ಸಾರಾಂಶ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ನಿವೇಶನ ರಹಿತರಿಗೆ ನಿವೇಶನ ನೀಡುವಂತೆ ಆಗ್ರಹಿಸಿ ಜಿ. ಹೊಸಹಳ್ಳಿ ತಮಟೇಬೈಲು ಕಾಲೋನಿ ಗ್ರಾಮಸ್ಥರು ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಬುಧವಾರ ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಅವರಿಗೆ ಮನವಿ ಸಲ್ಲಿಸಿದರು.ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಮರ್ಲೆ ಅಣ್ಣಯ್ಯ, ಮೂಡಿಗೆರೆ ತಾಲೂಕಿನ ಗೋಣಿಬೀಡು ಹೋಬಳಿ ಜಿ.ಹೊಸಳ್ಳಿಯ ತಮಟೇಬೈಲು ಕಾಲೋನಿ ನಿವಾಸಿಗಳು ಆರು ದಶಕಗಳಿಂದ ವಾಸಿಸುತ್ತಿರುವ ಹಿನ್ನೆಲೆಯಲ್ಲಿ ನಿವೇಶನ ಒದಗಿಸಿ ಅನುವು ಮಾಡಿಕೊಡಬೇಕು ಎಂದರು.ಹಲವಾರು ವರ್ಷಗಳಿಂದ ನಿವೇಶನ ರಹಿತರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಹೋರಾಟ ರೂಪಿಸುತ್ತಾ ಬಂದಿದ್ದರೂ ತಾಲೂಕು, ಜಿಲ್ಲಾಡಳಿತವಾಗಲೀ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಈಚೆಗೆ ಸರ್ವೆ ನಂ.182 ರಲ್ಲಿ ಗುಡಿಸಲು ನಿರ್ಮಿಸಿಕೊಂಡು ವಾಸಿಸುತ್ತಿರುವ ವೇಳೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು, ಪಿಡಿಒ ಹಾಗೂ ರಾಜಸ್ವ ನಿರೀಕ್ಷಕರು ಸ್ಥಳಕ್ಕಾಗಮಿಸಿ ಅಹವಾಲು ಸ್ವೀಕರಿಸಿ ನಿವೇಶನ ಒದಗಿಸುವುದಾಗಿ ಭರವಸೆ ನೀಡಿದರು.ಹೀಗಾಗಿ ನಿವೇಶನ ರಹಿತರು ಭೂಮಿಗಾಗಿ ಒತ್ತಾಯಿಸಿ ದಸಂಸ ಮೂಲಕ ಮತದಾನ ಬಹಿಷ್ಕಾರ ನಿರ್ಧರಿಸಲಾಗಿತ್ತು. ಆದರೆ, ಅಧಿಕಾರಿಗಳ ಭರವಸೆ ಮೇರೆಗೆ ನಿರ್ಧಾರ ಕೈಬಿಡಲಾಗಿದೆ. ಹಾಗಾಗಿ ಜಿಲ್ಲಾಡಳಿತ ಸಂಬಂಧಿಸಿದಂತೆ ನೊಂದ ಕುಟುಂಬಗಳಿಗೆ ನಿವೇಶನ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ದಸಂಸ ಮೂಡಿಗೆರೆ ಸಂಚಾಲಕ ಸಂತೋಷ್, ಜಿಲ್ಲಾ ಮಹಿಳಾ ಸಂಚಾಲಕಿ ಆಶಾ, ತಾಲೂಕು ಸಂಚಾಲಕಿ ಯಮನ, ಗ್ರಾಮಸ್ಥರಾದ ಪ್ರಮೀಳಾ, ಕಮಲ, ರಮೇಶ್, ಸುಂದರಿ ಹಾಜರಿದ್ದರು. 17 ಕೆಸಿಕೆಎಂ 2ನಿವೇಶನ ನೀಡುವಂತೆ ಆಗ್ರಹಿಸಿ ಜಿ. ಹೊಸಹಳ್ಳಿಯ ತಮಟೇಬೈಲು ಕಾಲೋನಿ ಗ್ರಾಮಸ್ಥರು ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಬುಧವಾರ ಜಿಲ್ಲಾ ಧಿಕಾರಿ ಸಿ.ಎನ್.ಮೀನಾ ನಾಗರಾಜ್ ಗೆ ಮನವಿ ಸಲ್ಲಿಸಿದರು.