ಸಾರಾಂಶ
ಹಳೆಕೋಟೆ ಕಾಲನಿ ೧೯೭೨- ೭೩ರಲ್ಲಿ ಪ್ರಾರಂಭಗೊಂಡಿದ್ದು, ೧೫೫ ಪ್ಲಾಟ್‌ಗಳು ನಿರ್ಮಾಣ ಮಾಡಲಾಗಿದೆ. ಇದರಲ್ಲಿ ೮೧ ಪ್ಲಾಟ್‌ಗಳಿಗೆ ಪಟ್ಟಾ ವಿತರಿಸಿದ್ದು, ಉಳಿದ ೭೪ ಪ್ಲಾಟ್‌ಗಳಿಗೆ ಪಟ್ಟಾ ವಿತರಿಸಿಲ್ಲ.
ಕಾರವಾರ:ತಾಲೂಕಿನ ಹಳೆಕೋಟೆ ಜನತಾ ಕಾಲನಿ ನಿವಾಸಿಗಳಿಗೆ ಪಟ್ಟಾ ವಿತರಿಸಿರುವ ಪ್ಲಾಟ್‌ಗೆ ಪಹಣಿ ಪತ್ರ, ಪಟ್ಟಾ ವಿತರಿಸದಿರುವ ಪ್ಲಾಟ್‌ಗಳಿಗೆ ಪಟ್ಟಾ ವಿತರಿಸಿ ಪಹಣಿ ಪತ್ರ ನೀಡುವಂತೆ ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಮಾಜಿ ಶಾಸಕಿ ರೂಪಾಲಿ ನಾಯ್ಕ ನೇತೃತ್ವದಲ್ಲಿ ಗುರುವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ರೂಪಾಲಿ ನಾಯ್ಕ, ಹಳೆಕೋಟೆ ಕಾಲನಿ ೧೯೭೨- ೭೩ರಲ್ಲಿ ಪ್ರಾರಂಭಗೊಂಡಿದ್ದು, ೧೫೫ ಪ್ಲಾಟ್‌ಗಳು ನಿರ್ಮಾಣ ಮಾಡಲಾಗಿದೆ. ಇದರಲ್ಲಿ ೮೧ ಪ್ಲಾಟ್‌ಗಳಿಗೆ ಪಟ್ಟಾ ವಿತರಿಸಿದ್ದು, ಉಳಿದ ೭೪ ಪ್ಲಾಟ್‌ಗಳಿಗೆ ಪಟ್ಟಾ ವಿತರಿಸಿಲ್ಲ. ಎಲ್ಲ ಸಮುದಾಯದ ಜನರು ಮನೆ, ಗುಡಿಸಲು ನಿರ್ಮಿಸಿಕೊಂಡು ವಾಸಿಸುತ್ತಿದ್ದಾರೆ. ಜತೆಗೆ ಸರ್ಕಾರಕ್ಕೆ ಕರವನ್ನು ತುಂಬುತ್ತಿದ್ದಾರೆ. ಆದರೆ ದುರದೃಷ್ಟವೆಂದರೆ ಕೆಲವರಿಗೆ ಪಹಣಿ ಸಿಗದ ಕಾರಣ, ಪಟ್ಟಾ ಆಗದ ಕಾರಣ ಸರ್ಕಾರದಿಂದ ಬರುವ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ ಎಂದರು.ಈ ಹಿಂದೆ ಅತಿವೃಷ್ಟಿಯಿಂದ ಮನೆ ಕಳೆದುಕೊಂಡವರಿಗೆ ಅಂದಿನ ರಾಜ್ಯ ಸರ್ಕಾರ ₹೫ ಲಕ್ಷ ಪರಿಹಾರ ನೀಡಿತ್ತು. ಆದರೆ ಇಲ್ಲಿನ ಕೆಲವರಿಗೆ ಪಹಣಿ ಇಲ್ಲವೆಂದು ಕೇವಲ ₹೧ ಲಕ್ಷ ನೀಡಲಾಗಿದೆ. ಅರಣ್ಯ ಭೂಮಿ ಎಂದು ಉಳಿದ ಮೊತ್ತ ನೀಡಿಲ್ಲ. ಈಗ ಪಹಣಿಗೆ ೧೯೩೦ರ ದಾಖಲೆಯನ್ನು ಸರ್ಕಾರ ಕೇಳುತ್ತಿದೆ. ಅಷ್ಟು ಹಳೆಯ ದಾಖಲೆ ಎಲ್ಲಿಂದ ತರಬೇಕು. ನಮಗೆ ಸ್ವಾತಂತ್ರ್ಯ ಸಿಕ್ಕಿರುವುದೇ ೧೯೪೭ರಲ್ಲಾಗಿದೆ.
ಬ್ರಿಟಿಷರ ಕಾಲದ ದಾಖಲೆ ಎಲ್ಲಿ ಸಿಗುತ್ತದೆ? ಯಾರು ಕೊಡುತ್ತಾರೆ? ಆಧಾರ್ ಕಾರ್ಡ್, ರೇಷನ್ ಕಾರ್ಡ್ ಒಳಗೊಂಡು ಎಲ್ಲ ದಾಖಲೆಯಿದೆ. ಸರ್ಕಾರಕ್ಕೆ ತೆರಿಗೆ ತುಂಬುತ್ತಿದ್ದಾರೆ. ಜಿಲ್ಲಾಡಳಿತ ಸರ್ಕಾರಕ್ಕೆ ಜಿಲ್ಲೆಯ ಅತಿಕ್ರಮಣದಾರರ ಸಮಸ್ಯೆಯನ್ನು ತಿಳಿಸಬೇಕು. ಸಂಷ್ಟವನ್ನು ಅರ್ಥ ಮಾಡಿಸಬೇಕು. ಬಡ ಜನರಿಗೆ ನ್ಯಾಯ ಕೊಡಿಸಲು ಜಿಲ್ಲಾಡಳಿತ ಪ್ರಯತ್ನಿಸಬೇಕು ಎಂದರು.ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಮನವಿ ಸ್ವೀಕರಿಸಿದರು. ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ಸುಭಾಸ್ ಗುನಗಿ, ಮುಖಂಡರಾದ ಹರೀಶ ನಾಗೇಕರ, ಕಿಶೋರ ಕಡವಾಡಕರ, ರವಿ ಗೌಡ, ಪುಂಡಲಿಕ ಹುಲಸ್ವಾರ, ಚಂದ್ರಕಲಾ ಗೌಡ ಹಾಗೂ ಹಳೆಕೋಟೆ ಕಾಲನಿ ನಿವಾಸಿಗಳು ಇದ್ದರು.ಮೂಲ ಸೌಕರ್ಯ ಕಲ್ಪಿಸಲು ಆಗ್ರಹ:ಹಣಕೋಣ, ಕಿನ್ನರ, ಚಿತ್ತಾಕುಲ, ಅಮದಳ್ಳಿ ಹಾಗೂ ಇತರೆ ಗ್ರಾಪಂಗಳ ಪಹಣಿ ಪತ್ರಿಕೆ ಮಾಡಲು, ಬಾಕಿಯಿರುವ ಪ್ರಕರಣಗಳಿಗೆ ತ್ವರಿತಗತಿಯಲ್ಲಿ ಕ್ರಮ ವಹಿಸುವಂತೆ ಮಾಜಿ ಶಾಸಕಿ ರೂಪಾಲಿ ನಾಯ್ಕ ಅವರು ಕೋರಿದರು.
ಸೀಬರ್ಡ್ ನಿರಾಶ್ರಿತರ ಕಾಲನಿಗಳಾದ ಚಿತ್ತಾಕುಲ, ತೋಡೂರು, ಮುದಗಾ, ಹಾರವಾಡ, ಬೇಲೆಕೇರಿಯಲ್ಲಿರುವ ನಿರಾಶ್ರಿತರಿಗೆ ಮೂಲ ಸೌಕರ್ಯಗಳನ್ನು ಒದಗಿಸಿಕೊಡುವ ಬಗ್ಗೆ ಜಿಲ್ಲಾಧಿಕಾರಿ ಬಳಿ ಚರ್ಚಿಸಿದರು.