗೆ ಮುಂದಾಗಬೇಕೆಂದು ಒತ್ತಾಯಿಸಿದೆ.

ಅದರಂತೆ ರಾಜ್ಯ ಸರ್ಕಾರ ರಾಜ್ಯಾದ್ಯಂತ ಎಸ್ಐಆರ್ ಸಹಾಯವಾಣಿ ಹೆಲ್ಪ್ ಡೆಸ್ಕ್ ಕೇಂದ್ರವನ್ನು ಸ್ಥಾಪಿಸಿ ಜನರಿಗೆ ಅಗತ್ಯ ದಾಖಲೆಗಳಲ್ಲಿ ಒಂದಾದ ಶಾಶ್ವತ ನಿವಾಸಿ ಪ್ರಮಾಣ ಪತ್ರ ಸೇರಿ ವಿವಿಧ ದಾಖಲೆಗಳನ್ನು ಪಡೆಯಲು ಬೂತ್ ಮಟ್ಟದಲ್ಲಿ ವಿಶೇಷ ಶಿಬಿರ ಆಯೋಜಿಸಿ ಯಾವುದೇ ನಾಗರಿಕರು ದಾಖಲೆಗಳ ಕೊರತೆಯಿಂದ ಸಂಕಷ್ಟಕ್ಕೀಡಾಗದಂತೆ ಕ್ರಮ ಕೈಗೊಳ್ಳಬೇಕು. ಇದನ್ನು ಮಾಡಲು ಎಲ್ಲ ಜಿಲ್ಲಾಧಿಕಾರಿಗಳು ಸಹಾಯ ಮತ್ತು ಸೌಲಭ್ಯ ಕೌಂಟರ್‌ಗಳನ್ನು ಮೇಲ್ವಿಚಾರಣೆ ಮಾಡಿ ಕಾಲಮಿತಿಯಲ್ಲಿ ಅನುಷ್ಠಾನ ಮಡಬೇಕು ಎಂದು ಅಧಿಸೂಚನೆ ಹೊರಡಿಸಿತ್ತು. ರಾಜ್ಯ ಸರ್ಕಾರ ಈ ಅಧಿಸೂಚನೆ ಹೊರಡಿಸಿ ೧೫ ದಿನ ಕಳೆದರೂ ಉತ್ತರಕನ್ನಡ ಜಿಲ್ಲಾದ್ಯಂತ ಬೂತ್ ಮಟ್ಟದಲ್ಲಿ ನೆರವಿನ ಕೇಂದ್ರಗಳನ್ನು ಸಮರ್ಪಕವಾಗಿ ಜಾರಿ ಮಾಡಿಲ್ಲ. ಹಾಗಾಗಿ ತಕ್ಷಣ ಮತದಾರರ ನೆರವಿಗೆ ಮುಂದಾಗಿ ಜಿಲ್ಲಾದ್ಯಂತ ಸಹಾಯವಾಣಿ ಕೇಂದ್ರ ಹೆಲ್ಪ್ ಡೆಸ್ಕ್ ಪ್ರಾರಂಭಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಈ ಸಂದರ್ಭ ತಾಲೂಕಾ ನಾಗರಿಕ ಮತ ಕಾವಲು ಸಮಿತಿಯ ತಾಲೂಕು ಸಂಚಾಲಕರಾದ ಎಸ್. ಡಿ. ಮುಡೆಣ್ಣವರ, ಅಕ್ಷತಾ ಬುದ್ನಿ, ಜ್ಯೋತಿ ಕೊರವರ ಸೇರಿ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

-----------

೨೨ಎಮ್.ಎನ್.ಡಿ೨- ಹೆಲ್ಪ್ ಡೆಸ್ಕ್ ಪ್ರಾರಂಭಿಸಲು ಆಗ್ರಹಿಸಿ ಮುಂಡಗೋಡ ತಾಲೂಕಾ ನಾಗರಿಕ ಮತ ಕಾವಲು ಸಮಿತಿಯಿಂದ ಮುಂಡಗೋಡ ತಹಸೀಲ್ದಾರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.