ವಿಶ್ವ ಬಾಹ್ಯಾಕಾಶ ಸಪ್ತಾಹದ ಅಂಗವಾಗಿ ಪಿಲಿಕುಳ ನಿಸರ್ಗಧಾಮದಲ್ಲಿ ಬೆಂಗಳೂರಿನ ಯು.ಆರ್. ರಾವ್ ಉಪಗ್ರಹ ಕೇಂದ್ರ ಹಾಗೂ ಇಸ್ರೋ ಸಹಯೋಗದಲ್ಲಿ ವಿಶ್ವ ಬಾಹ್ಯಾಕಾಶ ಸಪ್ತಾಹ ಉದ್ಘಾಟನಾ ಸಮಾರಂಭ
ಮಂಗಳೂರು: ವಿದ್ಯಾರ್ಥಿಗಳಲ್ಲಿ ಪ್ರಶ್ನಿಸುವ, ಪರಿಶೀಲಿಸುವ ಹಾಗೂ ಸಾಕ್ಷ್ಯಾಧಾರಿತವಾಗಿ ಚಿಂತಿಸುವ ಮನೋಭಾವ ಬೆಳೆಸಬೇಕು. ತಂತ್ರಜ್ಞಾನ ಮಿತ ಬಳಕೆ ಮಾಡಿ ಪುಸ್ತಕದಲ್ಲಿರುವ ವಿದ್ಯೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಯು.ಆರ್. ರಾವ್ ಉಪಗ್ರಹ ಕೇಂದ್ರದ ಉಪನಿರ್ದೇಶಕ ಡಾ. ಸಿ.ಎಸ್. ಮಧುಸೂದನ್ ಹೇಳಿದರು.
ವಿಶ್ವ ಬಾಹ್ಯಾಕಾಶ ಸಪ್ತಾಹದ ಅಂಗವಾಗಿ ಪಿಲಿಕುಳ ನಿಸರ್ಗಧಾಮದಲ್ಲಿ ಬೆಂಗಳೂರಿನ ಯು.ಆರ್. ರಾವ್ ಉಪಗ್ರಹ ಕೇಂದ್ರ ಹಾಗೂ ಇಸ್ರೋ ಸಹಯೋಗದಲ್ಲಿ ವಿಶ್ವ ಬಾಹ್ಯಾಕಾಶ ಸಪ್ತಾಹ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.ಎನ್‌ಐಟಿಕೆ ಸುರತ್ಕಲ್‍ನ ನಿವೃತ್ತ ಪ್ರಾಧ್ಯಾಪಕ ಪ್ರೊ. ಜಿ.ಶ್ರೀನಿಕೇತನ್ ಮಾತನಾಡಿ, ರಾಕೆಟ್ ತಂತ್ರಜ್ಞಾನದಲ್ಲಿನ ನಿರಂತರ ಸಂಶೋಧನೆ ಮತ್ತು ನವೀನ ಆವಿಷ್ಕಾರಗಳು ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಸಾಧ್ಯತೆಗಳಿಗೆ ದಾರಿ ಮಾಡಿಕೊಟ್ಟಿವೆ ಎಂದರು. ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ ಆಯುಕ್ತ ಡಾ. ಅರುಣ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಕಸಿತ ಭಾರತದ ನಿರ್ಮಾಣಕ್ಕಾಗಿ ನವೀನ ಆಲೋಚನೆಗಳು, ತಂತ್ರಜ್ಞಾನ ಮತ್ತು ಪರಸ್ಪರ ಸಹಯೋಗಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂದರು.
2ಡಿ ಪ್ರದರ್ಶನ: ನಂತರ ಸ್ವಾಮಿ ವಿವೇಕಾನಂದ ತಾರಾಲಯದ ಪಕ್ಕದ ಗ್ಯಾಲರಿಯಲ್ಲಿ ಇಸ್ರೋ ವತಿಯಿಂದ ಬಾಹ್ಯಾಕಾಶಕ್ಕೆ ಸಂಬಂಧಿಸಿದ ಮಾದರಿಗಳನ್ನು ವಿದ್ಯಾರ್ಥಿಗಳು ವೀಕ್ಷಿಸಿದರು. ವಿಶೇಷವಾಗಿ ತಾರಾಲಯದಲ್ಲಿ ವಿದ್ಯಾರ್ಥಿಗಳಿಗೆ ದಿ ಮೂನ್ ಎಂಬ 2ಡಿ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಉಪಗ್ರಹ ಮಾದರಿಗಳ ತಯಾರಿಕೆಯ ಸ್ಪರ್ಧೆ ಆಯೋಜಿಸಲಾಗಿತ್ತು.ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಸಲಾಯಿತು. ಸುಮಾರು 750 ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಭಾಗವಹಿಸಿದರು.
ವೀರೇಂದ್ರ ಆರ್. ಕವಿ ಶೆಟ್ಟಿ ಇದ್ದರು. ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ.ಅಶೋಕ್ ಕೆ.ಆರ್. ಸ್ವಾಗತಿಸಿದರು. ವೈಜ್ಞಾನಿಕಾಧಿಕಾರಿ ವಿಘ್ನೇಶ್ ಭಟ್ ವಂದಿಸಿದರು. ಶೈಕ್ಷಣಿಕ ಸಹಾಯಕಿ ಚಂಚಲಾಕ್ಷಿ ನಿರೂಪಿಸಿದರು.