ಸಾರಾಂಶ
ಹೊಸಪೇಟೆ: ಭಾರತೀಯ ಪರಂಪರೆಯ ಮೊಟ್ಟ ಮೊದಲ ಕವಿ ಮಹರ್ಷಿ ವಾಲ್ಮೀಕಿ ಆಗಿದ್ದು, ಅವರು ಬರೆದ ವಾಲ್ಮೀಕಿ ರಾಮಾಯಣ ಕೇವಲ ಒಂದು ಜಾತಿ, ಸಮುದಾಯ, ಒಬ್ಬ ವ್ಯಕ್ತಿಗೆ ಸೀಮಿತವಾಗಿಲ್ಲ. ಅವರ ತತ್ವ, ಸಿದ್ದಾಂತವು ಇಡೀ ವಿಶ್ವದ ಮನುಕುಲಕ್ಕೆ ಮಾದರಿಯಾಗಿದೆ ಎಂದು ತುಮಕೂರಿನ ಪದವಿಪೂರ್ವ ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕ ಎಚ್.ಕೆ. ನರಸಿಂಹಮೂರ್ತಿ ಹೇಳಿದರು.
ಕನ್ನಡ ವಿಶ್ವವಿದ್ಯಾಲಯದ ಮಂಟಪ ಸಭಾಂಗಣದಲ್ಲಿ ವಾಲ್ಮೀಕಿ ಅಧ್ಯಯನ ಪೀಠದ ವತಿಯಿಂದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಸಮಕಾಲೀನ ಸಂದರ್ಭದಲ್ಲಿ ವಾಲ್ಮೀಕಿ ರಾಮಾಯಣ ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ರಾಮಾಯಣವು ರಾಮನನ್ನು ಎಂದೂ ದೇವರನ್ನಾಗಿ ಕಂಡಿಲ್ಲ, ಅವರನ್ನು ಒಬ್ಬ ಉತ್ಕೃಷ್ಟ ವ್ಯಕ್ತಿಯನ್ನಾಗಿ ಕಂಡಿದೆ. ಇಂತಹ ವಾಲ್ಮೀಕಿ ರಾಮಾಯಣ ನಾವು ಮರೆತರೆ ಭಾರತದ ಸಂಸ್ಕೃತಿ ಹಾಗೂ ಇತಿಹಾಸ ಮರೆತಂತೆ. ಪ್ರಮುಖವಾಗಿ ರಾಮಾಯಣ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂದು ಮೊದಲು ಸಾರಿದ ಮಹಾಕಾವ್ಯವಾಗಿದ್ದು, ಇದರಲ್ಲಿ ಉತ್ತಮ ವ್ಯಕ್ತಿ ನಡವಳಿಕೆಗಳೇನು, ಪರಿಸರವನ್ನು ಹೇಗೆ ಪೂಜಿಸಿಬೇಕು, ಗುರುಕುಲ ಶಿಕ್ಷಣ ಹೇಗಿರಬೇಕು, ಜನರಲ್ಲಿ ಸ್ನೇಹ ಸಂಬಂಧ ಹಾಗೂ ಬಾಂಧವ್ಯ ಹೇಗಿರಬೇಕು ಎನ್ನುವುದನ್ನು ಗ್ರಂಥದಲ್ಲಿ ತಿಳಿಸುತ್ತದೆ ಎಂದರು.ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಒಳ್ಳೆಯ ಮನುಷ್ಯನಾಗುವುದಕ್ಕೆ ವಾಲ್ಮೀಕಿ ರಾಮಾಯಣ ಉದಾಹರಣೆಯಾಗಿ ನೀಡುತ್ತಾರೆ. ವಾಲ್ಮೀಕಿ ರಾಮಾಯಣ ಓದಿ ಅದರ ಸಂದೇಶವನ್ನು ಅಳವಡಿಸಿಕೊಂಡು ಜೀವನ ನಡೆಸಿದರೆ ಉತ್ತಮ ಸಮಾಜವನ್ನು ನಿರ್ಮಿಸಬಹುದು ಎಂದರು.
ಸಂಡೂರು ವಿಧಾನಸಭಾ ಕ್ಷೇತ್ರದ ಶಾಸಕಿ ಅನ್ನಪೂರ್ಣ ಮಾತನಾಡಿ, ಶ್ರೀ ಮಹರ್ಷಿ ವಾಲ್ಮೀಕಿ ಅವರು 64 ವಿದ್ಯೆಗಳನ್ನು ಕಲಿತ ಮಹಾನ್ ಚೇತನ, ಕೇವಲ ಒಂದೇ ಯುಗಕ್ಕೆ ಸೀಮಿತವಾಗಿಸದೇ, ಮುಂದಿನ ಯುಗ ಯುಗಕ್ಕೂ ಅವರನ್ನು ಸ್ಮರಿಸುವ ಅಗತ್ಯವಿದೆ. ಪ್ರಕೃತಿಯೊಂದಿಗೆ ನಾವು ಯಾವ ರೀತಿ ಜೀವಿಸಬೇಕೆಂಬ ಸಂದೇಶವನ್ನು ತಿಳಿಸಿದವರು. ಇಂತಹ ಆದರ್ಶಗಳನ್ನು ನಾವೆಲ್ಲರೂ ಅಳವಡಿಸಿಕೊಂಡಾಗ ನಮ್ಮಲ್ಲಿ ಬದಲಾವಣೆ ಸಾಧ್ಯ ಎಂದರು.ಕನ್ನಡ ವಿಶ್ವವಿದ್ಯಾಲಯದ ಕುಲಸಚಿವ ಡಾ. ವಿಜಯ್ ಪೂಣಚ್ಚ ತಂಬಂಡ ಅವರು ಮಾತನಾಡಿ, ವಾಲ್ಮೀಕಿ ರಾಮಾಯಣದ ಸಂದೇಶಗಳನ್ನು ಪ್ರತಿನಿತ್ಯ ನಮ್ಮ ಜೀವನದಲ್ಲಿ ಮತ್ತು ನಮ್ಮ ಬದುಕಿನಲ್ಲಿ ನೆನಪಿಸಿಕೊಳ್ಳುತ್ತ ಬಾಳಬೇಕು. ಇದು ಮನುಷ್ಯನ ಮೌಲ್ಯಗಳನ್ನು ಹೆಚ್ಚಿಸುವಂತಹ ಕಾವ್ಯವಾಗಿದ್ದು, ಪ್ರಕೃತಿಯ ಸಾರಾಂಶವನ್ನು ಸಾರಿದೆ ಎಂದರು.
ಕನ್ನಡ ವಿಶ್ವವಿದ್ಯಾಲಯ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಮಾಯಣವು ವಿಶ್ವದಲ್ಲೇ ಹೆಚ್ಚು ಪ್ರಭಾವಿಸಿದ ಮಹಾಕಾವ್ಯ. ಇದು ಜನಸಾಮಾನ್ಯರಲ್ಲಿಯೂ ಹಾಗೂ ಸಾಹಿತ್ಯವಲದಲ್ಲಿಯೂ ಪ್ರಭಾವ ಬೀರಿದೆ. ರಾಮಾಯಣವು ಎಲ್ಲಾ ಪಂಥದವರೂ ಚರ್ಚಿಸುವ ಒಂದು ಮಹಾಕಾವ್ಯವಾಗಿದೆ. ವಾಲ್ಮೀಕಿ ಜಯಂತಿಯ ಮೂಲಕ ವಾಲ್ಮೀಕಿಯ ಸಂದೇಶಗಳನ್ನು ಸಾರಬೇಕು, ರಾಮಾಯಣದ ಹೆಚ್ಚಿನ ಆದರ್ಶಗಳನ್ನು ಕಾಣಬೇಕು, ಮತ್ತು ಸುಖಿ ಸಮಾಜವನ್ನು ಕಟ್ಟಬೇಕು ಎಂದರು.2025ನೇ ಸಾಲಿನ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪುರಸ್ಕೃತ ಕೆ. ಉಚ್ಚೆಂಗೆಪ್ಪ ಮಾತನಾಡಿದರು.
ವಾಲ್ಮೀಕಿ ಅಧ್ಯಯನ ಪೀಠದ ಸಂಚಾಲಕ ಡಾ. ಅಮರೇಶ ಯತಗಲ್ ಪ್ರಾಸ್ತಾವಿಕ ಮಾತನಾಡಿದರು. ಕನ್ನಡ ಭಾಷಾ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ.ಪಿ. ಮಹಾದೇವಯ್ಯ, ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಬೋಧಕ- ಬೋಧಕೇತರ ಸಿಬ್ಬಂದಿ, ಸಂಶೋಧನಾರ್ಥಿಗಳು ಇದ್ದರು.15ಎಚ್‌ಪಿಟಿ11- ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಬುಧವಾರ ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಸಂಡೂರು ವಿಧಾನಸಭಾ ಕ್ಷೇತ್ರದ ಶಾಸಕಿ ಅನ್ನಪೂರ್ಣ ಉದ್ಘಾಟಿಸಿದರು.