ಸಾರಾಂಶ
ಕೊಳ್ಳೇಗಾಲ: ಶಿವರಾತ್ರಿ ಹಬ್ಬದ ಹಿನ್ನಲೆ ಮಹದೇಶ್ವರ ಬೆಟ್ಟಕ್ಕೆ ಮೈಸೂರಿನ ರಮ್ಮನಹಳ್ಳಿ ಗ್ರಾಮದಿಂದ ಪಾದಯಾತ್ರೆ ಮೂಲಕ ತೆರಳುತ್ತಿದ್ದವರಿಗೆ ಬೈಕ್ ಡಿಕ್ಕಿಯಾದ ಪರಿಣಾಮ, ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿರುವ ಘಟನೆ ತಾಲೂಕಿನ ಮಧುವನಹಳ್ಳಿ ಗ್ರಾಮದ ಸಮೀಪದಲ್ಲಿ ನಡೆದಿದೆ. ಮೈಸೂರಿನ ರಮ್ಮನಹಳ್ಳಿ ಗ್ರಾಮದ ಪಾದಚಾರಿ ಸ್ವಾಮಿ(37) ಮೃತ ದುರ್ದೈವಿ. ಗಾಯಗೊಂಡಿದ್ದ ರಮ್ಮನಹಳ್ಳಿ ಚಿಕ್ಕಮಾದು, ಮರಿ ಗೋಪಾಲಿ ಹಾಗೂ ಟಾಟಾ ಬಿರ್ಲಾ, ಪ್ರಜ್ವಲ್ ರನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮ.ಬೆಟ್ಟಕ್ಕೆ ತೆರಳಲು ಹರಕೆ ಹೊತ್ತು ಕಲ್ಲೂರು, ಮುಳ್ಳೂರು ಮಾರ್ಗವಾಗಿ ಮಧುವನಹಳ್ಳಿ ಗ್ರಾಮದ ರಾಷ್ಟ್ರೀಯ ಹೆದ್ದಾರಿಯ ಬಳಿ ತೆರಳುತ್ತಿದ್ದಾಗ, ಪಾದಚಾರಿ ಗುಂಪಿಗೆ ಬೆಂಗಳೂರಿನಿಂದ ಮಾರ್ಟಳ್ಳಿಗೆ ಹೋಗುತ್ತಿದ್ದ ಬೈಕ್ ಸವಾರರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಪಾದಚಾರಿಯೋರ್ವ ಸಾವನ್ನಪ್ಪಿದ್ದು, ಇಬ್ಬರು ಪಾದಚಾರಿಗಳು ಹಾಗೂ ಬೈಕ್ ಸವಾರರಿಬ್ಬರು ಗಾಯಗೊಂಡಿದ್ದರು. ವಿಚಾರ ತಿಳಿದ ಡಿವೈಎಸ್ಪಿ ಧರ್ಮೇಂದ್ರ, ಸರ್ಕಲ್ ಇನ್ಸಪೆಕ್ಟರ್ ಶಿವಮಾದಯ್ಯ, ಎಸ್ಐ ಸುಪ್ರೀತ್ ಹಾಗೂ ಸಿಬ್ಬಂದಿಗಳು ತೆರಳಿ ಸ್ಥಳ ಪರಿಶೀಲಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಕರೆ ತಂದರು. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.