ಪಟ್ಟಣ ಪ್ರದೇಶದಲ್ಲಿ ಅಗತ್ಯಕ್ಕೆ ತಕ್ಕಷ್ಟು ಪೌರಕಾರ್ಮಿಕ ಸಿಬ್ಬಂದಿ ಇಲ್ಲ. ಹೀಗಾಗಿ ಪಟ್ಟಣದಲ್ಲಿ ಹಲವೆಡೆ ಕಸದ ರಾಶಿ ಗೋಚರಿಸುತ್ತಿವೆ‌.

ಮಹೇಶ ಛಬ್ಬಿ

ಮುಳಗುಂದ: ಪೌರಕಾರ್ಮಿಕ ಸಿಬ್ಬಂದಿ ಕೊರತೆಯಿಂದಾಗಿ ಸ್ಥಳೀಯ ಪಪಂ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ ಕಾಣುತ್ತಿದ್ದು, ಅನೈರ್ಮಲ್ಯ ತಾಂಡವವಾಡುತ್ತಿದ್ದು, ಚರಂಡಿಗಳೂ ಹೂಳು ತುಂಬಿದ್ದು, ಸ್ಥಳೀಯರು ಹಿಡಿಶಾಪ ಹಾಕುತ್ತಿದ್ದಾರೆ.

ಸರ್ಕಾರ ಕಸ ವಿಂಗಡಣೆ, ವಿಲೇವಾರಿ, ಸ್ವಚ್ಛತೆ ಕುರಿತು ಸಾಕಷ್ಟು ಜಾಗೃತಿ ಮೂಡಿಸುತ್ತಿದೆ‌. ಆದರೆ ಅದಕ್ಕೆ ಅನುಗುಣವಾಗಿ ಸಿಬ್ಬಂದಿ ನೀಡದೆ ಇರುವುದರಿಂದ ಯೋಜನೆಗಳು ಹಾದಿ ತಪ್ಪುತ್ತಿವೆ. ಪಟ್ಟಣ ಪ್ರದೇಶದಲ್ಲಿ ಅಗತ್ಯಕ್ಕೆ ತಕ್ಕಷ್ಟು ಪೌರಕಾರ್ಮಿಕ ಸಿಬ್ಬಂದಿ ಇಲ್ಲ. ಹೀಗಾಗಿ ಪಟ್ಟಣದಲ್ಲಿ ಹಲವೆಡೆ ಕಸದ ರಾಶಿ ಗೋಚರಿಸುತ್ತಿವೆ‌.

ಸ್ಥಳೀಯ ಪಪಂ ವ್ಯಾಪ್ತಿ ಬಸಾಪುರ, ಶೀತಾಲಹರಿ ಗ್ರಾಮಗಳು ಸೇರಿದಂತೆ ಒಟ್ಟು 19 ವಾರ್ಡ್‌ಗಳಿವೆ. ಅಂದಾಜು 25 ಸಾವಿರ ಜನಸಂಖ್ಯೆ ಹೊಂದಿದೆ. ಸುಮಾರು 5109 ಮನೆಗಳಿವೆ‌. 25 ಸಾವಿರ ಜನಸಂಖ್ಯೆ ಹೊಂದಿದ ಪಟ್ಟಣದ ಸ್ವಚ್ಛತೆಗೆ ಬೆರಳೆಣಿಕೆಯಷ್ಟು ಪೌರಕಾರ್ಮಿಕ ಸಿಬ್ಬಂದಿಯಿಂದ ಕಸ ವಿಲೇವಾರಿ ಮಾಡುವುದು ಕಷ್ಟಸಾಧ್ಯ. ಜನಪ್ರತಿನಿಧಿಗಳ ನಿರಾಸಕ್ತಿ, ಅಧಿಕಾರಿ, ಸಿಬ್ಬಂದಿ ನಿರ್ಲಕ್ಷ್ಯದಿಂದ ಪಟ್ಟಣದಲ್ಲಿ‌ ಸ್ವಚ್ಛತೆ ಮರೀಚಿಕೆಯಾಗಿದೆ.

ಪಪಂನಲ್ಲಿ ಕಸ ವಿಲೇವಾರಿ ಮಾಡಲು 18 ಕಾಯಂ ಪೌರಕಾರ್ಮಿಕರು ಇದ್ದಾರೆ. ಗುತ್ತಿಗೆ ಆಧಾರದಲ್ಲಿ 5 ಜನ ತಳ್ಳುವ ಗಾಡಿಯವರು, 5 ಜನ ಡ್ರೈವರ್ಸ್‌, ಕಸ ವಿಲೇವಾರಿಗೆ 2 ಟಾಟಾ ಎಸಿ ಅಟೋ ಟಿಪ್ಪರ್‌, 2 ಟ್ರ್ಯಾಕ್ಟರ್‌ಗಳಿವೆ. ಇರುವ 18 ಕಾಯಂ ಪೌರಕಾರ್ಮಿಕರಲ್ಲಿಯೇ 6 ಜನ ವಾಲ್‌ಮನ್‌(ವಾಟರ್‌ ಸಪ್ಲೈ), ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಇಬ್ಬರು ವಾಚ್‌ಮನ್‌ ಡ್ಯೂಟಿ, ಪಪಂ ಕಾರ್ಯಾಲಯದಲ್ಲಿ ಪ್ಯೂನ್‌ ಕೆಲಸಕ್ಕೆ ಒಬ್ಬ ಪೌರಕಾರ್ಮಿಕ, ಹೀಗೆ ಪಪಂ ಕೆಲಸ, ಕಾರ್ಯಕ್ಕೆ ಕಾಯಂ ಪೌರಕಾರ್ಮಿಕರು ಹಂಚಿ ಹೋಗಿದ್ದು, ಉಳಿದ ಬೆರಳೆಣಿಕೆಯಷ್ಟು ಸಿಬ್ಬಂದಿ ಮಾತ್ರ ಪಪಂ ವ್ಯಾಪ್ತಿಯ 19 ವಾರ್ಡ್‌ಗಳ ಕಸ ವಿಲೇವಾರಿಯನ್ನು ಮಾಡುವುದು ಕಷ್ಟಕರ. ಜನಸಂಖ್ಯೆಗೆ ತಕ್ಕಂತೆ ಪೌರಕಾರ್ಮಿಕರನ್ನು ಸರ್ಕಾರ ನೇಮಕ ಮಾಡಿಕೊಡಬೇಕು ಎಂಬುದು ಸಿಬ್ಬಂದಿಯ ಆಗ್ರಹವಾಗಿದೆ.

700 ಜನರಿಗೆ ಒಬ್ಬರು: ಸ್ವಚ್ಛತಾ ನಿರ್ವಹಣೆ ಮಾರ್ಗಸೂಚಿಗಳ ಪ್ರಕಾರ 700 ಜನರಿಗೆ ಒಬ್ಬ ಪೌರಕಾರ್ಮಿಕ ಇರಬೇಕು. ಆದರೆ ಮುಳಗುಂದ ಪಟ್ಟಣದ ಅಂದಾಜು 25 ಸಾವಿರ ಜನಸಂಖ್ಯೆಗೆ ಕೇವಲ ಬೆರಳೆಣಿಕೆಯಷ್ಟು ಪೌರಕಾರ್ಮಿಕರಿದ್ದಾರೆ. ಇದ್ದ ಪೌರಕಾರ್ಮಿಕರಲ್ಲಿಯೇ ಕೆಲವರು ಕುಡಿಯುವ ನೀರು ಸರಬರಾಜು, ವಿದ್ಯುತ್‌ ದೀಪಗಳ ನಿರ್ವಹಣೆ, ಸಮುದಾಯ ಶೌಚಾಲಯಗಳ ನಿರ್ವಹಣೆ ಸೇರಿದಂತೆ ಹಲವು ಕೆಲಸಗಳನ್ನು ಮಾಡಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಕಸ ವಿಲೇವಾರಿಗೆ ಹಿನ್ನಡೆಯಾಗಿ ಇಡೀ ವ್ಯವಸ್ಥೆಯೇ ಹಳಿ ತಪ್ಪಿದೆ.

ಎಲ್ಲೆಂದರಲ್ಲಿ ಕಸದ ರಾಶಿ: ಪಟ್ಟಣದ 19 ವಾರ್ಡಗಳ ಖುಲ್ಲಾ ಜಾಗ ಸೇರಿದಂತೆ ಪ್ರಮುಖ ರಸ್ತೆ, ಬೀದಿಗಳ ಅಕ್ಕಪಕ್ಕದಲ್ಲಿ ಸಾಲು, ಸಾಲು, ಕಸದ ರಾಶಿಗಳು ಕಾಣುತ್ತಿವೆ. ಜತೆಗೆ ಪಟ್ಟದಲ್ಲಿ ಹೊಸದಾಗಿ ನಿರ್ಮಾಣವಾದ ಬಡಾವಣೆಗಳಿಗೆ ಕಸದ ವಿಲೇವಾರಿ ವಾಹನಗಳು ತೆರಳುವುದಿಲ್ಲ. ಇದರಿಂದ ಅಲ್ಲಿ ಕಸವನ್ನು ರಸ್ತೆಯ ಅಕ್ಕಪಕ್ಕದ ಖುಲ್ಲಾ ಜಾಗಗಳಲ್ಲಿ ಹಾಕುವಂಥ ಸ್ಥಿತಿ ನಿರ್ಮಾಣವಾಗಿದೆ. ವರ್ಷಾನುಗಟ್ಟಲೇ ಕಸ ಅಲ್ಲಿಯೇ ಬಿದ್ದರೂ ವಿಲೇವಾರಿ ಮಾಡಲು ಯಾರೂ ಬರುವುದಿಲ್ಲ. ಇನ್ನು ವಿಶೇಷವಾಗಿ ಪಪಂ ಕಾರ್ಯಾಲಯದ ಕೂಗಳತೆಯಲ್ಲಿ ಬಸ್‌ ನಿಲ್ದಾಣ ಪಕ್ಕದಲ್ಲಿ ನೂತನವಾಗಿ ನಿರ್ಮಾಣವಾದ ಪೌರಕಾರ್ಮಿಕರ ವಿಶ್ರಾಂತಿ ಗೃಹದ ಮುಂದೆಯೇ ಬೃಹತ್‌ ಕಸದ ರಾಶಿಯೇ ಬಿದ್ದಿದೆ. ಅದನ್ನು ತೆರವುಗೊಳಿಸುವ ಗೋಜಿಗೆ ಹೋಗಿಲ್ಲ.

ಹಬ್ಬ ಹರಿದಿನಗಳಲ್ಲಿ ಮಾತ್ರ ಸ್ವಚ್ಛತೆ: ಪಟ್ಟಣದ ಚರಂಡಿಗಳ ನಿರ್ವಹಣೆಯಲ್ಲಿ ಪಪಂ ವಿಫಲವಾಗಿದ್ದು, ಮುಖ್ಯ ರಸ್ತೆಗಳಲ್ಲಿನ ಚರಂಡಿಗಳನ್ನು ಮಾತ್ರ ಕಾಲ, ಕಾಲಕ್ಕೆ ಸ್ವಚ್ಛಗೊಳಿಸುತ್ತಾರೆ. ಇನ್ನುಳಿದ ಪಟ್ಟಣದ 19 ವಾರ್ಡಗಳಲ್ಲಿನ ಓಣಿಗಳಲ್ಲಿ ಚರಂಡಿಗಳನ್ನು ಯುಗಾದಿ, ಜಾತ್ರೆಗಳು ಹೀಗೆ ಹಬ್ಬ ಹರಿದಿನಗಳಲ್ಲಿ ಮಾತ್ರ ಸ್ವಚ್ಛಗೊಳಿಸುತ್ತಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ದುರ್ನಾತ: ಪಟ್ಟಣದ ಪ್ರಮುಖ ರಸ್ತೆಗಳ ಚರಂಡಿಗಳನ್ನು ಮಾತ್ರ ಕಾಲ, ಕಾಲಕ್ಕೆ ಸ್ವಚ್ಛತೆ ಮಾಡುತ್ತಾರೆ. 16ನೇ ವಾರ್ಡನಲ್ಲಿ ಚರಂಡಿಗಳ ಸ್ವಚ್ಛತೆ ಇಲ್ಲದೆ ಗಬ್ಬೆದ್ದು ನಾರುತ್ತಿವೆ. ಚರಂಡಿ ನಿರ್ಮಾಣವಾದಾಗಿನಿಂದ ಈವರೆಗೂ ಅವು ಸ್ವಚ್ಛತೆ ಕಾಣದೇ ದುರ್ನಾತ ಬೀರುತ್ತಿದ್ದು, ಮನೆಗಳಲ್ಲಿ ಕುಳಿತುಕೊಳ್ಳಲು ಸಾಧ್ಯವಾಗುತ್ತಿಲ್ಲ. ರೋಗರುಜಿನಗಳು ಹರಡುವ ಭೀತಿ ಕಾಡುತ್ತಿದೆ ಎಂದು ಸ್ಥಳೀಯ ನಿವಾಸಿ ಮೈಲಾರಪ್ಪ ಭಂಗಿ ತಿಳಿಸಿದರು.

ಸಿಬ್ಬಂದಿ ಕೊರತೆ: ಪೌರಕಾರ್ಮಿಕ ಸಿಬ್ಬಂದಿ ಕೊರತೆ ಇದೆ. ಕಸ ವಿಲೇವಾರಿಗೆ ವಾಹನಗಳಿವೆ. ಸರ್ಕಾರ ನೇರ ನೇಮಕಾತಿಗೆ ಅಧಿಸೂಚನೆ ಹೊರಡಿಸಿದಾಗ, ಪೌರ ಸಿಬ್ಬಂದಿಗಳನ್ನು ತೆಗೆದುಕೊಳ್ಳುವುದಕ್ಕೆ ಅವಕಾಶವಿರುತ್ತದೆ ಎಂದು ಪಪಂ ಮುಖ್ಯಾಧಿಕಾರಿ ಮಂಜುನಾಥ ಗುಳೇದ ತಿಳಿಸಿದರು.