ರಸ್ತೆ ಬದಿಯಲ್ಲಿ ಕಸದ ರಾಶಿ: ನಾಗರಿಕರ ಆಕ್ರೋಶ

| Published : Apr 29 2024, 01:35 AM IST

ಸಾರಾಂಶ

ಆಗಾಗ ಶಾಲಾ ಕಾಲೇಜು ಮಕ್ಕಳು ಆ ಕಸವನ್ನೆಲ್ಲ ಸಂಗ್ರಹಿಸಿ ಸ್ವಚ್ಛತಾ ಆಂದೋಲನ ಮಾಡುತ್ತಾರೆ. ಆದರೂ ನಾಗರಿಕರ ಈ ಅನಾಗಿಕ ವರ್ತನೆಗೆ ಕಡಿವಾಣ ಬಿದ್ದಿಲ್ಲ.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಆ ರಸ್ತೆಯಲ್ಲಿ ಒಂದೈವತ್ತು ಮನೆಗಳಿವೆ. ಪುರಸಭೆಯ ಕಸ ಸಂಗ್ರಹದ ವಾಹನವೂ ಎರಡು ದಿನಗಳಿಗೊಮ್ಮೆ ಬಂದು ಮನೆಮನೆಯಿಂದ ಕಸ ಸಂಗ್ರಹಿಸುತ್ತದೆ. ಆದರೆ ಸ್ಥಳೀಯರೋ, ಹೊರಗಿನವರೋ ರಸ್ತೆಯುದ್ದಕ್ಕೂ ಇಕ್ಕೆಲಗಳಲ್ಲಿ ಮಾತ್ರವಲ್ಲ ಎಲ್ಲೆಂದರಲ್ಲಿ ತ್ಯಾಜ್ಯಗಳನ್ನು ಬಿಸಾಡಿ ಹೋಗುತ್ತಿದ್ದು, ಇಡೀ ಪರಿಸರದ ಅಂದಗೆಡಿಸಿದ್ದಾರೆ.

ಇದು ಮೂಡುಬಿದಿರೆ ಕೋಟೆ ಬಾಗಿಲು ಮಸೀದಿ ಪರಿಸರದ ರಸ್ತೆಯ ದುಃಸ್ಥಿತಿ. ತ್ಯಾಜ್ಯಗಳ ರಾಶಿಯಿಂದ ಆಕ್ರೋಶಿತರಾದ ಸ್ಥಳೀಯ ನಿವಾಸಿ ಇರ್ಫಾನ್ ಬೆದ್ರ ಅವರು ಯೂಟ್ಯೂಬ್ ಮೂಲಕ ಪರಿಸ್ಥಿತಿಯನ್ನು ಚಿತ್ರೀಕರಿಸಿ ವಿವರಿಸುವ ಜತೆಗೆ ‘ಹೀಗೆ ರಸ್ತೆಗೆ ಕಸ ಬಿಸಾಡೋರು ತಮ್ಮ ಹೆಂಡ್ತಿ, ಮಕ್ಳನ್ನೂ ಹೀಗೇ ಬಿಸಾಡಿ ಹೋಗಿ’! ಎಂದು ಕಿಡಿಕಾರಿದ್ದಾರೆ.

ಸ್ಥಳೀಯ ಪುರಸಭಾ ಸದಸ್ಯರ ಮೂಲಕ ಸ್ಥಳೀಯಾಡಳಿತದ ಗಮನ ಸೆಳೆಯಲಾಗಿದೆ. ಆದರೆ ಪರಿಣಾಮ ಶೂನ್ಯ ಎನ್ನುವ ಇರ್ಫಾನ್ ಜನತೆಗೆ ಸ್ಪಲ್ಪವಾದರೂ ಜವಾಬ್ದಾರಿ ಬೇಡವೇ ಎಂದು ಪ್ರಶ್ನಿಸಿದ್ದಾರೆ. ಮೂಡುಬಿದಿರೆಯಲ್ಲಿ ತ್ಯಾಜ್ಯ ಸಂಗ್ರಹಿಸುವ ವಾಹನ ವ್ಯವಸ್ಥೆ ಇದೆ. ಆದರೆ ಅವರನ್ನು ಕಾದು ಕಸ ಕೊಡುವಷ್ಟು ತಾಳ್ಮೆ ಇಲ್ಲದ ಸ್ಥಳೀಯರೋ, ಇಲ್ಲಾ ಹೊರಗಿನವರೋ ಮನಸೋಯಿಚ್ಛೆ ರಸ್ತೆ, ಚರಂಡಿ ಬದಿ ಎಸೆದು ಹೋಗುತ್ತಿದ್ದಾರೆ. ಬೀದಿ ನಾಯಿಗಳಂತೂ ಇವುಗಳನ್ನೆಲ್ಲ ಚೆಂಡಾಡಿ ರಸ್ತೆಯಲ್ಲೆಲ್ಲ ಅಸಹ್ಯವನ್ನು ಹರಡಿ ಗಬ್ಬೆದ್ದು ನಾರುವ ಪರಿಸ್ಥಿತಿ ತಂದಿಡುತ್ತಿವೆ.

ಆಗಾಗ ಶಾಲಾ ಕಾಲೇಜು ಮಕ್ಕಳು ಆ ಕಸವನ್ನೆಲ್ಲ ಸಂಗ್ರಹಿಸಿ ಸ್ವಚ್ಛತಾ ಆಂದೋಲನ ಮಾಡುತ್ತಾರೆ. ಆದರೂ ನಾಗರಿಕರ ಈ ಅನಾಗಿಕ ವರ್ತನೆಗೆ ಕಡಿವಾಣ ಬಿದ್ದಿಲ್ಲ.