ಸಾರಾಂಶ
ಸಿರಿ ಗ್ರಾಮೋದ್ಯೋಗ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್. ಜನಾರ್ದನ್ ರುಡ್‌ಸೆಟ್ ಬೆಳೆದು ಬಂದ ವಿಧಾನದ ಅವಲೋಕನ ಮಾಡಿದರು.
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಛಾಯಾಗ್ರಹಣ ವಿಶಿಷ್ಟ ಕಲೆಯಾಗಿದ್ದು, ಸಮಯ, ಸಂದರ್ಭ ಮತ್ತು ಭಾವನೆಗಳನ್ನು ಗಮನಿಸಿ ಫೋಟೊ ತೆಗೆಯುವ ಕಲೆಯನ್ನು ಕರಗತ ಮಾಡಿಕೊಳ್ಳಬೇಕು. ಬೆಳಕು, ಮುಖದ ಭಾವನೆಗಳು ಹಾಗೂ ಮಾನಸಿಕ ಸ್ಥಿತಿಯನ್ನು ಗಮನಿಸಿ ಫೋಟೊ ತೆಗೆದರೆ ಮಾತ್ರ ಅದು ಆಕರ್ಷಕವಾಗಿ ಮೂಡಿ ಬರಲು ಸಾಧ್ಯ ಎಂದು ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.ಉಜಿರೆಯಲ್ಲಿ ರುಡ್‌ಸೆಟ್ ಸಂಸ್ಥೆಯಲ್ಲಿ ೩೦ ದಿನಗಳ ಕಾಲ ನಡೆದ ‘ಫೋಟೊಗ್ರಫಿ ಮತ್ತು ವೀಡಿಯೊಗ್ರಫಿ’ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಅವರು ಶಿಬಿರಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಿ ಮಾತನಾಡಿದರು.
ಇಂದು ವಿವಿಧ ರೀತಿಯ ಪ್ರಿಂಟಿಂಗ್ ಪೇಪರ್‌ಗಳು ಬಂದಿವೆ. ಅದರ ಬಗ್ಗೆಯೂ ಮಾಹಿತಿ ಕಲೆ ಹಾಕಿ, ಆಲ್ಬಂ ಮಾಡುವಾಗಲೂ ಹತ್ತು ಸಾರಿ ಮತ್ತೆ ಮತ್ತೆ ನೋಡುವಂತೆ ಅದನ್ನು ತಯಾರಿಸಬೇಕು. ಜೀವನದಲ್ಲಿ ಉತ್ತಮ ಶಿಸ್ತನ್ನು ಕೂಡಾ ಅಳವಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.ಸಿರಿ ಗ್ರಾಮೋದ್ಯೋಗ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್. ಜನಾರ್ದನ್ ರುಡ್‌ಸೆಟ್ ಬೆಳೆದು ಬಂದ ವಿಧಾನದ ಅವಲೋಕನ ಮಾಡಿದರು. ಜಯರಾಮ ಮತ್ತು ಸಿದ್ದಾರ್ಥ ತರಬೇತಿಯ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು.
ರುಡ್‌ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ. ವಿಜಯಕುಮಾರ್ ಮತ್ತು ಅತಿಥಿ ಉಪನ್ಯಾಸಕ ಸೂರ್ಯಪ್ರಕಾಶ್ ಉಪಸ್ಥಿತರಿದ್ದರು. ರುಡ್‌ಸೆಟ್ ಸಂಸ್ಥೆಯ ನಿರ್ದೇಶಕ ಅಜೇಯ ಸ್ವಾಗತಿಸಿದರು. ಹಿರಿಯ ಉಪನ್ಯಾಸಕ ಕರುಣಾಕರ ಜೈನ್ ವಂದಿಸಿದರು. ಹಿರಿಯ ಉಪನ್ಯಾಸಕ ಅಬ್ರಹಾಂ ಜೇಮ್ಸ್ ಕಾರ್ಯಕ್ರಮ ನಿರ್ವಹಿಸಿದರು.