ಸಾವಿತ್ರಿಬಾಯಿ ಫುಲೆ ಸಾಮಾಜಿಕ ಅಸಮಾನತೆಯ ವಿರುದ್ಧ ಹೋರಾಡುವ ಮೂಲಕ ಕೆಳವರ್ಗದ ಶೋಷಿತರನ್ನು ಅತ್ಯಂತ ಅಮಾನವೀಯವಾಗಿ ನಡೆಸಿಕೊಳ್ಳುವ ಅಂದಿನ ಜಾತಿ ವ್ಯವಸ್ಥೆಯ ವಿರುದ್ಧ ಶಿಕ್ಷಣದ ಅಸ್ತ್ರ ಬಳಸಿ ಸಾಮಾಜಿಕ ಕ್ರಾಂತಿಯ ನಡೆಸಲು ಶ್ರಮಿಸಿದ್ದಾರೆ
ಕುಷ್ಟಗಿ: ಸಾವಿತ್ರಿಬಾಯಿ ಫುಲೆ ನಡೆಸಿದ ಶಿಕ್ಷಣ ಕ್ರಾಂತಿಯಿಂದ ಇಂದು ನಾವು ಸಂವಿಧಾನದಡಿಯಲ್ಲಿ ಸಮಾನತೆಯಿಂದ ಶಿಕ್ಷಣ ಪಡೆಯುವ ಅವಕಾಶ ಪಡೆಯಲಾಯಿತು ಎಂದು ಸಂಪನ್ಮೂಲ ವ್ಯಕ್ತಿ ಡಾ. ಎರ್ರಿಸ್ವಾಮಿ ಎಚ್ ಹೇಳಿದರು.
ತಾಲೂಕಿನ ಕಿಲ್ಲಾರಹಟ್ಟಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ತಾವರಗೇರಾ ಪಟ್ಟಣದ ಬುದ್ಧ ವಿಹಾರ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರದಿಂದ ನಡೆದ ದೇಶದ ಮೊದಲ ಮಹಿಳಾ ಶಿಕ್ಷಕಿ, ಮಹಿಳಾ ಶಿಕ್ಷಣದ ರೂವಾರಿ ಸಾವಿತ್ರಿಬಾಯಿ ಫುಲೆ ಜನ್ಮದಿನದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.ಸಾವಿತ್ರಿಬಾಯಿ ಫುಲೆ ಸಾಮಾಜಿಕ ಅಸಮಾನತೆಯ ವಿರುದ್ಧ ಹೋರಾಡುವ ಮೂಲಕ ಕೆಳವರ್ಗದ ಶೋಷಿತರನ್ನು ಅತ್ಯಂತ ಅಮಾನವೀಯವಾಗಿ ನಡೆಸಿಕೊಳ್ಳುವ ಅಂದಿನ ಜಾತಿ ವ್ಯವಸ್ಥೆಯ ವಿರುದ್ಧ ಶಿಕ್ಷಣದ ಅಸ್ತ್ರ ಬಳಸಿ ಸಾಮಾಜಿಕ ಕ್ರಾಂತಿಯ ನಡೆಸಲು ಶ್ರಮಿಸಿದ್ದಾರೆ ಎಂದು ತಿಳಿಸಿದರು.
ಮುಖ್ಯವಾಗಿ ಮಹಿಳೆಯರು, ಬಾಲಕಿಯರಿಗಾಗಿ ಶಾಲಾ,ಕಾಲೇಜುಗಳನ್ನು ತೆರೆಯುವ ಮೂಲಕ ಕೆಳವರ್ಗದ ಶೋಷಿತ ವರ್ಗಗಳಿಗೆ ಜ್ಞಾನದ ಅರಿವನ್ನು ಮೂಡಿಸುವ ನಿಟ್ಟಿನಲ್ಲಿ ಕೆಲಸ ಮಾಡಿದರು. ಇಂದಿನ ಸಾರ್ವತ್ರಿಕ ಶಿಕ್ಷಣ ಕಡೆಸಿ ಶೋಷಿತ ವರ್ಗಗಳಿಗೆ ಶಿಕ್ಷಣದ ಹಕ್ಕನ್ನು ಕಸಿಯುವ ನಿಟ್ಟಿನಲ್ಲಿ ಶಿಕ್ಷಣವನ್ನು ಖಾಸಗೀಕರಣಗೊಳಿಸುವ ಮೂಲಕ ದುಡಿಯುವ ವರ್ಗದ ಜನರಿಗೆ ಶಿಕ್ಷಣದಿಂದ ವಂಚಿತರನ್ನಾಗಿಸುವ ಕೆಲಸಗಳು ನಡೆಯುತ್ತಿವೆ.ಇದರ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದರು.ಇಂದಿನ ಹೆಣ್ಣು ಮಕ್ಕಳು ಉನ್ನತ ಶಿಕ್ಷಣಕ್ಕೆ ಹೋಗುವ ಮೂಲಕ ಸಾಮಾಜಿಕ,ಶೈಕ್ಷಣಿಕವಾಗಿ ವಿದ್ಯಾವಂತರಾಗಿ ಗೌರವಯುತ ಬದುಕು ಕಟ್ಟಿಕೊಳ್ಳುವ ಮೂಲಕ ಶಿಕ್ಷಣ ಪಡೆಯುವವರ ಸಂಖ್ಯೆ ಹೆಚ್ಚಾಗಬೇಕು ಆಗ ಮಾತ್ರ ಸಾಮಾಜಿಕ ಅಸಮಾನತೆಯ ಹೊಗಲಾಡಿಸಲು ಸಾಧ್ಯವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಕಿಲ್ಲಾರಹಟ್ಟಿ ಗ್ರಾಪಂ ಅಧ್ಯಕ್ಷ ಶರಣಗೌಡ ಪೋಲಿಸ್ ಪಾಟೀಲ್, ಎಸ್ಡಿಎಂಸಿ ಅಧ್ಯಕ್ಷ ವಿಜಯ ಚವ್ಹಾಣ, ಸರ್ಕಾರಿ ಪ್ರೌಢಶಾಲೆಯ ಪ್ರಭಾರಿ ಮುಖ್ಯಶಿಕ್ಷಕ ಅಮರಪ್ಪ, ಶಿಕ್ಷಕರಾದ ಲಿಂಗರಾಜ, ಚೆನ್ನಪ್ಪ, ತೇಜಶ್ವಿನಿ, ಶಿವಮ್ಮ ಹಾಗೂ ತರಬೇತಿ ಕೇಂದ್ರದ ಸಿಬ್ಬಂದಿ ಮಾರುತಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.