ಸಾರಾಂಶ
ದೈಹಿಕ ಶಿಕ್ಷಣ ಶಿಕ್ಷಕರನ್ನು ಸಹ ಮುಖ್ಯ ಶಿಕ್ಷಕರ ಮುಂಬಡ್ತಿಗೆ ಪರಿಗಣಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಕಾಲಮಿತಿಯಲ್ಲಿ ಈಡೇರಿಸದೇ ಇದ್ದಲ್ಲಿ ಶಿಕ್ಷಕರ ದಿನಾಚರಣೆ ಬಹಿಷ್ಕರಿಸಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗುವುದಾಗಿ ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಎಚ್ಚರಿಕೆ ನೀಡಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ದೈಹಿಕ ಶಿಕ್ಷಣ ಶಿಕ್ಷಕರನ್ನು ಸಹ ಮುಖ್ಯ ಶಿಕ್ಷಕರ ಮುಂಬಡ್ತಿಗೆ ಪರಿಗಣಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಕಾಲಮಿತಿಯಲ್ಲಿ ಈಡೇರಿಸದೇ ಇದ್ದಲ್ಲಿ ಶಿಕ್ಷಕರ ದಿನಾಚರಣೆ ಬಹಿಷ್ಕರಿಸಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗುವುದಾಗಿ ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಎಚ್ಚರಿಕೆ ನೀಡಿದೆ.ಗುರುವಾರ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಗೌರವ ಅಧ್ಯಕ್ಷರಾದ ಅರುಣ್ ಶಹಾಪುರ, ಕಳೆದ 17 ವರ್ಷಗಳ ಹಿಂದೆಯೇ ಸಹಶಿಕ್ಷಕರನ್ನಾಗಿ ಪರಿಗಣಿಸುವ ಆದೇಶವನ್ನು ಸರ್ಕಾರ ಮಾಡಿದೆ. ಆದರೆ, ಇದುವರೆಗೂ ಅದನ್ನು ಅನುಷ್ಠಾನಗೊಳಿಸದೇ ದೈಹಿಕ ಶಿಕ್ಷಣ ಶಿಕ್ಷಕರ ಮೇಲೆ ಮಲತಾಯಿ ಧೋರಣೆ ತೋರಿಸಲಾಗುತ್ತಿದೆ. ಕೂಡಲೇ ಶಿಕ್ಷಣ ಇಲಾಖೆ ಸರ್ಕಾರದ ಆದೇಶವನ್ನು ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿದರು.
ಸಂಘದ ರಾಜ್ಯಾಧ್ಯಕ್ಷರಾದ ಎಸ್.ಚೌಡಪ್ಪ ಮಾತನಾಡಿ, ಸಮಾನ ವೇತನ, ಸಮಾನ ವಿದ್ಯಾರ್ಹತೆ ಹಾಗೂ ಒಂದೇ ನೇಮಕಾತಿ ವಿಧಾನವಿದ್ದರೂ ಸಹ ಶಿಕ್ಷಕರು ಹಾಗೂ ದೈಹಿಕ ಶಿಕ್ಷಕರಲ್ಲಿ ತಾರತಮ್ಯ ಧೋರಣೆ ಮಾಡಲಾಗುತ್ತಿದೆ. ಇದರಿಂದ ಶಿಕ್ಷಕರಲ್ಲಿ ಅಸಮಾನತೆ ಉಂಟಾಗುತ್ತಿದೆ. ವೃತ್ತಿಯಲ್ಲಿ ಬಡ್ತಿಯಿಲ್ಲದೇ ಇರುವ ಪ್ರಾಥಮಿಕ ಶಾಲಾ ಶಿಕ್ಷಕರು (ಗ್ರೇಡ್ -2) ಇವರಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ದೈಹಿಕ ಶಿಕ್ಷಣ ಸಂಯೋಜಕರು, ದೈಹಿಕ ಶಿಕ್ಷಣ ಪರಿವೀಕ್ಷಕರ ಹುದ್ದೆ ಸೃಜಿಸಿ ಮುಂಬಡ್ತಿ ನೀಡಬೇಕೆಂದು ಒತ್ತಾಯಿಸಿದರು.ಕರ್ನಾಟಕ ಸರ್ಕಾರದ ದೆಹಲಿ ಪ್ರತಿನಿಧಿಯಾಗಿರುವ ಪ್ರಕಾಶ್ ಹುಕ್ಕೇರಿ ಅವರು ಮನವಿ ಸ್ವೀಕರಿಸಿ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಶೀಘ್ರದಲ್ಲಿ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಜೆ. ಚಂದ್ರಶೇಖರ್, ಖಜಾಂಚಿ ಡಿ.ವಿ ಬಾಲರಾಜ್, ಕಾರ್ಯಾಧ್ಯಕ್ಷ ಪಿ.ಡಿ ಕಾಗೋಡ್ ಪಾಲ್ಗೊಂಡಿದ್ದರು.