ಸಾರಾಂಶ
ಬೆಂಗಳೂರು ವಿವಿಯ ಜ್ಞಾನ ಭಾರತಿ ಕ್ಯಾಂಪಸ್ ತಿಂಗಳು ಕಳೆದರೂ ಪ್ಲಾಸ್ಟಿಕ್ ಮುಕ್ತವಾಗಿಲ್ಲ. ಕ್ಯಾಂಪಸ್ ಪ್ಲಾಸ್ಟಿಕ್ ಮುಕ್ತ ಮಾಡುವುದಾಗಿ ವಿವಿ ವಾಗ್ದಾನ ಮಾಡಿತ್ತು.
ಕನ್ನಡಪ್ರಭ ವಾರ್ತೆ, ಬೆಂಗಳೂರು
ಬೆಂಗಳೂರು ವಿಶ್ವವಿದ್ಯಾಲಯ ಜ್ಞಾನಭಾರತಿ ಕ್ಯಾಂಪಸ್ ಅನ್ನು ಪ್ಲಾಸ್ಟಿಕ್ ಮುಕ್ತಿಗೊಳಿಸುವುದಾಗಿ ಘೋಷಿಸಿ ತಿಂಗಳುಗಳು ಕಳೆದರೂ ಕ್ಯಾಂಪಸ್‌ನ ಹಲವೆಡೆ ರಾಶಿ ರಾಶಿ ಪ್ಲಾಸ್ಟಿಕ್ ತ್ಯಾಜ್ಯ ಕಂಡು ಬರುತ್ತಿದೆ.ವಿವಿಯ ಆಡಳಿತ ಕಚೇರಿ ಸಮೀಪ ನಿರ್ಮಾಣವಾಗುತ್ತಿರುವ ನಾಡಪ್ರಭು ಕೆಂಪೇಗೌಡ ಅಧ್ಯಯನ ಕೇಂದ್ರ ಹಾಗೂ ಗ್ರಂಥಾಲಯದ ಬಳಿ ಸೇರಿದಂತೆ ಕ್ಯಾಂಪಸ್‌ನಿಂದ ಮೈಸೂರು ರಸ್ತೆ ಹಾಗೂ ನಾಗರಬಾವಿಗೆ ಸಾಗುವ ರಸ್ತೆಯುದ್ದಕ್ಕೂ ಅಲ್ಲಲ್ಲಿ ಪ್ಲಾಸ್ಟಿಕ್ ತ್ಯಾಜ್ಯದ ರಾಶಿ ಕಂಡುಬರುತ್ತಿದೆ. ಅಲ್ಲಲ್ಲಿ ಬಿಯರ್ ಪಾಟಲಿಗಳೂ ಕಾಣಸಿಗುತ್ತವೆ. ಇದು ನಿತ್ಯ ಕ್ಯಾಂಪಸ್‌ನಲ್ಲಿ ವಾಯುವಿಹಾರಕ್ಕೆ ಬರುವ ಸಾರ್ವಜನಿಕರು, ವಿವಿಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಲ್ಲಿ ಕಿರಿಕಿರಿ ಉಂಟು ಮಾಡುತ್ತಿದೆ.
ಬೆಂಗಳೂರು ವಿವಿಯು ಏಕಬಳಕೆ ಪ್ಲಾಸ್ಟಿಕ್ ಬಾಟೆಲ್, ಲೋಟ, ತಟ್ಟೆ ಸೇರಿದಂತೆ ಪ್ಲಾಸ್ಟಿಕ್ ಉತ್ಪನ್ನಗಳನ್ನು ನಿಷೇಧಿಸಿದೆ. ವಿವಿಯ ಸಿಂಡಿಕೇಟ್, ಅಕಾಡೆಮಿಕ್ ಕೌನ್ಸಿಲ್ ಸಭೆ, ಆಡಳಿತ ಕಚೇರಿಗಳಲ್ಲಿ ಪ್ಲಾಸ್ಟಿಕ್ ಉತ್ಪನ್ನಗಳನ್ನು ಬಳಸುತ್ತಿಲ್ಲ. ಆದರೆ, ಕ್ಯಾಂಪಸ್‌ನಲ್ಲಿ ಮಾತ್ರ ಹೇಗೆ ಇಷ್ಟೊಂದು ಪ್ಲಾಸ್ಟಿಕ್ ತ್ಯಾಜ್ಯ ಹೇಗೆ ಬರುತ್ತಿದೆ ಎಂಬುದು ಗೊತ್ತಿಲ್ಲ ಎನ್ನುತ್ತಾರೆ ಅಧಿಕಾರಿಗಳು. ಈ ಮಧ್ಯೆ, ಕ್ಯಾಂಪಸ್ ಸುತ್ತಮುತ್ತಲ ಸಾರ್ವಜನಿಕರು ವಾಯುವಿಹಾರಕ್ಕೆ ಬರುವಾಗ, ಉದ್ಯೋಗಕ್ಕೆ ಹೋಗುವಾಗ ದ್ವಿಚಕ್ರ ವಾಹನದಲ್ಲಿ ಇಂತಹ ತ್ಯಾಜ್ಯ ತಂದು ಎಸೆದು ಹೋಗುತ್ತಿರಬಹುದು. ಇದನ್ನು ಹೇಗೆ ತಡೆಯುವುದು ಎಂಬ ಬಗ್ಗೆ ಚರ್ಚಿಸಿ ಕ್ರಮ ವಹಿಸಲಾಗುವುದು ಎಂದು ಹೇಳಿದ್ದಾರೆ.