ಸಾರಾಂಶ
ಕನ್ನಡಪ್ರಭ ವಾರ್ತೆ ಪುತ್ತೂರು
‘ಹುಲಿವೇಷ ಕುಣಿತ’ ತುಳುನಾಡಿನ ಧಾರ್ಮಿಕ ಹಿನ್ನೆಲೆಯ ಜನಪದ ಕಲೆಯಾಗಿದ್ದು, ಈ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪಿಲಿಗೊಬ್ಬು ಹಾಗೂ ಪುತ್ತೂರು ಫುಡ್ ಫೆಸ್ಟ್ ಅನ್ನು ಅ.೫ ಮತ್ತು ೬ರಂದು ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಏರ್ಪಡಿಸಲಾಗಿದೆ ಎಂದು ಪುತ್ತೂರು ವಿಜಯ ಸಾಮ್ರಾಟ್ ಸಂಘಟನೆಯ ಗೌರವ ಅಧ್ಯಕ್ಷ ಸಹಜ್ ರೈ ಬಳಜ್ಜ ತಿಳಿಸಿದ್ದಾರೆ.ಅವರು ಗುರುವಾರ ಪುತ್ತೂರು ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಪಿಲಿಗೊಬ್ಬು ಕಾರ್ಯಕ್ರಮವನ್ನು ಅ.೬ರಂದು ಬೆಳಗ್ಗೆ ಶಾಸಕ ಆಶೋಕ್ ಕುಮಾರ್ ರೈ ಉದ್ಘಾಟಿಸಲಿದ್ದಾರೆ. ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ ಅವರು ಪಿಲಿಗೊಬ್ಬು ವೇದಿಕೆಗೆ ಚಾಲನೆ ನೀಡಲಿದ್ದಾರೆ. ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಅಧ್ಯಕ್ಷತೆ ವಹಿಸಲಿದ್ದಾರೆ. ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ, ಡಿವೈಎಸ್‌ಪಿ ಅರುಣ್ ನಾಗೇಗೌಡ, ಮಾಜಿ ಶಾಸಕ ಸಂಜೀವ ಮಠಂದೂರು, ಹಿರಿಯ ವೈದ್ಯ ಡಾ. ಪ್ರಸಾದ್ ಭಂಡಾರಿ ಸಹಿತ ಹಲವಾರು ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಜೆ ನಡೆಯಲಿರುವ ಸಭಾಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ಭಾರಿ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್. ಡಿ. ಕುಮಾರಸ್ವಾಮಿ, ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ, ರಾಜ್ಯ ಸಹಕಾರ ಮಹಾಮಂಡಲದ ಅಧ್ಯಕ್ಷ ಡಾ.ಎಂ. ಎನ್. ರಾಜೇಂದ್ರ ಕುಮಾರ್, ಮಾನವ ಹಕ್ಕು ಆಯೋಗದ ಅಧ್ಯಕ್ಷ ಡಾ.ಟಿ. ಶ್ಯಾಮ್ ಭಟ್ ಮತ್ತಿತರು ಗಣ್ಯರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಸ್ಯಾಂಡಲ್‌ವುಡ್ ನಾಯಕ ನಟ ಶ್ರೀಮುರಳಿ, ಶಿವಧ್ವಜ್, ರೂಪೇಶ್ ಶೆಟ್ಟಿ, ಅರವಿಂದ್ ಕೆ.ಪಿ., ಮಿಸ್ ಕರ್ನಾಟಕ ಕು.ವಿಜೇತ ಪೂಜಾರಿ, ಸರಿಗಮಪ ಖ್ಯಾತಿಯ ಗಾಯಕಿ ಸಮನ್ವಿ ರೈ ಭಾಗವಹಿಸಲಿದ್ದಾರೆ ಎಂದು ಹೇಳಿದರು.೫ರಂದು ಫುಡ್‌ಪೆಸ್ಟ್ ಉದ್ಘಾಟನೆ: ಅ.೫ ಸಂಜೆ ಫುಡ್ ಫೆಸ್ಟ್ ಕಾರ್ಯಕ್ರಮವನ್ನು ಉದ್ಯಮಿ ಯು.ಆರ್. ಪ್ರಾಪರ್ಟಿಯ ಉಜ್ವಲ್ ಪ್ರಭು ಉದ್ಘಾಟಿಸಲಿದ್ದಾರೆ. ಪಾಪ್ಯುಲರ್ ನ್ಯೂಟ್ರಿಷಿಯಸ್‌ನ ನರೇಂದ್ರ ಕಾಮತ್ ಅತಿಥಿಯಾಗಿ ಉಪಸ್ಥಿತರಿರುತ್ತಾರೆ. ಅ.೫ರಂದು ಸಂಜೆ ೩ ಗಂಟೆಯಿಂದ ರಾತ್ರಿ ೧೧ ಗಂಟೆಯ ತನಕ ಹಾಗೂ ಅ.೬ರಂದು ಬೆಳಗ್ಗೆ ೧೦ ಗಂಟೆಯಿಂದ ರಾತ್ರಿ ೧೧ ಗಂಟೆಯ ತನಕ ಫುಡ್ ಫೆಸ್ಟ್ ನಡೆಯಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವಿಜಯ ಸಾಮ್ರಾಟ್ ಸಂಘಟನೆಯ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್, ಸಂಚಾಲಕ ನಾಗರಾಜ ಭಟ್, ಕಾರ್ಯಾಧ್ಯಕ್ಷ ಸುಜಿತ್ ರೈ ಪಾಲ್ತಾಡ್ ಇದ್ದರು.