ಮನುವಾದಿಗಳು ಮೂಲ ನಿವಾಸಿಗಳನ್ನು ತುಳಿದಿದ್ದಾರೆ: ಚಿಂತಕ ಡಾ.ಕೃಷ್ಣಮೂರ್ತಿ ಚಮರಂ

| Published : Nov 09 2024, 01:04 AM IST

ಮನುವಾದಿಗಳು ಮೂಲ ನಿವಾಸಿಗಳನ್ನು ತುಳಿದಿದ್ದಾರೆ: ಚಿಂತಕ ಡಾ.ಕೃಷ್ಣಮೂರ್ತಿ ಚಮರಂ
Share this Article
  • FB
  • TW
  • Linkdin
  • Email

ಸಾರಾಂಶ

ದೇಶದಲ್ಲಿ ಸಾವಿರಾರು ವರ್ಷಗಳಿಂದ ಜಾತೀಯತೆ ಮತ್ತು ತಾರತಮ್ಯ ಧೋರಣೆಗಳಿಂದ ಮನುವಾದಿಗಳು ಮೂಲ ನಿವಾಸಿಗಳಾದ ಹೊಲೆ ಮಾದಿಗ ಸಮುದಾಯಗಳನ್ನು ತುಳಿದುಕೊಂಡೇ ಬಂದಿದ್ದಾರೆ ಎಂದು ಚಿಂತಕ ಡಾ.ಕೃಷ್ಣಮೂರ್ತಿ ಚಮರಂ ಹೇಳಿದರು. ಗುಂಡ್ಲುಪೇಟೆಯಲ್ಲಿ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆದೇಶದಲ್ಲಿ ಸಾವಿರಾರು ವರ್ಷಗಳಿಂದ ಜಾತೀಯತೆ ಮತ್ತು ತಾರತಮ್ಯ ಧೋರಣೆಗಳಿಂದ ಮನುವಾದಿಗಳು ಮೂಲ ನಿವಾಸಿಗಳಾದ ಹೊಲೆ ಮಾದಿಗ ಸಮುದಾಯಗಳನ್ನು ತುಳಿದುಕೊಂಡೇ ಬಂದಿದ್ದಾರೆ ಎಂದು ಚಿಂತಕ ಡಾ.ಕೃಷ್ಣಮೂರ್ತಿ ಚಮರಂ ಹೇಳಿದರು.ತಾಲೂಕಿನ ರಾಘವಾಪುರದಲ್ಲಿ ಮನೆ ಮನೆಗೂ ಧಮ್ಮದೀಪಯಾನ ಕಾರ್ಯಕ್ರಮದಲ್ಲಿ ಮಾತನಾಡಿ, ಇಂದಿಗೂ ಜಾತಿ ಆಧಾರಿತ ದೌರ್ಜನ್ಯ, ದಬ್ಬಾಳಿಕೆ, ಅಸಮಾನತೆ ಮತ್ತು ಕ್ರೌರ್ಯಗಳನ್ನು ಹೊಲೆಮಾದಿಗ ಸಮುದಾಯಗಳ ಮೇಲೆ ಎಸಗಲಾಗುತ್ತಿದೆ. ಆದರೆ, ಬಾಬಾ ಸಾಹೇಬರ ಹೋರಾಟದ ಫಲವಾಗಿ ಶೋಷಿತ ಸಮುದಾಯಗಳಿಗೆ ದೌರ್ಜನ್ಯಗಳಿಂದ ಅಲ್ಪಸ್ವಲ್ಪ ಬಿಡುಗಡೆ ದೊರೆತಿದೆ. ಮಾನವಹಕ್ಕುಗಳು ದಕ್ಕಿವೆ. ಸಂವಿಧಾನದಿಂದ ಹಲವು ಸವಲತ್ತುಗಳು ದೊರೆತಿವೆ. ಅದನ್ನು ಸಮುದಾಯವು ಬಳಸಿಕೊಂಡು ಸಂಘಟಿತ ಶಕ್ತಿಯಾಗಿ ಹೊರಹೊಮ್ಮಬೇಕು ಎಂದರು.

ಬಾಬಾ ಸಾಹೇಬರು ಹಿಂದೂ ಧರ್ಮದಲ್ಲಿನ ಜಾತಿಯಾಧಾರಿತ ಅಸಮಾನತೆಗಳಿಂದ ಹೊರಬರಬೇಕಾದರೆ ಬುದ್ಧ ಧಮ್ಮಕ್ಕೆ ಮರಳಬೇಕೆಂದು ಸಂಕಲ್ಪ ಮಾಡಿ ತಮ್ಮ ಜೀವಿತದಲ್ಲೇ ಬುದ್ದನೆಡೆಗೆ ಮರಳಿ ಮನೆಗೆ ಎಂಬ ದೀಕ್ಷಾವಿಧಿಯನ್ನು ಐದು ಲಕ್ಷ ಜನ ಅನುಯಾಯಿಗಳೊಡನೆ ನಾಗಪುರದಲ್ಲಿ 1956 ಅ. 14 ರಂದು ಸ್ವೀಕರಿಸಿದರು.

ಶೋಷಿತ ಸಮುದಾಯಗಳು ಸ್ವಾಭಿಮಾನ ಮತ್ತು ಘನತೆಯ ಬದುಕಿಗಾಗಿ ಬುದ್ಧನ ಧಮ್ಮ ಮಾರ್ಗಕ್ಕೆ ಕರೆದುಕೊಂಡು ಹೋದರು. ಇಡೀ ದೇಶದ ಶೋಷಿತ ಸಮುದಾಯ ತನ್ನನ್ನು ಅನುಸರಿಸುವಂತೆ ಕರೆ ನೀಡಿದರು. ಬುದ್ಧನ ಮಾರ್ಗವನ್ನು ತೊರೆದ ಪರಿಣಾಮವಾಗಿ ಇಂದಿಗೂ ಮನುವಾದದ ಶೋಷಣೆಯಲ್ಲಿ ನರಳುತ್ತಿದ್ದಾರೆ. ಈ ಶೋಷಣೆಯಿಂದ ಮುಕ್ತವಾಗಲು ಇರುವ ಏಕೈಕ ಮಾರ್ಗವೆಂದರೆ ಅದು ಬಾಬಾಸಾಹೇಬರು ತಿಳಿಸಿದ ಬುದ್ಧನ ಮಾರ್ಗವಾಗಿದೆ ಎಂದರು.

ಮಾಜಿ ಮೇಯರ್‌ ಪುರುಷೋತ್ತಮ್ ಮಾತನಾಡಿ, ಮನೆ ಮನೆಗೆ ಬುದ್ಧ, ಅಂಬೇಡ್ಕರರ ವಿಚಾರಗಳನ್ನು ತಲುಪಿಸುವುದೆ ಈ ಧಮ್ಮ ಪಯಣದ ಪ್ರಮುಖ ಕೆಲಸ. ಅಂಬೇಡ್ಕರ್ ವಿಶ್ವದಲ್ಲೇ ಅತ್ಯುತ್ತಮ ಸಂವಿಧಾನ ನೀಡಿ, ಧಮ್ಮ ಮಾರ್ಗವನ್ನು 70 ವರ್ಷಗಳ ಹಿಂದೆಯೇ ತೋರಿಸಿದ್ದಾರೆ ಎಂದರು. ಭಿಕ್ಕು ಸುಗಾತ ಪಾಲ ಭಂತೇಜಿ ಹಾಗೂ ಮಾತಾಜಿ ಗೌತಮಿ ತಿಸರಣ, ಪಂಚಶೀಲ ಪಠಣ ಮಾಡಿದರು. ಚಿಂತಕ ಮಲ್ಕುಂಡಿ ಮಹದೇವಸ್ವಾಮಿ ಧಮ್ಮ ಹಾಗೂ ಧ್ಯಾನದ ಮಹತ್ವ ತಿಳಿಸಿದರು.

ಮೈಸೂರು ಜಿಲ್ಲಾ ದಸಂಸ ಸಂಚಾಲಕ ಮಲ್ಲಹಳ್ಳಿ ನಾರಾಯಣ್ ಮಾತನಾಡಿ, ಧರ್ಮ ನಮ್ಮನ್ನು ಕಾಪಾಡಿಕೊಂಡು ಬರಬೇಕು. ಆದರೆ ದುರಂತ ಶ್ರೇಣೀಕೃತ ಸಮಾಜ ನಿರ್ಮಾಣದಿಂದ ಜನರು ಶೋಷಣೆ ಅನುಭವಿಸಿದ್ದಾರೆ. ಹಾಗಾಗಿ ನಾವೆಲ್ಲರೂ ಬುದ್ಧ ವೈಜ್ಞಾನಿಕ ಹಾದಿ ಹಿಡಿಯಬೇಕು ಎಂದರು. ತಕ್ಷಶಿಲ ಬುದ್ಧ ವಿಹಾರ ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷ ಸುಭಾಷ್ ಮಾಡ್ರಹಳ್ಳಿ ತಾಲೂಕಿನಲ್ಲಿ ಧಮ್ಮದ ಚಟುವಟಿಕೆಗಳನ್ನು ಪ್ರತಿ ಗ್ರಾಮಕ್ಕೂ ವಿಸ್ತರಿಸುವುದು ನಮ್ಮ ಧ್ಯೇಯವಾಗಿದೆ ಎಂದರು.

ಗ್ರಾಪಂ ಅಧ್ಯಕ್ಷ ಆರ್.ಡಿ. ಉಲ್ಲಾಸ್ ಧಮ್ಮ ದೀಪಯಾನ ಆಯೋಜನೆ ಮಾಡಿದ್ದರು. ನವಕೋಟಿ ನಾರಾಯಣ್, ಸುರೇಶ್, ಗ್ರಾಮದ ಯಜಮಾನರಾದ ನಾಗೇಂದ್ರ, ಡಾ.ಚೆನ್ನಕೇಶವ ಮೂರ್ತಿ, ಮುರುಡಗಳ್ಳಿ ಮಹದೇವು, ಬೇರಂಬಾಡಿ ಗ್ರಾಪಂ ಅಧ್ಯಕ್ಷ ಮಲ್ಲಿಕಾರ್ಜುನ, ಬಿಎಸ್ಪಿ ಮುಖಂಡರಾದ ಬಸವಣ್ಣ ಕಿಲಗೆರೆ, ಮುತ್ತಣ್ಣ ಹುಲಸಗುಂದಿ, ಎಂ.ಶ್ರೀನಿವಾಸ್ ಪಾಳ್ಯ, ಮದ್ದಯ್ಯನಹುಂಡಿ ನಾಗರಾಜ್, ಮಲ್ಲೇಶ್ ವೀರನಪುರ, ಉಪಾಸಕಿಯರಾದ ಆಶಾ, ಗ್ರಾಪಂ ಸದಸ್ಯರಾದ ಸುಧಾರಾಣಿ, ಪವಿತ್ರ, ಸುಕನ್ಯಾ, ಪೂರ್ಣಿಮಾ, ಎಸ್‌ಎಂಸಿ ಅಧ್ಯಕ್ಷ ನಾರಾಯಣ್, ವಿಷಕಂಠ, ಲೋಕೇಶ್ ಅನೇಕರು ಇದ್ದರು.