ಪಿಎಚ್‌.ಡಿ ವಿದ್ಯಾರ್ಥಿನಿ ನಾಪತ್ತೆ ಕೇಸ್‌ : ಲವ್‌ ಜಿಹಾದ್‌ ಆರೋಪ

| Published : Feb 26 2024, 01:36 AM IST

ಸಾರಾಂಶ

ಉಳ್ಳಾಲದ ದೇರಳಕಟ್ಟೆಯ ಪಿಎಚ್‌.ಡಿ ವಿದ್ಯಾರ್ಥಿನಿ ಎಂಟು ದಿನಗಳ ಹಿಂದೆ ನಾಪತ್ತೆಯಾಗಿದ್ದು, ಲವ್‌ ಜಿಹಾದ್‌ ಆರೋಪ ಕೇಳಿ ಬಂದಿದೆ.

ಉಳ್ಳಾಲ (ಮಂಗಳೂರು): ಇಲ್ಲಿನ ದೇರಳಕಟ್ಟೆಯ ಪಿಎಚ್‌.ಡಿ ವಿದ್ಯಾರ್ಥಿನಿ ಎಂಟು ದಿನಗಳ ಹಿಂದೆ ನಾಪತ್ತೆಯಾಗಿದ್ದು, ಲವ್‌ ಜಿಹಾದ್‌ ಆರೋಪ ಕೇಳಿ ಬಂದಿದೆ. ಈ ಮಧ್ಯೆ, ನಾಪತ್ತೆ ಪ್ರಕರಣ ದಾಖಲಾಗಿ 8 ದಿನಗಳ ಬಳಿಕ, ಭಾನುವಾರ ವಿದ್ಯಾರ್ಥಿನಿ ಬಳಸುತ್ತಿದ್ದ ಆಕ್ಟಿವಾ ಸ್ಕೂಟರ್‌ ಸುರತ್ಕಲ್‌ ಬಳಿ ಪತ್ತೆಯಾಗಿದೆ. ಪುತ್ತೂರು ನಿವಾಸಿ ದಿ.ಸತೀಶ್‌ ಹೆಬ್ಬಾರ್‌ ಪುತ್ರಿ ಚೈತ್ರಾ ಹೆಬ್ಬಾರ್‌ (೨೭) ನಾಪತ್ತೆಯಾದವರು. ಕೋಟೆಕಾರು ಮಾಡೂರು ಬಳಿ ಪಿ.ಜಿ.ಯಲ್ಲಿ ನೆಲೆಸಿದ್ದ ಈಕೆ ಎಂಎಸ್ಸಿ ಬಳಿಕ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಫುಡ್‌ ಸೆಕ್ಯುರಿಟಿ ವಿಭಾಗದಲ್ಲಿ ಪಿಎಚ್‌.ಡಿ ಮಾಡುತ್ತಿದ್ದರು. ಫೆ.17ರಂದು ಪಿ.ಜಿಯಿಂದ ಹೊರಹೋದಾಕೆ ಕಾಲೇಜಿಗೂ ತೆರಳದೆ ನಾಪತ್ತೆಯಾಗಿದ್ದರು. ಪುತ್ತೂರು ಮೂಲದ ಮುಸ್ಲಿಂ ಯುವಕ ಮಾಡೂರಿನಲ್ಲಿರುವ ಈ ಪಿ.ಜಿ.ಗೆ ಆಗಾಗ ಬಂದು ಹೋಗುತ್ತಿದ್ದ. 10 ದಿನಗಳ ಹಿಂದೆ ಸ್ಥಳೀಯರು ಈ ಸಂಗತಿಯನ್ನು ಬಜರಂಗದಳದ ಗಮನಕ್ಕೆ ತಂದಿದ್ದರು. ಪಿಜಿಯಲ್ಲಿ ವಿಚಾರಿಸಿದಾಗ ಹಿಂದೂ ವಿದ್ಯಾರ್ಥಿನಿಯರು ಇರುತ್ತಿದ್ದ ಪಿಜಿಯಲ್ಲಿ ಆತನೂ ಉಳಿಯುತ್ತಿದ್ದ ಎಂಬ ಸಂಗತಿ ಬಯಲಾಗಿತ್ತು ಎಂದು ಬಜರಂಗದಳ ದೂರಿದೆ.

ಈ ಕುರಿತು ಆಕೆಯ ಚಿಕ್ಕಪ್ಪ ಪ್ರಕಾಶ್‌ ಹೆಬ್ಬಾರ್‌, ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ. ನಾಪತ್ತೆಯಾಗಿ 8 ದಿನಗಳು ಕಳೆದ ಬಳಿಕ ಭಾನುವಾರ ಸುರತ್ಕಲ್‌ ಸಮೀಪ ಚೈತ್ರಾ ಉಪಯೋಗಿಸುತ್ತಿದ್ದ ಆಕ್ಟಿವಾ ಸ್ಕೂಟರ್‌ ಪತ್ತೆಯಾಗಿದೆ.

ಲವ್‌ ಜಿಹಾದ್‌ ಆರೋಪ:

ಆ ಯುವಕ ಡ್ರಗ್‌ ಪೆಡ್ಲರ್‌ ಆಗಿರುವ ಸಂಶಯದಿಂದ ಚೈತ್ರಾಳ ದೊಡ್ಡಪ್ಪನನ್ನು ಸಂಪರ್ಕಿಸಿ ಮಾಹಿತಿ ನೀಡಲಾಗಿತ್ತು. ದೊಡ್ಡಪ್ಪ ಈ ಬಗ್ಗೆ ಯುವತಿಯ ವಿಚಾರಣೆ ನಡೆಸಿದ ಮರುದಿನ, ಫೆ.17 ರಂದು ಚೈತ್ರಾ ದಿಢೀರ್‌ ನಾಪತ್ತೆಯಾಗಿದ್ದಾಳೆ. ಆ ಯುವಕನೇ ಚೈತ್ರಾಳನ್ನು ಅಪಹರಿಸಿರುವ ಸಾಧ್ಯತೆಯಿದೆ ಎಂದು ಆರೋಪಿಸಲಾಗಿದೆ.

ಈ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಬಜರಂಗದಳ ಉಳ್ಳಾಲ ಪ್ರಖಂಡ ಸಂಚಾಲಕ ಅರ್ಜುನ್‌ ಮಾಡೂರು, ಈ ಯುವಕನೇ ಆಕೆಯನ್ನು ಅಪಹರಿಸಿರುವ ಸಾಧ್ಯತೆಯಿದೆ. ಆತನನ್ನು ತಕ್ಷಣ ಬಂಧಿಸಬೇಕು. ಮೂರು ದಿನಗಳ ಒಳಗೆ ಯುವತಿಯನ್ನು ಪತ್ತೆ ಮಾಡದೆ ಇದ್ದಲ್ಲಿ ತೀವ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.