ಯಲ್ಲಾಪುರದಲ್ಲಿ ಇಂದು ಛಾಯಾಚಿತ್ರ ಪ್ರದರ್ಶನ

| Published : Mar 30 2025, 03:04 AM IST

ಸಾರಾಂಶ

ಜಿಲ್ಲೆಯ ಜಲಪಾತಗಳು, ಸೂರ್ಯಾಸ್ತದ ಸುಂದರ ಚಿತ್ರ, ಸಮುದ್ರ ಕಿನಾರೆ, ಮಂದಿರಗಳು, ಅಭಯಾರಣ್ಯಗಳಲ್ಲಿ ಕಾಣುವ ಪ್ರಾಣಿ, ಪಶು, ಪಕ್ಷಿ, ಹಾವುಗಳ ವಿಹಂಗಮ ನೋಟ ನಮ್ಮ ಕಣ್ಣಮುಂದೆ ಹಾಯುವಂತೆ ಚಿತ್ರಿಸುವ ಚಿತ್ರಗಳು ಇವು.

ಯಲ್ಲಾಪುರ: ಉತ್ತರ ಕನ್ನಡದ ಪ್ರಾಕೃತಿಕ ವೈವಿಧ್ಯತೆಯ, ಪ್ರೇಕ್ಷಣೀಯ ತಾಣಗಳನ್ನು ಚಿತ್ರಿಸಿ, ಒಂದೆಡೆ ಸ್ಥಾಪಿಸಿ, ಜಿಲ್ಲೆಯ ಸೊಬಗನ್ನು ಸವಿಯುವಂತೆ ಛಾಯಾಗ್ರಹಣದ ಕಲಾಕೌಶಲ್ಯವನ್ನು ಯಲ್ಲಾಪುರದ ಸಂಕಲ್ಪ ಸಭಾಭವನದಲ್ಲಿ ಮಾ.30ರಂದು ಬೆಳಿಗ್ಗೆ 10:30ಕ್ಕೆ ಅನಾವರಣಗೊಳ್ಳಲಿದೆ.

ಇಲ್ಲಿ ನೂರಕ್ಕೂ ಹೆಚ್ಚಿನ ಸಂಖ್ಯೆಯ ನೈಜತೆಯ ಕಲಾಪ್ರೌಢಿಮೆಯ ಚಿತ್ರಗಳನ್ನು ಒಂದೆಡೆ ಸೇರಿಸಿ, ಪ್ರದರ್ಶಿಸುವ ವ್ಯವಸ್ಥೆಯನ್ನು ಹಿರಿಯ ರಾಜಕಾರಣಿ ಪ್ರಮೋದ ಹೆಗಡೆ ಮಾಡಿದ್ದಾರೆ.

ಜಿಲ್ಲೆಯ ಜಲಪಾತಗಳು, ಸೂರ್ಯಾಸ್ತದ ಸುಂದರ ಚಿತ್ರ, ಸಮುದ್ರ ಕಿನಾರೆ, ಮಂದಿರಗಳು, ಅಭಯಾರಣ್ಯಗಳಲ್ಲಿ ಕಾಣುವ ಪ್ರಾಣಿ, ಪಶು, ಪಕ್ಷಿ, ಹಾವುಗಳ ವಿಹಂಗಮ ನೋಟ ನಮ್ಮ ಕಣ್ಣಮುಂದೆ ಹಾಯುವಂತೆ ಚಿತ್ರಿಸುವ ಚಿತ್ರಗಳು ಇವು.

ಮೌನ ಗ್ರಂಥಾಲಯ, ಕಲೆ, ಸಂಗೀತ, ಸಾಹಿತ್ಯ, ನೃತ್ಯ ಕಲೆಗಳ ಪೋಷಣೆ ಮಾಡುತ್ತ ಬಂದಿರುವ ಅವರು ಇಂದು ತಾವೇ ೪೦ ವರ್ಷಗಳ ಹಿಂದೆ ಚಿತ್ರಿಸಿದ ಛಾಯಾಚಿತ್ರಗಳನ್ನು ನೂತನ ಸಂಕಲ್ಪ ಕಲಾಭವನದಲ್ಲಿ ಮರುಸ್ಥಾಪಿಸಿದ್ದಾರೆ.

ಈ ಕುರಿತು ಅವರನ್ನು ಮಾತನಾಡಿಸಿದಾಗ, ದೇಶದಲ್ಲೇ ಉತ್ತರ ಕನ್ನಡ ಜಿಲ್ಲೆಯಂತಹ ವಿಶಿಷ್ಟ, ವೈವಿಧ್ಯಮಯ ಜಿಲ್ಲೆ ಬೇರಿಲ್ಲ. ಇದು ದೈವದತ್ತ ಕೊಡುಗೆ. ಆದರೆ, ಪ್ರವಾಸೋದ್ಯಮದ ನೆಲೆಯಲ್ಲಿ ನಮ್ಮ ಸರ್ಕಾರ ಗಮನಹರಿಸದೇ ಇರುವುದು ಜಿಲ್ಲೆಯ ದುರ್ದೈವ. ನಾನು ಜಿಪಂ ಉಪಾಧ್ಯಕ್ಷ ಇದ್ದಾಗ ಮತ್ತು ಲೋಕಸಭೆ ಚುನಾವಣೆಗೆ ನಿಂತಾಗ ಇಡೀ ಜಿಲ್ಲೆಯ ಪ್ರತೀ ಪಂಚಾಯತಗಳನ್ನು ಓಡಾಡಲು ಅವಕಾಶ ಲಭಿಸಿತ್ತು. ಅಂದಿನ ಕಾಲದಲ್ಲಿದ್ದ ಅರಣ್ಯಾಧಿಕಾರಿ ಶಿವನಗೌಡ, ದೂರದರ್ಶನದ ಜಿ.ಎಸ್.ಕುಮಾರ (ಚಿತ್ರ ನಿರ್ಮಾಪಕ), ಛಾಯಾಗ್ರಾಹಕ ವಿ.ವೈ.ಪಾಟೀಲ, ಹಿಂದಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಐ.ಎಂ.ವಿಠ್ಠಲ ಮೂರ್ತಿ ಅವರ ಸಹಕಾರ ಪಡೆದು, ಸಾವಿರಾರು ಪುಸ್ತಕಗಳನ್ನು ರಚಿಸಿ, ಡಾಕ್ಯೂಮೆಂಟರಿ ಫಿಲ್ಮಂ ಮಾಡಿ, ದೇಶ-ವಿದೇಶಗಳಲ್ಲಿ ಜಿಲ್ಲೆಯ ಈ ಎಲ್ಲ ವಿಸ್ಮಯಗಳನ್ನು ಪರಿಚಯಿಸಿದೆ. ಅದರಿಂದಾಗಿಯೇ ''''''''ನಮ್ಮೂರ ಮಂದಾರ ಹೂವು'''''''' ಚಿತ್ರೀಕರಣವಾಯಿತು. ಈ ಛಾಯಾಗ್ರಹಣದಲ್ಲಿ ವಿಶಿಷ್ಟ ಸಾಧನೆ ಕಾಣಬಹುದಾಗಿದೆ. ಕಪ್ಪುಚಿರತೆ, ಜಲಪಾತದ, ಕಲ್ಲುಬಂಡೆಗಳ ಇಂಚಿಂಚು ಕಾಣುವಂತೆ ಚಿತ್ರಿಸಲಾಗಿದೆ. ನೂರು ವರ್ಷಗಳ ಹಿಂದೆ ಪೋರ್ಚುಗೀಸರು ನಮ್ಮಲ್ಲಿನ ಸಂಪತ್ತನ್ನು ದೋಚಲು, ಕ್ಯಾಸಲ್‌ರಾಕ್ ಮೂಲಕ ಗೋವಾಕ್ಕೆ ಸಂಪರ್ಕ ಮಾಡಿರುವುದನ್ನು ಕಂಡಿದ್ದೇವೆ. ಇದರಿಂದ ಜಿಲ್ಲೆಗೆ ರೈಲು ಬಂದಿದೆ ಎನ್ನಬಹುದೇ ವಿನಃ ಪ್ರಯೋಜನ ನಮಗಿಲ್ಲ. ಅಂಕೋಲಾ-ಹುಬ್ಬಳ್ಳಿ ರೈಲು ಆದಲ್ಲಿ ಪ್ರವಾಸೋದ್ಯಮಕ್ಕೆ ಸರ್ಕಾರ ಮನಸು ಮಾಡಿದರೆ ಸಾವಿರಾರು ಯುವಕರಿಗೆ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಸಬಹುದು ಎಂಬುದು ನನ್ನ ಅನೇಕ ವರ್ಷಗಳ ಕನಸು. ಫೋಟೋಗ್ರಫಿಯ ಶಕ್ತಿ ಏನೆಂಬುದನ್ನು ಇಲ್ಲಿ ಕಾಣಬಹುದಾಗಿದೆ ಎಂದು ತಮ್ಮ ಸಂತಸದ ಮನದಾಳವನ್ನು ಹಂಚಿಕೊಂಡರು.