ಗ್ಯಾರಂಟಿಗಳಿಗಾಗಿ ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಳ: ಎಚ್‌.ಡಿ ಕುಮಾರಸ್ವಾಮಿ

| Published : Jun 17 2024, 01:38 AM IST / Updated: Jun 17 2024, 05:39 AM IST

ಗ್ಯಾರಂಟಿಗಳಿಗಾಗಿ ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಳ: ಎಚ್‌.ಡಿ ಕುಮಾರಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವ ಸಲುವಾಗಿ ಕಾಂಗ್ರೆಸ್ ಸರ್ಕಾರ ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಳ ಮಾಡಿದೆ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ದೂರಿದರು.

 ಮಂಡ್ಯ :  ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವ ಸಲುವಾಗಿ ಕಾಂಗ್ರೆಸ್ ಸರ್ಕಾರ ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಳ ಮಾಡಿದೆ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ದೂರಿದರು.

ಕೇಂದ್ರ ಸಚಿವರಾಗಿ ಮೊದಲ ಬಾರಿಗೆ ಮಂಡ್ಯಕ್ಕೆ ಆಗಮಿಸಿದ ಎಚ್.ಡಿ.ಕುಮಾರಸ್ವಾಮಿ, ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ಸಂಸದರ ಕಚೇರಿಗೆ ಪೂಜೆ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.ಈಗಾಗಲೇ ಮದ್ಯದ ಬೆಲೆ, ಸ್ಟ್ಯಾಂಪ್ ಡ್ಯೂಟಿ ಹೆಚ್ಚಳ ಮಾಡಲಾಗಿದೆ. ಈಗ ಪೆಟ್ರೋಲ್-ಡೀಸೆಲ್ ಬೆಲೆಯನ್ನೂ ಹೆಚ್ಚಿಸಿದ್ದಾರೆ.

5 ಗ್ಯಾರಂಟಿಗಳಿಗೆ ಹಣ ಕೊಡುವುದಕ್ಕೆ ಸರ್ಕಾರದಿಂದ ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ಜನರ ಜೇಬಿಗೆ ನೇರವಾಗಿ ಕತ್ತರಿ ಹಾಕುತ್ತಿದ್ದಾರೆ. ಗ್ಯಾರಂಟಿ ಹೆಸರಿನಲ್ಲಿ ಸರ್ಕಾರ ಮಾಡುತ್ತಿರುವ ಲೂಟಿಯಾಗಿದೆ ಎಂದು ಕಿಡಿಕಾರಿದರು.ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಿಂದ ಜನಸಾಮಾನ್ಯರ ಮೇಲೆ ಹೊರೆ ಹೆಚ್ಚಾಗಲಿದೆ. ಸರಕು-ಸಾಗಣೆ ಮೇಲಿನ ದರ, ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಲಿದೆ. 

ರೈತರು ತೊಂದರೆ ಸಿಲುಕಲಿದ್ದು, ಸರ್ಕಾರ ಬಡವರ ಕಿಸೆಗೆ ಕೈ ಹಾಕುತ್ತಿದೆ. ಪೆಟ್ರೋಲ್-ಡೀಸೆಲ್ ಹೆಚ್ಚಳ ಕುರಿತು ಹಿಂದೆ ಕೇಂದ್ರ ಸರ್ಕಾರದ ಬಗ್ಗೆ ಮಾತನಾಡಿದ್ದರು. ಈಗ ಅವರೇ ಹೆಚ್ಚಳ ಮಾಡಿದ್ದು, ಇದಕ್ಕೆಲ್ಲಾ ಜನರೇ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಾಗಿರುವ ಹಣ ದುರುಪಯೋಗದ ಬಗ್ಗೆ ಪ್ರಶ್ನಿಸಿದಾಗ, ಕಾಂಗ್ರೆಸ್‌ನವರು ಯಾವ ಯಾವ ಇಲಾಖೆಯಲ್ಲಿ ಎಷ್ಟು ದೋಚಿದ್ದಾರೋ ಗೊತ್ತಿಲ್ಲ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಕೋಟಿ ಕೋಟಿ ಹಣ ಲೂಟಿ ಮಾಡಿದ್ದಾರೆ. 

ಪೆಟ್ರೋಲ್ ಬಂಕ್ ಮಾಲೀಕ ಸೇರಿ ಬೇರೆ ಬೇರೆ ವ್ಯಕ್ತಿಗಳಿಗೆ ಹಣ ಹರಿದುಹೋಗಿದೆ. ಆ ಹಣ ವಾಪಸ್ ಬರುತ್ತದೆಯೇ ಎಂದು ಪ್ರಶ್ನಿಸಿದ ಅವರು, ಇದೇ ರೀತಿ ಇನ್ನೂ ಎಷ್ಟು ಇಲಾಖೆಗಳಲ್ಲಿ ಭ್ರಷ್ಟಾಚಾರ ಮಾಡಿದ್ದಾರೋ ಮುಂದೆ ಹೊರಗೆ ಬರಲಿದೆ ಎಂದು ತಿಳಿಸಿದರು.

ಕಾಂಗ್ರೆಸ್ ಸರ್ಕಾರದ ನಡೆ ನೋಡಿ ನಿರ್ಧಾರ: 

ಕಾವೇರಿ ಸಮಸ್ಯೆಯನ್ನು ಕಾನೂನಾತ್ಮಕವಾಗಿ ಯಾವ ರೀತಿ ಹೋರಾಟ ಮಾಡಿ ಸಮಸ್ಯೆ ಬಗೆಹರಿಸಬೇಕು ಎಂಬುದನ್ನು ದೇವೇಗೌಡರ ಜೊತೆ ಚರ್ಚೆ ನಡೆಸಿ ನಂತರ ಕೇಂದ್ರ ಸರ್ಕಾರದೊಂದಿಗೆ ಚರ್ಚೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡು ಹಿಡಿಯುವ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದ ಅವರು, ಮೈಷುಗರ್ ಕಾರ್ಖಾನೆ ವಿಚಾರದಲ್ಲಿ ರಾಜ್ಯ ಸರ್ಕಾರ ಹೊಸ ಕಾರ್ಖಾನೆ ನಿರ್ಮಾಣ ಮಾಡುತ್ತೇವೆ ಎಂದು ಹೇಳಿದ್ದಾರೆ. ಅವರು ಏನು ಮಾಡುತ್ತಾರೆ ಎಂಬುದನ್ನು ಕಾದು ನೋಡುತ್ತೇನೆ. ಅಲ್ಲದೆ, ಜಿಲ್ಲೆಗೆ ಕೈಗಾರಿಕೆ ಹಾಗೂ ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ಕ್ರಮ ವಹಿಸುವ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.

ಅದಿರು ಸಿಗಲಿದೆಯೇ ಎಂಬ ಬಗ್ಗೆ ಪರಿಶೀಲನೆ: 

ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ದೇವದಾರಿ ಅರಣ್ಯ ಪ್ರದೇಶದಲ್ಲಿ ಕಬ್ಬಿಣದ ಅದಿರು ತೆಗೆಯಲು ಕುದುರೆಮುಖ ಕಬ್ಬಿಣ ಅದಿರು ಕಂಪನಿಗೆ ಗಣಿಗಾರಿಕೆಗೆ ಸಂಬಂಧಿಸಿದಂತೆ ಕಡತಕ್ಕೆ ಸಹಿ ಹಾಕಿರುವ ಬಗ್ಗೆ ಯಾರೂ ಅಪಾರ್ಥ ತಿಳಿದುಕೊಳ್ಳುವುದು ಬೇಡ. ಮೊದಲು ಒಂದು ವರ್ಷ ಟ್ರಯಲ್ ನಡೆಯುತ್ತದೆ. ಅದಿರು ಸಿಗಲಿದೆಯೇ ಎಂಬುದನ್ನು ನೋಡಲಿದ್ದಾರೆ ಎಂದು ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದರು.

ಅಲ್ಲಿ ಈ ಹಿಂದೆ ಗಣಿ ಚಟುವಟಿಕೆ ನಿಲ್ಲಿಸಿದ್ದರು. ಅದರ ಬಗ್ಗೆ ಸಾಮಾಜಿಕ ಹೋರಾಟಗಾರ ಹಿರೇಮಠ್ ಅವರು, ಹಿಂದೆ ೨೦೧೮ರಲ್ಲಿ ಸಿಎಂ ಆಗಿದ್ದಾಗ ಕುಮಾರಸ್ವಾಮಿ ಗಣಿಗಾರಿಕೆಗೆ ಅವಕಾಶ ಕೊಡಲ್ಲ ಎಂದಿದ್ದರು. ಆದರೆ, ಈಗ ಅವರೇ ಕಡತಕ್ಕೆ ಸಹಿ ಹಾಕಿದ್ದಾರೆ ಎಂದು ಆಕ್ಷೇಪ ಎತ್ತಿದ್ದಾರೆ. ಆದರೆ ನಾನು ಇದರ ಬಗ್ಗೆ ಸಾಕಷ್ಟು ಚರ್ಚೆ ನಡೆಸಿ, ಅಧಿಕಾರಿಗಳ ಜೊತೆ ಕೂಡ ಚರ್ಚೆ ಮಾಡಿದ್ದೇನೆ. 

ಕಡತ ಸಂಪೂರ್ಣ ಅಧ್ಯಯನ ಮಾಡಿಯೇ ಸಹಿ ಮಾಡಿದ್ದೇನೆ ಎಂದು ಸ್ಪಷ್ಟಪಡಿಸಿದರು.ಮುಂದಿನ 50 ವರ್ಷಗಳ ಕಾಲ ಅದಿರು ಉತ್ಪಾದನೆ ನಡೆಯುತ್ತದೆ. ಅಲ್ಲಿ ಮರಗಳನ್ನು ಬೆಳೆಸಲು, ಅರಣ್ಯ ಕಾಯಲು ಗುತ್ತಿಗೆ ಪಡೆದಿರುವ ಕಂಪನಿ ಸರ್ಕಾರಕ್ಕೆ123 ಕೋಟಿ ರು. ನೀಡಿದ್ದಾರೆ. ಹಸಿರೀಕರಣ ಮಾಡಲು ರಾಜ್ಯ ಸರ್ಕಾರಕ್ಕೆ ಕಂಪನಿ ಹಣ ಕೂಡ ಕಟ್ಟಿದ್ದಾರೆ. ೨ ಲಕ್ಷ ಮೆಟ್ರಿಕ್ ಟನ್ ಉತ್ಪಾದನೆ ಗುರಿ ಇಟ್ಟಿದ್ದಾರೆ. ೪೩೦ ಎಕರೆ ಜಮೀನಿಗೂ ರಾಜ್ಯ ಸರ್ಕಾರ ಅನುಮತಿ ನೀಡಿದೆ ಎಂದು ತಿಳಿಸಿದರು.

ನನ್ನೆದುರು ದೊಡ್ಡ ಸವಾಲು: ಪ್ರಧಾನಿ ಮೋದಿ ಅವರು, ಖಾತೆ ಹಂಚಿಕೆ ಮಾಡಿದ್ದಾರೆ. ನಾನು ಕೃಷಿ ಖಾತೆ ನಿರೀಕ್ಷೆ ಇಟ್ಟಿದ್ದೆ. ಆದರೆ ಅವರು ನನಗೆ ಎರಡು ಇಲಾಖೆ ಕೊಟ್ಟಿದ್ದಾರೆ. ಇದರಿಂದ ನನ್ನ ಮುಂದೆ ದೊಡ್ಡ ಸವಾಲು ಇದೆ. ಅಷ್ಟು ಸುಲಭವೂ ಅಲ್ಲ. ಇದು ಕಠಿಣ ಹಾದಿಯಾಗಿದೆ. ಎರಡು ಇಲಾಖೆ ಅಧಿಕಾರಿಗಳ ರಿವ್ಯೆವ್ ಮಿಟಿಂಗ್ ಮಾಡಿದ್ದೇನೆ. ಪ್ರಥಮ ಸಹಿ ರಾಜ್ಯದ ಉದ್ಯೋಗದ ಸಹಿಯಾಗಿದೆ. ಇದರಿಂದ ೨ ಸಾವಿರ ಉದ್ಯೋಗ ಸಿಗಲಿದೆ ಎಂದು ಹೇಳಿದರು.ಗೋಷ್ಠಿಯಲ್ಲಿ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಶಾಸಕ ಜಿ.ಟಿ.ದೇವೇಗೌಡ, ಎಚ್.ಟಿ.ಮಂಜು, ಮಾಜಿ ಶಾಸಕ ಕೆ.ಅನ್ನದಾನಿ, ಕೆ.ಸುರೇಶ್‌ಗೌಡ, ರವೀಂದ್ರ ಶ್ರೀಕಂಠಯ್ಯ, ಕೆ.ಟಿ.ಶ್ರೀಕಂಠೇಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಮುಖಂಡ ಬಿ.ಆರ್.ರಾಮಚಂದ್ರು, ಜಿಪಂ ಮಾಜಿ ಸದಸ್ಯ ಅಶೋಕ್ ಮತ್ತಿತರರಿದ್ದರು.

ಎಚ್‌ಡಿಕೆಯಿಂದ ಸಂಸದರ ಕಚೇರಿ ಉದ್ಘಾಟನೆ:

ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದ ಸಂಸದ ಎಚ್.ಡಿ.ಕುಮಾರಸ್ವಾಮಿ ಶನಿವಾರ ರಾತ್ರಿ 10 ಗಂಟೆ ವೇಳೆಗೆ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ಸಂಸದರ ಕಚೇರಿಯನ್ನು ಉದ್ಘಾಟಿಸಿದರು. ಟೇಪ್ ಕತ್ತರಿಸುವ ಮೂಲಕ ಕಚೇರಿ ಒಳಗೆ ಪ್ರವೇಶಿಸಿದ ಕುಮಾರಸ್ವಾಮಿ ಅವರು ದೇವರಿಗೆ ಪೂಜೆ ಸಲ್ಲಿಸಿದರು. ಆನಂತರ ಕೆಲ ಸಮಯದವರೆಗೆ ಕುರ್ಚಿಯಲ್ಲಿ ಆಸೀನರಾಗಿದ್ದರು. ಎಚ್.ಡಿ.ಕುಮಾರಸ್ವಾಮಿ ಅವರಿಗೆ ಶಾಸಕ ಜಿ.ಟಿ.ದೇವೇಗೌಡ, ಹೆಚ್.ಟಿ.ಮಂಜು, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ, ಕೆ.ಸುರೇಶ್‌ಗೌಡ, ಕೆ.ಟಿ.ಶ್ರೀಕಂಠೇಗೌಡ, ಮುಖಂಡ ಬಿ.ಆರ್.ರಾಮಚಂದ್ರ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್ ಇತರರಿದ್ದರು.