ಸಾರಾಂಶ
ಕನ್ನಡಪ್ರಭ ವಾರ್ತೆ ಕೊಪ್ಪ
ದೇವರಾಜ್ ಅರಸು ಪರಿಶಿಷ್ಟ ಜಾತಿ, ಅಲ್ಪಸಂಖ್ಯಾತರು ಸೇರಿದಂತೆ ಹಿಂದುಳಿದ ವರ್ಗಗಳ ಸಮಾನತೆಯ ಹರಿಕಾರರಾಗಿದ್ದರು ಎಂದು ತಹಸೀಲ್ದಾರ್ ಲಿಖಿತ ಮೋಹನ್ ಹೇಳಿದರು.ಬಾಳಗಡಿಯ ಬಿಸಿಎಂ ಇಲಾಖೆಯ ದೇವರಾಜು ಅರಸು ಸಮುದಾಯ ಭವನದಲ್ಲಿ ಬುಧವಾರ ನಡೆದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ್ ಅರಸ್ ೧೧೦ನೇ ಜನ್ಮದಿನ ಆಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಭೂಸುಧಾರಣಾ ಕಾಯ್ದೆ ಜಾರಿ, ಹಾವನೂರು ವರದಿ ಜಾರಿ, ವೃದ್ಧಾಪ್ಯ ವೇತನ, ಕೃಷಿ ಬ್ಯಾಂಕ್‌ಗಳ ಸ್ಥಾಪನೆ, ವಿಧವಾ ವೇತನ, ಉಚಿತ ಭಾಗ್ಯ ಜ್ಯೋತಿ ಯೋಜನೆ, ಮಲಹೊರುವ ಪದ್ಧತಿ ರದ್ದು, ಜೀತಪದ್ಧತಿ ವಿಮುಕ್ತಿ, ಅಂಗವಿಕಲರ ವೇತನ, ವಲಸೆ ಕಾರ್ಮಿಕರಿಗೆ ಆಶ್ರಯ, ಕೃಷಿಸಾಲರದ್ದು, ಕೃಷಿ ಕಾರ್ಮಿಕರಿಗೆ ಕನಿಷ್ಠ ವೇತನ, ಕರ್ನಾಟಕ ರಾಜ್ಯದ ನಾಮಕರಣ, ಕರ್ನಾಟಕ ವಿಶ್ವವಿದ್ಯಾನಿಲಯ ೧೯೭೬ರ ಕಾಯ್ದೆ ಅನುಷ್ಠಾನ, ವಿದ್ಯಾರ್ಥಿನಿಲಯಗಳ ಸ್ಥಾಪನೆ, ಶಿಷ್ಯವೇತನ ಇತ್ಯಾದಿ ಕಾರ್ಯಕ್ರಮ-ಯೋಜನೆಗಳ ಅನುಷ್ಠಾನ ಇವರ ಪ್ರಮುಖ ಸಾಧನೆಗಳಾಗಿವೆ ಎಂದರು.
ಕೆಡಿಪಿ ಸದಸ್ಯ ಚಿಂತನ್ ಬೆಳಗೊಳ ಮಾತನಾಡಿ, ಇಂದಿರಾಗಾಂಧಿ ಅವರ ಗರೀಬಿ ಹಠಾವೋ ಘೋಷಣೆಯೂ ಸೇರಿದಂತೆ ೨೦ ಅಂಶಗಳ ಜನಪ್ರಿಯ ಕಾರ್ಯಕ್ರಮಗಳನ್ನು ದೇವರಾಜ ಅರಸು ಅವರ ಸರ್ಕಾರ ಪರಿಣಾಮಕಾರಿಯಾಗಿ ಜಾರಿಗೆ ತಂದಿತು, ಭೂಸುಧಾರಣೆ ಕಾಯಿದೆಯನ್ನು ಜಾರಿಗೆ ತಂದ ಶ್ರೇಯ ಕೂಡ ಅರಸು ಅವರದ್ದಾಯಿತು. ‘ಉಳುವವನೇ ಹೊಲದೊಡೆಯ’ ಎಂಬ ಧ್ಯೇಯ ವಾಕ್ಯದೊಂದಿಗೆ ರಾಜ್ಯದ ಸುಮಾರು ೪.೧೫ ಲಕ್ಷ ಗೇಣಿದಾರರು ಭೂಮಿಯ ಒಡೆತನ ಪಡೆಯುವಂತೆ ಮಾಡಲಾಯಿತು ಎಂದರು.ಬಿಸಿಎಂ ಇಲಾಖೆಯ ವಿದ್ಯಾರ್ಥಿ ಶ್ರೇಯಸ್ ಮಾತನಾಡಿ, ಅರಸು ಅವರು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿಎ ಪದವಿ ಪಡೆದರು. ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ ಕಲ್ಲಹಳ್ಳಿಗೆ ಹಿಂದಿರುಗಿದ ಅರಸು ಕೃಷಿಯಲ್ಲಿ ತೊಡಗಿದರು. ಆದರೆ ಸ್ವಭಾವತಃ ನಾಯಕತ್ವದ ಗುಣವನ್ನು ಹೊಂದಿದ್ದ ಅರಸು ನಂತರದ ದಿನಗಳಲ್ಲಿ ರಾಜಕೀಯಕ್ಕೆ ಧುಮುಕಿದರು ಎಂದರು.
ಬಿಸಿಎಂ ವಿದ್ಯಾರ್ಥಿನಿ ಪಾವನಿ, ಹಾಸ್ಟೆಲ್ ವಿದ್ಯಾರ್ಥಿಜಯರಾಮ್, ಕೀರ್ತಿ ಉಪನ್ಯಾಸ ನೀಡಿದರು.ಪ್ರತಿಬಾರಿ ಉಪನ್ಯಾಸಕರನ್ನು ಕರೆಸಿ ಉಪನ್ಯಾಸ ನೀಡುತ್ತಿದ್ದ ಬಿಸಿಎಂ ಇಲಾಖೆ ಈ ಬಾರಿ ಮಕ್ಕಳಿಗೆ ಮಾತನಾಡುವ ಅನುಭವ ಸಿಗಬೇಕೆಂಬ ಉದ್ದೇಶದಿಂದ ಉಪನ್ಯಾಸ ನೀಡುವ ಅವಕಾಶವನ್ನು ವಿದ್ಯಾರ್ಥಿಗಳಿಗೆ ಕಲ್ಪಿಸಿದ್ದು ವಿಶೇಷ.
ಬಿಸಿಎಂ ಇಲಾಖೆಯ ಕಲ್ಯಾಣಾಧಿಕಾರಿ ಚಂದ್ರಶೇಖರ್, ಮೇಲ್ವಿಚಾರಕಿ ನೂರ್‌ಜಹಾನ್, ಆರೋಗ್ಯ ಇಲಾಖೆಯ ಹರ್ಷ, ಲೋಕೋಪಯೋಗಿ ಇಲಾಖೆಯ ಶ್ರೀಲತಾ, ತೋಟಗಾರಿಕೆ ಇಲಾಖಾಧಿಕಾರಿಗಳು, ಬಿಸಿಎಂ ಇಲಾಖೆಯ ಮೇಲ್ವಿಚಾರಕರು, ಸಿಬ್ಬಂದಿ, ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.