ಛಾಯಾಗ್ರಾಹಕರು ಕ್ರೀಡಾಕೂಟಗಳಲ್ಲಿ ಆಸಕ್ತಿ ವಹಿಸಿ: ಎಂ.ನರಸಿಂಹಮೂರ್ತಿ ಸಲಹೆ

| Published : Jul 27 2024, 12:48 AM IST

ಸಾರಾಂಶ

ಇತ್ತೀಚಿನ ದಿನಗಳಲ್ಲಿ ಛಾಯಾಗ್ರಾಹಕ ವೃತ್ತಿಯಲ್ಲಿ ಸ್ಪರ್ಧಾತ್ಮಕತೆ ಹೆಚ್ಚಾಗಿದ್ದು, ಅದರಲ್ಲೂ ಮೊಬೈಲ್ ದಾಳಿಯಿಂದ ಛಾಯಾಗ್ರಹಕ ವೃತ್ತಿಗೂ ಧಕ್ಕೆಯುಂಟಾಗಿದೆ, ಛಾಯಾಗ್ರಹಕರು ತಮ್ಮ ವೃತ್ತಿ ಕೌಶಲ್ಯದ ಮೂಲಕ ತಮ್ಮ ಪ್ರತಿಭೆಯನ್ನು ಅನಾವರಣ ಮಾಡುವ ಮೂಲಕ ತಮ್ಮ ವಹಿವಾಟು ಹೆಚ್ಚಿಸಿಕೊಳ್ಳುವ ಮೂಲಕ ಆರ್ಥಿಕ ಅಭಿವೃದ್ಧಿ ಹೊಂದಬೇಕಿದೆ.

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ಛಾಯಾಗ್ರಾಹಕರು ತಮ್ಮ ವೃತ್ತಿ ಕೌಶಲ್ಯದ ಜೊತೆಗೆ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ಉತ್ತಮ ಬೆಳವಣಿಗೆಯಾಗಿದೆ, ಇದರಿಂದ ಮಾನಸಿಕ ಮತ್ತು ದೈಹಿಕವಾಗಿ ಸದೃಢ ಆರೋಗ್ಯಕ್ಕೆ ಸಹಕಾರಿಯಾಗುತ್ತದೆ ಎಂದು ನಗರಸಭೆ ಮಾಜಿ ಅಧ್ಯಕ್ಷ ಎಂ.ನರಸಿಂಹಮೂರ್ತಿ ತಿಳಿಸಿದರು.

ತಾಲೂಕು ಛಾಯಾಗ್ರಾಹಕರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಛಾಯಾಗ್ರಾಹಕರಿಗೆ ಸೌಹಾರ್ಧತೆಯ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಛಾಯಾಗ್ರಾಹಕರು ವೃತ್ತಿಪರ ಜೀವನದ ಜಂಜಾಟದಲ್ಲಿ ಸದಾ ನಿರತರಾಗಿರುತ್ತೀರಿ, ಆಷಾಢ ಮಾಸದಲ್ಲಿ ವೃತ್ತಿಗೆ ಅಲ್ಪ ವಿರಾಮ ಸಿಕ್ಕಂತಾಗಿರುತ್ತದೆ, ಈ ಸಮಯವನ್ನು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಛಾಯಾಗ್ರಹಕರಲ್ಲಿನ ಸೌಹಾರ್ಧತೆ ವೃದ್ಧಿಗೆ ಹೆಚ್ಚು ಸಹಕಾರಿಯಾಗುತ್ತದೆ ಎಂದರು.

ಇತ್ತೀಚಿನ ದಿನಗಳಲ್ಲಿ ಛಾಯಾಗ್ರಾಹಕ ವೃತ್ತಿಯಲ್ಲಿ ಸ್ಪರ್ಧಾತ್ಮಕತೆ ಹೆಚ್ಚಾಗಿದ್ದು, ಅದರಲ್ಲೂ ಮೊಬೈಲ್ ದಾಳಿಯಿಂದ ಛಾಯಾಗ್ರಹಕ ವೃತ್ತಿಗೂ ಧಕ್ಕೆಯುಂಟಾಗಿದೆ, ಛಾಯಾಗ್ರಹಕರು ತಮ್ಮ ವೃತ್ತಿ ಕೌಶಲ್ಯದ ಮೂಲಕ ತಮ್ಮ ಪ್ರತಿಭೆಯನ್ನು ಅನಾವರಣ ಮಾಡುವ ಮೂಲಕ ತಮ್ಮ ವಹಿವಾಟು ಹೆಚ್ಚಿಸಿಕೊಳ್ಳುವ ಮೂಲಕ ಆರ್ಥಿಕ ಅಭಿವೃದ್ಧಿ ಹೊಂದಬೇಕಿದೆ ಎಂದು ತಿಳಿಸಿದರು.

ಛಾಯಾಗ್ರಹಕರ ಸಂಘದ ಕ್ರಿಡಾಪಟುಗಳಿಗೆ ಸಮವಸ್ತ್ರ ಹಾಗೂ ಕ್ರಿಕೆಟ್ ಕಿಟ್‌ಗಳನ್ನು ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಮೂಲಕ ವಿತರಿಸುವ ಕೆಲಸವನ್ನು ಮಾಡಲಾಗುವುದು ಎಂದು ಈ ಸಂದರ್ಭದಲ್ಲಿ ತಿಳಿಸಿದರು.

ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಅಬ್ದುಲ್ಲಾ ಮಾತನಾಡಿ, ಕ್ರೀಡಾ ಚಟುವಟಕೆಗಳಿಂದ ಸದೃಢ ಆರೋಗ್ಯದ ಜೊತೆಗೆ ಮಾನಸಿಕವಾಗಿ ವಿಕಾಸಗೊಂಡು ನಿಮ್ಮ ವೃತ್ತಿ ಕೌಶಲ್ಯದ ಅಭಿವೃದ್ಧಿ ಹೊಂದಲು ಸಹಕಾರಿಯಾಗುತ್ತದೆ , ಮುಂದಿನ ದಿನಗಳಲ್ಲಿ ಶಾಸಕರ ನೇತೃತ್ವದಲ್ಲಿ ರಾಜ್ಯ ಮಟ್ಟದ ಛಾಯಾಗ್ರಾಹಕರ ಕ್ರಿಕೆಟ್ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲು ಚರ್ಚಿಸಲಾಗುವುದು ಎಂದರು.

ಜಯ ಕರ್ನಾಟಕ ಜಿಲ್ಲಾಧ್ಯಕ್ಷ ಜಿ.ಎ.ಪ್ರದೀಪ್ ಮಾತನಾಡಿ, ಛಾಯಾಗ್ರಹಕರು ತಮ್ಮ ವೃತ್ತಿ ಕೌಶಲ್ಯದ ಜೊತೆಗೆ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ತಮ್ಮದೇ ಛಾಪನ್ನು ಮೈಗೂಡಿಸಿಕೊಂಡಿದ್ದಾರೆ, ಮುಂದಿನ ದಿನಗಳಲ್ಲಿ ಉತ್ತಮ ಆಟಗಾರರಾಗಿ ಹೊರಹೊಮ್ಮುವಂತೆ ಅಭಿನಂದಿಸಿದರು.

ತಾಲೂಕು ಛಾಯಾಗ್ರಹಕರ ಸಂಘದ ಅಧ್ಯಕ್ಷ ಪಣೀಲ್ ಕುಮಾರ್ ಮಾತನಾಡಿ, ವೃತ್ತಿನಿರತ ಛಾಯಾಗ್ರಹಕರು ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢರಾಗಲು ಕ್ರಿಡಾಚಟುವಟಿಕೆಗಳು ಸಹಕಾರಿ, ಈ ನಿಟ್ಟಿನಲ್ಲಿ ಕ್ರೀಡಾಚಟುವಟಿಕೆಗಳಿಗೆ ಆದ್ಯತೆಯನ್ನು ನೀಡಲಾಗುತ್ತಿದೆ ಎಂದರು.

ಸೌಹಾರ್ಧತೆಯ ಛಾಯಾಗ್ರಹಕರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಛಾಯಾಗ್ರಾಹಕ ಶೆಕ್ಷಾವಲಿ ತಂಡ ಪ್ರಥಮ ಸ್ಥಾನವನ್ನು ಪಡೆದುಕೊಂಡಿತು, ಎರಡನೇ ಸ್ಥಾನವನ್ನು ಅನಿಲ್ ತಂಡ, ಅತ್ಯುತ್ತಮ ಆಟಗಾರ ಪ್ರಶಸ್ತಿಯನ್ನು ನಾಗೇಂದ್ರ ಜೈನ್ ಪಡೆದುಕೊಂಡರೆ, ಮೂರನೇ ಸ್ಥಾನವನ್ನು ದಾದೂಪೀರ್ ತಂಡ ತನ್ನದಾಗಿಸಿಕೊಂಡಿತು.

ಸಂಭ್ರಮ: ತಾಲೂಕಿನ ಛಾಯಾಗ್ರಹಕರು ಒಂದೆಡೆ ಸೇರಿ ಸೌಹಾರ್ಧತೆಯ ಕ್ರಿಕೆಟ್ ಕ್ರೀಡಾಕೂಟದಲ್ಲಿ ಉತ್ಸಾಹದಿಂದ ಮಿಂದೆದ್ದರು, ಛಾಯಾಗ್ರಾಹಕರೆಲ್ಲರೂ ಒಂದೆಡೆ ಸೇರಿ ಕ್ರಿಕೆಟ್ ಕ್ರೀಡಾಕೂಟವನ್ನು ಸಂಭ್ರಮಿಸಿದರು.

ತಾಲೂಕು ಛಾಯಾಗ್ರಾಹಕರ ಸಂಘದ ಗೌರವಾಧ್ಯಕ್ಷ ಪ್ರದೀಪ್, ಸಂಸ್ಥಾಪಕ ಅಧ್ಯಕ್ಷ ದೇವಿಮಂಜುನಾಥ್, ಮಾಜಿ ಅಧ್ಯಕ್ಷ ಅರುಣ್‌ಕುಮಾರ್, ಹಿರಿಯ ಛಾಯಾಗ್ರಾಹಕರಾದ ನಾಗರಾಜ್ ಜೈನ್, ಅಂಜಿನಪ್ಪ, ಸುರೇಶ್, ಛಾಯಾಗ್ರಹಕರ ಸಂಘದ ಖಜಾಂಚಿ ಶ್ರೀನಿವಾಸ್ ಹಾಗೂ ಪದಾಧಿಕಾರಿಗಳು ಹಾಜರಿದ್ದರು.